ಬೆಂಗಳೂರು: ವಿವಾಹಕ್ಕೂ ಮುನ್ನ ಲೈಂಗಿಕ ಕ್ರಿಯೆ ಮಾಡಿ ವರದಕ್ಷಿಣೆ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿ ಮಾಜಿ ಬಿಗ್ ಬಾಸ್ ಸ್ಪರ್ಧಿ, ನಟಿ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.
ಗಂಡ ಹಾಗೂ ಆಕೆಯ ಮನೆಯವರು ಮತ್ತು ಪೋಷಕರಿಂದ ನಿಂದನೆ ಹಾಗೂ ಕೊಲೆ ಬೆದರಿಕೆ ಆರೋಪದಡಿ 9 ಪುಟಗಳಷ್ಟು ಆರೋಪಗಳನ್ನು ನಟಿ ಮಾಡಿದ್ದಾರೆ.
ದೂರಿನ ವಿವರ:
'ಮದುವೆಗೂ ಮುನ್ನ ಸೋಷಿಯಲ್ ಮೀಡಿಯಾದಲ್ಲಿ ಯುವಕ ಪರಿಚಯವಾಗಿದ್ದ. ಈ ಪರಿಚಯದಿಂದ ನಮ್ಮಿಬ್ಬರಲ್ಲಿ ಸಲುಗೆಗೆ ಬೆಳೆದಿತ್ತು. ಬಳಿಕ ಗ್ರಾಮೀಣ ಪ್ರತಿಭೆ ಬೆಳೆಯಬೇಕು ಎನ್ನುತ್ತಾ ಆತ ಹತ್ತಿರವಾಗಿದ್ದ. ಒಂದು ದಿನ ಏಕಾಏಕಿ ಭೇಟಿ ಮಾಡೋಣ ಎಂದು ಕರೆದಿದ್ದಾನೆ. ಕೊರೊನಾ ಹಿನ್ನೆಲೆಯಲ್ಲಿ ಹೇಗೆ ಭೇಟಿ ಮಾಡುವುದು? ಹೊರಗೆ ಹೋಗುವುದು ಕಷ್ಟ ಎಂದು ಹೇಳಿದೆ. ಹಾಗಾದರೆ ನಿಮ್ಮ ಮನೆಯಲ್ಲಿ ಭೇಟಿಯಾಗೋಣ ಎಂದಿದ್ದ. ಇದರಂತೆ ವಿವಾಹಕ್ಕೂ ಮುನ್ನ ಮನೆಗೆ ಬಂದು ಏಕಾಏಕಿ ನನ್ನನ್ನು ಬಲವಂತವಾಗಿ ಬಾಯಿ ಮುಚ್ಚಿ ಅತ್ಯಾಚಾರ ಮಾಡಿದ್ದಾನೆ.
ಈ ವೇಳೆ ನಾನು ಅಳುತ್ತಾ ಕುಳಿತಾಗ ಮದುವೆ ಮಾಡಿಕೊಳ್ಳುವುದಾಗಿ ಹೇಳಿದ್ದಾನೆ. ಇದಾದ ಬಳಿಕ ಹಲವು ಬಾರಿ ಮನೆಗೆ ಬಂದಾಗ ಅತ್ಯಾಚಾರ ಮಾಡಿದ್ದಾನೆ. ಇದೆಲ್ಲಾ ಮದುವೆಯ ಬಳಿಕ ಇಟ್ಟುಕೊಳ್ಳುವ, ಈಗ ಬೇಡವೆಂದರೂ ಈಗಾಗಲೇ ನಮಗೆ ಮದುವೆ ಆಗಿದೆ ಅಂದುಕೊಂಡಿದ್ದೇನೆ ಎಂದು ಆತ ನಂಬಿಸಿದ್ದ. ಈ ವೇಳೆ ನನಗೆ ಆರೋಗ್ಯದಲ್ಲಿ ಸಮಸ್ಯೆ ಕಂಡುಬಂದಾಗ ನನ್ನ ಫ್ಯಾಮಿಲಿ ವೈದ್ಯರ ಸಂಪರ್ಕ ಮಾಡಿ ಚಿಕಿತ್ಸೆ ಪಡೆದಿದ್ದೆ.
ಹೀಗೆ ಕೆಲವು ತಿಂಗಳ ಬಳಿಕ ಮದುವೆಯಾಗುವ ವಿಚಾರ ಮಾತನಾಡಿದ್ದೆ. ಮದುವೆ ಆಗೋಣ ಎನ್ನುತ್ತಿದ್ದವನು ನಿಧಾನವಾಗಿ ನನ್ನನ್ನು ದೂರಮಾಡಲಾರಂಭಿಸಿದ. ಸೋಷಿಯಲ್ ಮೀಡಿಯಾ, ಮೊಬೈಲ್‌ನಲ್ಲಿ ಹೀಗೆ ಎಲ್ಲಾ ಕಡೆ ಬ್ಲಾಕ್ ಮಾಡಿದ್ದಾನೆ. ಇದೇ ವಿಚಾರವಾಗಿ ನಾನು ಗಲಾಟೆ ಮಾಡಿ ಯಾಕೆ ಮೋಸ ಮಾಡುತ್ತಿದ್ದೀಯಾ? ಎಂದು ಕೇಳಿದೆ. ಆ ಬಳಿಕ ಒತ್ತಾಯದ ಮೇರೆಗೆ ನನ್ನ ಮದುವೆ ಮಾಡಿಕೊಂಡಿದ್ದ. ಇದಾದ ಬಳಿಕ ಮನೆಗೆ ಹೋದಾಗ ಮನೆಯವರ ಮುಂದೆ ನಾನು ಮದುವೆ ಆಗಿಲ್ಲ ಎಂದಿದ್ದಾನೆ. ಇದೇ ವಿಚಾರವಾಗಿ ಗಲಾಟೆಗಳು ನಡೆದವು. ನಾನು ಕೋಲಾರ ಪೊಲೀಸ್ ಠಾಣೆಯಲ್ಲಿಯೂ ದೂರು ದಾಖಲಿಸಿದ್ದೆ.
ಅವರ ಮನೆಗೆ ಹೋದ ಮೊದಲ ದಿನವೇ ವರದಕ್ಷಿಣೆ ತರುವಂತೆ ಒತ್ತಾಯ ಮಾಡಿದ್ದರು. ನನ್ನ ಜಾತಿಯನ್ನು ನಿಂದಿಸಿ, ವಾಪಸ್ ಹೋಗುವಂತೆ ಅವಮಾನ ಮಾಡಿ ಕೋಟಿ ಕೋಟಿ ರೂ ವರದಕ್ಷಿಣೆ ತರುವಂತೆ ಹೇಳಿದ್ದರು'.
ಇದೀಗ ಆರೋಪಿಯ ವಿರುದ್ಧ ಕ್ರಮ ಜರುಗಿಸಿ ನ್ಯಾಯ ಒದಗಿಸುವಂತೆ ಬಸವನಗುಡಿ ಮಹಿಳಾ ಪೊಲೀಸ್ ಠಾಣೆಯಲ್ಲಿ ನಟಿ ಮನವಿ ಮಾಡಿ ದೂರು ಸಲ್ಲಿಸಿದ್ದಾರೆ.