ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿಯ ಅಭ್ಯರ್ಥಿ ಎಂದು ಬಿಂಬಿತವಾಗಿ ಕೊನೆಯ ಕ್ಷಣದಲ್ಲಿ ಟಿಕೆಟ್ ಕೈತಪ್ಪಿದ ಹಿನ್ನೆಲೆ ತೇಜಸ್ವಿನಿ ಅನಂತ್ಕುಮಾರ್ ಪಕ್ಷದ ಚಟುವಟಿಕೆಗಳಿಂದ ದೂರ ಉಳಿದಿದ್ದರು.
ಕೊನೆಯ ಹಂತದವರೆಗೂ ತೇಜಸ್ವಿನಿ ಅನಂತ್ಕುಮಾರ್ ಬಿಟ್ಟರೆ ಬೇರೆ ಯಾವುದೇ ಹೆಸರು ಕೇಳಿ ಬಂದಿರಲಿಲ್ಲ. ಆದರೆ, ವಿಸ್ಮಯ ಎಂಬಂತೆ ಶಾಸಕ ರವಿ ಸುಬ್ರಮಣ್ಯ ಅವರ ಅಣ್ಣನ ಮಗ ವಕೀಲ ಮತ್ತು ವಾಗ್ಮಿ ತೇಜಸ್ವಿ ಸೂರ್ಯರಿಗೆ ಟಿಕೆಟ್ ನೀಡಲಾಗಿತ್ತು. ಇದು ಕೆಲ ನಾಯಕರು ದಂಗಾಗುವಂತೆ ಮಾಡಿತ್ತು.
ಆದರೆ, ನಂತರದ ದಿನಗಳಲ್ಲಿ ಬಿಜೆಪಿ ಪಕ್ಷ ತೇಜಸ್ವಿನಿ ಅನಂತ್ಕುಮಾರ್ ಅವರಿಗೆ ರಾಜ್ಯ ಬಿಜೆಪಿಯ ಉಪಾಧ್ಯಕ್ಷೆ ಸ್ಥಾನ ನೀಡಿದರೂ ಸಹ ಸಕ್ರೀಯ ರಾಜಕೀಯದಿಂದ ದೂರ ಉಳಿದಿದ್ದರು. ಎಷ್ಟೇ ಆದರೂ ಪಕ್ಷದ ಸಿದ್ಧಾಂತ ಬಲ್ಲವರು ತಮಗಾದ ಅವಮಾನ ಪಕ್ಕಕ್ಕೆ ಇಟ್ಟು 'ದೇಶ ಮೊದಲು' ಎಂಬ ಘೋಷವಾಕ್ಯದ ಮೂಲಕ ಮೋದಿ ಮತ್ತೊಮ್ಮೆ ಎಂದು ಮನೆ ಮನೆ ಪ್ರಚಾರ ಆರಂಭಿಸಿದ್ದಾರೆ. ಅಭ್ಯರ್ಥಿ ತೇಜಸ್ವಿ ಸೂರ್ಯ ಪರ ಪ್ರಚಾರ ಮಾಡುತ್ತಿರುವ ತೇಜಸ್ವಿನಿ ಅನಂತ್ಕುಮಾರ್ ಅವರ ಮೇಲೆ ಜನರಿಗೆ ಮತ್ತಷ್ಟು ಅಭಿಮಾನ ಹೆಚ್ಚಾಗಿರುವುದು ಸುಳ್ಳಲ್ಲ.