ಬೆಂಗಳೂರು: ನಮಗೆ ಯಾರು ಸಪೋರ್ಟ್ ಮಾಡ್ತಾರೋ ಬಿಡ್ತಾರೋ ಅದು ಮುಖ್ಯವೇ ಅಲ್ಲ ಅಂತ ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಭಾಷಣ ಮಾಡಿರುರುವುದು ಈಗ ಬಿಜೆಪಿ ವಲಯದಲ್ಲೇ ವೈರಲ್ ಆಗಿದ್ದು, ತೇಜಸ್ವಿ ನಡೆ ಸ್ಥಳೀಯ ಬಿಜೆಪಿ ಮುಖಂಡರನ್ನು ಕೆರಳಿಸಿದೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ತೇಜಸ್ವಿ ಸೂರ್ಯ ಅಭ್ಯರ್ಥಿಯಾಗಿದ್ದೇ ಅಚ್ಚರಿ. ಅಭ್ಯರ್ಥಿಯಾದ ಮೇಲೆ ಸ್ಥಳೀಯ ಶಾಸಕರು ಬಿಜೆಪಿ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುತ್ತಿಲ್ಲ. ಈಗಾಗಲೇ ಗೆದ್ದು ಬಿಟ್ಟಿದ್ದೇನೆ ಎಂಬ ರೀತಿಯಲ್ಲಿ ವರ್ತಿಸುತ್ತಿದ್ದಾರೆ ಎಂದು ಸ್ಥಳೀಯ ಬಿಜೆಪಿ ಮುಖಂಡರು ಗರಂ ಆಗಿದ್ದಾರೆ.
ಹಿರಿಯ ನಾಯಕ ವಿ.ಸೋಮಣ್ಣ, ಶಾಸಕರಾದ ಸತೀಶ್ ರೆಡ್ಡಿ, ಉದಯ್ ಗರುಡಾಚಾರ್ ಅಲ್ಲದೇ ಯಾವ ಸ್ಥಳಿಯ ಕಾರ್ಪೋರೇಟರ್ಗಳನ್ನು ತೇಜಸ್ವಿ ಸೂರ್ಯ ಗಣನೆಗೆ ತೆಗೆದುಕೊಳ್ಳುತ್ತಿಲ್ಲ ಎನ್ನುವ ಮಾತುಗಳು ಪಕ್ಷದ ವಲಯದಲ್ಲೇ ಕೇಳಿಬರುತ್ತಿವೆ.
ಇಷ್ಟರ ನಡುವೆ ತೇಜಸ್ವಿ ಸೂರ್ಯ ಫಾರ್ ನ್ಯೂ ಬೆಂಗಳೂರು ಎಂಬ ಘೋಷವಾಕ್ಯ ಬಿಜೆಪಿ ಹಿರಿಯರನ್ನು ಇನ್ನಷ್ಟು ಕೆರಳಿಸಿದೆ. ಈ ಘೋಷವಾಕ್ಯ ನೋಡಿ ತೇಜಸ್ವಿನಿ ಅನಂತಕುಮಾರ್ ಬೇಸರಗೊಂಡಿದ್ದಾರೆ ಎನ್ನಲಾಗಿದೆ. 6 ಬಾರಿ ಇದೇ ಕ್ಷೇತ್ರವನ್ನು ಪ್ರತಿನಿಧಿಸಿದ್ದ ಅನಂತಕುಮಾರ್ ಅವರ ಹೆಸರನ್ನೇ ಮರೆಸುವ ರೀತಿಯಲ್ಲಿ ತೇಜಸ್ವಿ ಸೂರ್ಯ ಬಿಂಬಿಸಿಕೊಳ್ಳುತ್ತಿರುವುದು ಮತ್ತು ಹಿಂದೆ ಅನಂತಕುಮಾರ್ ಏನೂ ಕೆಲಸ ಮಾಡಿಯೇ ಇರಲಿಲ್ಲವೆನೋ ಎಂಬ ಭಾವನೆ ಮೂಡಿಸಲು ಪ್ರಯತ್ನಿಸುತ್ತಿರುವುದು ಅವರಿಗೆ ಇಷ್ಟವಾಗುತ್ತಿಲ್ಲ ಎಂದು ಅವರ ಆಪ್ತರು ತಿಳಿಸಿದ್ದಾರೆ.
ಇನ್ನು ಮಂಗಳವಾರ ಆಯೋಜಿಸಲಾಗಿರುವ ಅಮಿತ್ ಶಾ ರೋಡ್ ಶೋ ಕಾರ್ಯಕ್ರಮದ ಪ್ರಚಾರ ಸಾಮಗ್ರಿಗಳಲ್ಲೂ ಶಾಸಕರ, ಕಾರ್ಪೋರೇಟರ್ಗಳ ಭಾವಚಿತ್ರವನ್ನೂ ಹಾಕಿಸಿಲ್ಲ. ತೇಜಸ್ವಿನಿ ಅನಂತಕುಮಾರ್ ಅವರನ್ನೂ ಕೂಡ ವಿಶ್ವಾಸಕ್ಕೆ ತೆಗೆದುಕೊಳ್ಳುವ ಗೋಜಿಗೂ ಹೋಗಲಿಲ್ಲ ಎನ್ನಲಾಗಿದೆ.
ಇದರ ನಡುವೆ ತೇಜಸ್ವಿ ಸೂರ್ಯ ಮಾಡಿರುವ ಭಾಷಣ ಹಿರಿಯ ನಾಯಕರಲ್ಲಿ ಅಸಮಾಧಾನ ಹುಟ್ಟುಹಾಕಿದೆ. ಬರುವಂತಹ ದಿನಗಳಲ್ಲಿ ಎಲ್ಲಿಂದ ಸಪೋರ್ಟ್ ಬರುತ್ತೆ ಬಿಡುತ್ತೆ ಎನ್ನುವುದು ಇಮ್ಮೆಟೀರಿಯಲ್. ಜನ ನಿಶ್ಚಯ ಮಾಡಿದ್ದಾರೆ. ಈ ಬಾರಿ ನಾವು ಮೋದಿಗೆ ವೋಟ್ ಹಾಕಬೇಕು ಎಂದು. ಯಾರು ಸಪೋರ್ಟ್ ಮಾಡುತ್ತಾರೋ ಬಿಡುತ್ತಾರೋ ಅನ್ನುವುದು ಇಲ್ಲಿ ವಿಷಯವಲ್ಲ. ಜನ ಈಗಾಗಲೇ ನಿರ್ಧರಿಸಿ ಬಿಟ್ಟಿದ್ದಾರೆ. ಜನರಿಗೆ ಮತ ಹಾಕಲು ಸಹಾಯ ಮಾಡುವ ವ್ಯವಸ್ಥೆ ಮಾಡಬೇಕು ಅಷ್ಟೇ. ಪಕ್ಷವನ್ನು ಮೀರಿ ಈ ಬಾರಿ ಚುನಾವಣೆ ನಡೆಯಲಿದೆ. ಇದು ದೇಶದ ಚುನಾವಣೆ ಆಗಿದೆ ಎಂದು ಭಾಷಣ ಮಾಡಿದ್ದಾರೆ. ಇದು ಸ್ಥಳೀಯ ನಾಯಕರನ್ನು ಕೆರಳಿಸಿದೆ ಎನ್ನಲಾಗಿದೆ.