ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಮ್ಮೆಲ್ಲರ ನಾಯಕ. ರಾಜ್ಯ ಬಿಜೆಪಿಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದಾರೆ. ಹಾಗಾಗಿ ಅವರ ಬದಲಾವಣೆ ಕುರಿತಾದ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದು ಬಿಜೆಪಿ ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಹೇಳಿದ್ದಾರೆ.
ಯುವ ಮೋರ್ಚಾ ಕಾರ್ಯಕಾರಿಣಿ ಸಭೆಯಲ್ಲಿ ಪಾಲ್ಗೊಂಡುಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ನಲ್ಲಿ ದಲಿತ ಮುಖ್ಯಮಂತ್ರಿ ವಿಚಾರದ ಚರ್ಚೆಯಾಗುತ್ತಿದ್ದು, ಬಿಜೆಪಿಯಲ್ಲಿಯೂ ಅಂತಹ ಚರ್ಚೆ ನಡೆಯಲಿದೆಯಾ ಎಂಬ ವಿಚಾರಕ್ಕೆ ಪ್ರತಿಕ್ರಿಯೆ ನೀಡಿ, ರಾಜ್ಯದ ಮುಖ್ಯಮಂತ್ರಿಗಳು ನಮ್ಮೆಲ್ಲರ ನಾಯಕರಾಗಿದ್ದಾರೆ. ಯಡಿಯೂರಪ್ಪ ಅವರ ನಾಯಕತ್ವ ಪ್ರಶ್ನಾತೀತವಾಗಿದೆ. ಹಾಗಾಗಿ ಬೇರೆ ಪ್ರಶ್ನೆಗಳು ಉದ್ಭವಿಸುವುದಿಲ್ಲ ಎಂದರು.
ಮುಂಬರುವ ಚುನಾವಣೆಗೆ ತಯಾರಿ:
ಯುವ ಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್ ನೇತೃತ್ವದಲ್ಲಿ ಯಶಸ್ವಿಯಾಗಿ ಕರ್ನಾಟಕದಲ್ಲಿ ಯುವ ಮೋರ್ಚಾ ಕೆಲಸ ಮಾಡುತ್ತಿದೆ. ಮುಂಬರಲಿರುವ ಜಿಲ್ಲಾ ಮತ್ತು ತಾಲೂಕು ಪಂಚಾಯತಿ, ಬೆಂಗಳೂರಿನ ಚುನಾವಣೆಗಳನ್ನು ಎದುರಿಸಲು ಯುವಮೋರ್ಚಾ ರಾಜ್ಯಾದ್ಯಂತ ಮತ್ತಷ್ಟು ಬೇರೂರಬೇಕು. ಗಟ್ಟಿಯಾಗಿ ಕೆಲಸ ಮಾಡಬೇಕು ಎನ್ನುವ ಉದ್ದೇಶದಿಂದ ಇಂದು ಸಭೆ ನಡೆಸಲಾಗಿದೆ. 21ನೇ ಶತಮಾನದಲ್ಲಿ ಆಗುತ್ತಿರುವ ಬದಲಾವಣೆಗೆ ಯುವಮೋರ್ಚಾವನ್ನು ತಯಾರು ಮಾಡಲು ಇವತ್ತಿನ ಕಾರ್ಯಕಾರಣಿ ನಿರ್ಣಯಗಳನ್ನು ತೆಗೆದುಕೊಂಡು ಕೆಲಸ ಮಾಡುತ್ತಿದೆ ಎಂದರು.
ಉಳಿದೆರಡು ಪಕ್ಷದ ಘಟಕಕ್ಕೂ ಬಿಜೆಪಿ ಯುವ ಘಟಕಕ್ಕೂ ವ್ಯತ್ಯಾವಿದೆ:
ಬಿಜೆಪಿ ಯುವ ಘಟಕಕ್ಕೂ ಕಾಂಗ್ರೆಸ್ ಮತ್ತು ಜೆಡಿಎಸ್ನ ಯುವ ಘಟಕಕ್ಕೂ ಸಾಕಷ್ಟು ವ್ಯತ್ಯಾಸವಿದೆ. ನಮ್ಮ ಪಕ್ಷದಲ್ಲಿ ಸಾಮಾನ್ಯ ಪರಿವಾರದ ದಲಿತ ಯುವಕನನ್ನು ಗುರುತಿಸಿ ನಾಯಕತ್ವವನ್ನು ಬೆಳೆಸುವ ಉದ್ದೇಶದಿಂದ ರಾಜ್ಯದ ಯುವಮೋರ್ಚಾ ಅಧ್ಯಕ್ಷರನ್ನಾಗಿ ಡಾ. ಸಂದೀಪ್ ಅವರನ್ನು ಮಾಡಿದೆ. ಆದರೆ ಕಾಂಗ್ರೆಸ್ ಯುವ ಘಟಕದಲ್ಲಿ ಯಾರು ಅಧ್ಯಕ್ಷರು ಎನ್ನುವ ಚರ್ಚೆ ಕಳೆದೊಂದು ವರ್ಷದಿಂದ ನಡೆಯುತ್ತಿದೆ. ಒಬ್ಬ ನಾಯಕ ಅವರ ಬಾಲಂಗೋಚಿ, ಮತ್ತೊಬ್ಬ ನಾಯಕ ಅವರ ಬಾಲಂಗೋಚಿಯನ್ನು ನೇಮಕ ಮಾಡಬೇಕು ಎಂದು ಓಡಾಡುತ್ತಿದ್ದಾರೆ. ಇದು ಕಾಂಗ್ರೆಸ್ನಲ್ಲಿ ನಡೆಯುತ್ತಿರುವ ಪರಂಪರೆ. ಚುನಾವಣೆ ನಡೆಸಿ ಅದನ್ನೆ ಫ್ರಾಡ್ ಎಂದರು. ಚುನಾವಣೆಯಲ್ಲಿ ಗೆದ್ದವರು ಯಾರೋ, ಕಡೆಗೆ ಅಧ್ಯಕ್ಷರಾದವರು ಯಾರೋ ಈ ರೀತಿ ಗೊಂದಲಮಯ ನಾಯಕತ್ವದ ಸಂಸ್ಕೃತಿ ಕಾಂಗ್ರೆಸ್ ಯುವಘಟಕದಿಂದಲೇ ಇದು ಪ್ರಾರಂಭವಾಗಲಿದೆ ಎಂದು ಟೀಕಿಸಿದರು.
ಇನ್ನೂ ಜೆಡಿಎಸ್ ನಲ್ಲಿ ಯುವ ಘಟಕದ ಅಧ್ಯಕ್ಷತೆ ಸಿಗಬೇಕೆಂದರೆ ಆ ವ್ಯಕ್ತಿಗೆ ಈಗಾಗಲೇ ಮಕ್ಕಳು ಆಗಿರಬೇಕು. ಇಲ್ಲದಿದ್ದರೆ ನಿಮಗೆ ಅರ್ಹತೆಯೇ ಇಲ್ಲ. ಹೀಗಾಗಿ ರಾಜ್ಯದ ಯುವಜನತೆ ಕಾಂಗ್ರೆಸ್ ಜೆಡಿಎಸ್ ಬಿಜೆಪಿ ನಡುವೆ ಇರುವ ವ್ಯತ್ಯಾಸವನ್ನು ಪರಿಗಣಿಸಿ ಬಿಜೆಪಿಗೆ ಹೆಚ್ಚಿನ ಬೆಂಬಲ ಕೊಡುತ್ತಿದ್ದಾರೆ ಎಂದರು.