ಬೆಂಗಳೂರು: ಒಮಿಕ್ರೋನ್ ಭೀತಿಯ ಹಿನ್ನೆಲೆಯಲ್ಲಿ ತಾಂತ್ರಿಕ ಸಲಹೆ ಸಮಿತಿಯು (ಟಿಎಸಿ) ಆರೋಗ್ಯ ಸಚಿವ ಡಾ.ಕೆ.ಸುಧಾಕರ್ ಅವರಿಗೆ ಕೆಲವು ಶಿಫಾರಸುಗಳನ್ನು ಮಾಡಿದ್ದು, ಈ ಬಗ್ಗೆ ಆರೋಗ್ಯಾಧಿಕಾರಿಗಳು ಮತ್ತು ಸಮಿತಿ ಸದಸ್ಯರ ಜೊತೆ ವಿಧಾನಸೌಧದಲ್ಲಿ ಸಭೆ ನಡೆಸಿದರು.
ಪ್ರಮುಖವಾಗಿ, ಸರ್ಕಾರದ ಸೇವೆಗಳನ್ನು ಪಡೆಯಲು ನಾಗರಿಕರು ಎರಡು ಡೋಸ್ ಲಸಿಕೆ ತೆಗೆದುಕೊಳ್ಳುವುದನ್ನು ಕಡ್ಡಾಯಗೊಳಿಸಿ ಎಂದು ಸರ್ಕಾರಕ್ಕೆ ತಿಳಿಸಿದೆ. ಅದರ ಜೊತೆಗೆ, ಆತಂಕದಿಂದ ಶಾಲೆ, ಕಾಲೇಜುಗಳನ್ನು ಈಗಲೇ ಮುಚ್ಚುವ ಅಗತ್ಯವಿಲ್ಲ. ಒಂದು ವೇಳೆ ಒಮಿಕ್ರೋನ್ ಕೋವಿಡ್ ಸೋಂಕು ವರದಿಯಾದಲ್ಲಿ ಮಾತ್ರ ಮುಂದಿನ ಕ್ರಮ ಕೈಗೊಳ್ಳಬೇಕು ಎಂದು ತಿಳಿಸಿದೆ.
ಇದನ್ನೂ ಓದಿ: ಓಮಿಕ್ರಾನ್ ಬಗ್ಗೆ ಸರ್ಕಾರದಿಂದ ತುರ್ತು ಕ್ರಮ, ಲಾಕ್ಡೌನ್ ಪ್ರಸ್ತಾವನೆಯೇ ಇಲ್ಲ: ಸಿಎಂ ಬೊಮ್ಮಾಯಿ
- ಪಡಿತರ, ಪೆಟ್ರೋಲ್, ಡೀಸೆಲ್, ವೇತನ, ಪಿಂಚಣಿ, ನೀರು ಸಂಪರ್ಕ ಪಡೆಯಲು ವ್ಯಾಕ್ಸಿನ್ ಎರಡು ಡೋಸ್ ಕಡ್ಡಾಯ ಮಾಡಿ.
- ಸಾರ್ವಜನಿಕ ಸಾರಿಗೆ ಸೇವೆ ಬಳಕೆಗೂ ಎರಡು ಡೋಸ್ ಲಸಿಕೆ ಕಡ್ಡಾಯವಾಗಿ ಪಡೆದಿರಬೇಕು.
- ಶಾಲಾ ಮಕ್ಕಳಿಗೆ ವಾರಕ್ಕೆ ಶೇ.5 ಕೋವಿಡ್ ಪರೀಕ್ಷೆ ಕಡ್ಡಾಯ ಮಾಡಬೇಕು.
- ಹೊರಾಂಗಣದಲ್ಲಿ ನಡೆಸುವ ಸಭೆ, ಸಮಾರಂಭಗಳಲ್ಲಿ 500ಕ್ಕಿಂತ ಹೆಚ್ಚು ಜನರು ಭಾಗಿಯಾಗಲು ಅವಕಾಶ ನೀಡಬಾರದು.
- ಜನದಟ್ಟಣೆಯ ಪ್ರದೇಶಗಳಲ್ಲಿ ಕಡ್ಡಾಯ ಕೋವಿಡ್ ತಪಾಸಣೆ ಮಾಡಬೇಕು.
- ಒಳಾಂಗಣ ಸಭಾಂಗಣದಲ್ಲಿ ನಡೆಸುವ ಸಮಾರಂಭಗಳಲ್ಲಿ 200 ಮಂದಿಗೆ ಮಾತ್ರ ಅವಕಾಶ ನೀಡಬೇಕು.
- ಮಾಲ್, ಬಸ್ ನಿಲ್ದಾಣ, ರೈಲ್ವೇ ನಿಲ್ದಾಣ, ವಸತಿ ಗೃಹಗಳಲ್ಲಿ ವಿಶೇಷ ಲಸಿಕಾ ಅಭಿಯಾನ ನಡೆಸಬೇಕು.
- ಒಮಿಕ್ರೋನ್ ವೈರಾಣು ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ ಹರಡದಂತೆ ಕ್ರಮ ವಹಿಸಬೇಕು.
- ಕಳೆದ 14 ದಿನಗಳ ಹಿಂದೆ ಬಂದ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕಡ್ಡಾಯ ಆರ್‌ಟಿ-ಪಿಸಿಆರ್ ಟೆಸ್ಟ್ ಮಾಡಬೇಕು.
- ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ನೆಗೆಟಿವ್ ವರದಿ ಇದ್ದರೂ 7 ದಿನ ಸಾಂಸ್ಥಿಕ ಕ್ವಾರಂಟೈನ್ ಕಡ್ಡಾಯಗೊಳಿಸಬೇಕು.
- ರೋಗ ಲಕ್ಷಣಗಳು ಇರುವ ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಪ್ರತ್ಯೇಕ ಚಿಕಿತ್ಸೆಗೆ ಕ್ರಮ ಕೈಗೊಳ್ಳಬೇಕು.
- ಮನೆಯಲ್ಲಿ ಕ್ವಾರಂಟೈನ್ ಇರುವವರ ಮೇಲೆ ನಿಗಾ ಇಡಬೇಕು.
- ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಕೋವಿಡ್ ಪಾಸಿಟಿವ್ ಬಂದಲ್ಲಿ ಜಿನೋಮಿಕ್ ಸ್ವೀಕ್ವೆನ್ಸ್ ಟೆಸ್ಟ್ ಗೆ ಒಳಪಡಿಸಬೇಕು.
- ಬೌರಿಂಗ್ ಆಸ್ಪತ್ರೆಯಲ್ಲಿ ಪ್ರತ್ಯೇಕ ಒಮಿಕ್ರಾನ್ ವೈರಾಣು ಚಿಕಿತ್ಸೆ ಸೌಲಭ್ಯಕ್ಕೆ ವ್ಯವಸ್ಥೆ ಮಾಡಬೇಕು.