ಬೆಂಗಳೂರು: ನಗರದ ಕೆಲ್ಕೆರೆಯಲ್ಲಿ ತೆಪ್ಪ ಮಗುಚಿ ಕಣ್ಮರೆಯಾಗಿದ್ದ ಟೆಕ್ಕಿ ಸಚಿನ್ ಮೃತದೇಹ ಇನ್ನೂ ಕೂಡ ಪತ್ತೆಯಾಗಿಲ್ಲ. ಈ ಹಿನ್ನೆಲೆಯಲ್ಲಿ ಇಂದು ಸಹ ಶೋಧ ಕಾರ್ಯಾಚರಣೆ ಮುಂದುವರೆದಿದೆ.
ಉಲ್ಲಾಸ್ ಹಾಗೂ ಸಚಿನ್ ಎಂಬುವರು ಆತ್ಮೀಯ ಸ್ನೇಹಿತರಾಗಿದ್ದು, ನಗರದಲ್ಲಿ ಸಾಫ್ಟ್ವೇರ್ ಇಂಜಿನಿಯರ್ಗಳಾಗಿದ್ದಾರೆ. ಸಚಿನ್ ಎಲೆಕ್ಟ್ರಾನಿಕ್ ಸಿಟಿಯಲ್ಲಿ ಕೆಲಸ ಮಾಡುತ್ತಿದ್ದರೆ, ಉಲ್ಲಾಸ್ ಮಾನ್ಯತಾ ಟೆಕ್ ಪಾರ್ಕ್ನಲ್ಲಿ ಉದ್ಯೋಗದಲ್ಲಿದ್ದಾರೆ.
ಇವರಿಬ್ಬರು ವೀಕೆಂಡ್ ಹಿನ್ನೆಲೆಯಲ್ಲಿ ರಾಮಮೂರ್ತಿ ನಗರದ ಕೆಲ್ಕೆರೆ ಬಳಿ ಪಾರ್ಟಿ ಮಾಡಿದ್ದರು. ರಾತ್ರಿ ಕೆರೆ ಏರಿ ಮೇಲೆ ಇದ್ದ ತೆಪ್ಪದಲ್ಲಿ ಇಬ್ಬರೂ ನೀರಿಗಿಳಿದು 150 ಮೀ. ದೂರ ಸಾಗಿದ್ದರು. ಈ ವೇಳೆ ತೆಪ್ಪದ ಹುಟ್ಟು ನೀರಿನಲ್ಲಿ ಬಿದ್ದಿದ್ದು, ಕೈನಲ್ಲಿ ತೆಪ್ಪ ಚಲಾಯಿಸಲು ಯತ್ನಿಸಿದ್ದರು. ಈ ವೇಳೆ ತೆಪ್ಪ ಮಗುಚಿದ್ದರಿಂದ ಇಬ್ಬರೂ ನೀರಿನಲ್ಲಿ ಬಿದ್ದಿದ್ದರು. ಆಗ ಉಲ್ಲಾಸ್ ಬ್ಯಾಗ್ ಹಿಡಿದು ಈಜಿ ದಡ ಸೇರಿದ್ದು, ಸಚಿನ್ ನೀರಿನಲ್ಲಿ ಕಣ್ಮರೆಯಾಗಿದ್ದಾರೆ ಎಂದು ತಿಳಿದುಬಂದಿದೆ.
ಕೆರೆಯಿಂದ ಹೊರ ಬಂದ ಉಲ್ಲಾಸ್ ಕೂಡಲೇ ಪೊಲೀಸರು ಮತ್ತು ತನ್ನ ಸಂಬಂಧಿಗಳಿಗೆ ಫೋನ್ ಮಾಡಿ ಈ ವಿಷಯ ತಿಳಿಸಿದ್ದರು. ಕೂಡಲೇ ಪೊಲೀಸರು, ಸ್ಥಳೀಯ ಈಜುಗಾರರು ಸ್ಥಳಕ್ಕಾಗಮಿಸಿ ಅಗ್ನಿಶಾಮಕ ದಳ ಮತ್ತು ಎನ್ಡಿಆರ್ಎಫ್ಗೆ ಮಾಹಿತಿ ನೀಡಿದ್ದರು.
ನಿನ್ನೆ ಆಗ್ನಿಶಾಮಕ ದಳ ಸಚಿನ್ಗಾಗಿ ಶೋಧ ನಡೆಸಿದ್ದರೂ ಮೃತದೇಹ ಪತ್ತೆಯಾಗಿಲ್ಲ. ಬಳಿಕ ಎನ್ಡಿಆರ್ಎಫ್ ತಂಡವು ಮುಳುಗು ತಜ್ಞರೊಂದಿಗೆ ಕಾರ್ಯಾಚರಣೆ ನಡೆಸಿದರೂ ತೆಪ್ಪ ಮಾತ್ರ ಪತ್ತೆಯಾಗಿದೆ. ಸಚಿನ್ ಸುಳಿವು ಸಿಕ್ಕಿಲ್ಲ. ರಾತ್ರಿಯಾದ ಕಾರಣ ಕಾರ್ಯಾಚರಣೆ ಸ್ಥಗಿತಗೊಳಿಸಿದ್ದರು. ಈ ಬಗ್ಗೆ ರಾಮಮೂರ್ತಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.