ಬೆಂಗಳೂರು : ಕಳೆದ ಮೂರು ವರ್ಷದಿಂದ ನೆನಗುದಿಗೆ ಬಿದ್ದಿದ್ದ ಶಿಕ್ಷಕರ ವರ್ಗಾವಣೆಗೆ ಗ್ರೀನ್ ಸಿಗ್ನಲ್ ಸಿಕ್ಕಿದೆ. ಈಗಾಗಲೇ ನೀಡಿರೋ ಶೆಡ್ಯೂಲ್ಡ್‌ನಂತೆ ವರ್ಗಾವಣೆ ಪ್ರಕ್ರಿಯೆ ನಡೆಯಲಿದೆ.
ವರ್ಗಾವಣೆ ವಿಚಾರವಾಗಿ ಹಲವಾರು ಎಂಎಲ್‌ಸಿಗಳು ನನ್ನ ಭೇಟಿ ಮಾಡಿ, ವರ್ಗಾವಣೆಗೆ ತಡೆ ನೀಡುವಂತೆ ಮನವಿ ಮಾಡಿದ್ದರು. ಕಡ್ಡಾಯ ವರ್ಗಾವಣೆ ತಪ್ಪು ಎಂದಿದ್ರು. ಆದರೆ, ಯಾವುದೇ ಒತ್ತಡಕ್ಕೆ ನಾನು ಮಣಿಯುವುದಿಲ್ಲ. ಈ ಬಾರಿ ಶಿಕ್ಷಕರ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ ಎಂದು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಗುಬ್ಬಿ ಶ್ರೀನಿವಾಸ್ ಮಾಹಿತಿ ನೀಡಿದ್ದಾರೆ.
ಕೆಲ ಶಿಕ್ಷಕರು ವರ್ಗಾವಣೆ ವಿಚಾರವಾಗಿ ಆನ್ಲೈನ್ನಲ್ಲಿ ತಪ್ಪು ಮಾಹಿತಿ ತುಂಬಿರುವ ವಿಚಾರವಾಗಿ ಪ್ರತಿಕ್ರಿಯಿಸಿದ ಸಚಿವರು, ಈ ಕುರಿತು ಮಾನಿಟರಿಂಗ್ ಮಾಡಲಾಗುತ್ತಿದೆ. ಕ್ರಾಸ್ ಚೆಕಿಂಗ್ ಮಾಡಿ, ತಪ್ಪಿತಸ್ಥರ ವಿರುದ್ಧ ಶಿಸ್ತುಕ್ರಮ ಕೈಗೊಳ್ಳಲಾಗುವುದು ಅಂತಾ ತಿಳಿಸಿದರು.
ಆರ್‌ಟಿಇ ಅಡಿಯಲ್ಲಿ ಶುಲ್ಕ ವಸೂಲಾತಿ
ಆರ್‌ಟಿಇ ಅಡಿಯಲ್ಲಿ ದಾಖಲಾದ ಮಕ್ಕಳಿಂದ ಶಾಲೆಯಲ್ಲಿ ಶುಲ್ಕ ವಸೂಲಾತಿ ವಿಚಾರವಾಗಿ ಉತ್ತರಿಸಿದ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಗುಬ್ಬಿ ಶ್ರೀನಿವಾಸ್, ಈ ಕುರಿತು ದೂರು ಬಂದಲ್ಲಿ ಶಾಲೆಯ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳುತ್ತೇವೆ. 600 ಕೋಟಿಯಲ್ಲಿ ಈಗಾಗಲೇ 312 ಕೋಟಿ ನೀಡಲಾಗಿದೆ. ಸುಮಾರು 300 ಕೋಟಿ ಹಣ ಇಲಾಖೆಯಿಂದ ಬಿಡುಗಡೆ ಆಗಬೇಕಿದ್ದು, ಆ ಪ್ರಕ್ರಿಯೆಯೂ ಶುರುವಾಗಿದೆ ಎಂದು ತಿಳಿಸಿದರು.
ಸರ್ಕಾರಕ್ಕೆ ಹೊರೆಯಾಗ್ತಿದೆಯಾ ಸೈಕಲ್ ಭಾಗ್ಯ.?
ಕಳೆದ ವರ್ಷ 2,53,941 ಬಾಲಕರು ಹಾಗೂ 2,37,765 ಬಾಲಕಿಯರಿಗೆ ಸೈಕಲ್ ವಿತರಣೆ ಮಾಡಲಾಗಿತ್ತು. ಹುಡುಗರ ಸೈಕಲ್ ಬೆಲೆ 3,457 ಹಾಗೂ ಬಾಲಕಿಯರ ಸೈಕಲ್ ಬೆಲೆ 3,674 ಇತ್ತು. ಆದರೀಗ ಸೈಕಲ್ ದರದಲ್ಲೂ ಹೆಚ್ಚಳವಾಗಿದೆ. ಬಾಲಕರ ಸೈಕಲ್‌ಗೆ 169 ರೂ. ಬಾಲಕಿಯರ ಸೈಕಲ್‌ಗೆ 176 ರೂ. ಹೆಚ್ಚಾಗಿದೆ. ಈ ಬಾರಿ ಒಟ್ಟು 5,04,525 ಸೈಕಲ್ ವಿತರಿಸಬೇಕು. ಸರ್ಕಾರಕ್ಕೆ ದರ ಏರಿಕೆ ಹೊರೆಯಾಗಲಿದ್ದು, ಹೀಗಾಗಿ ಈ ವರ್ಷವೂ ಸೈಕಲ್ ವಿತರಣೆಯಲ್ಲಿ ವಿಳಂಬವಾಗಲಿದೆ ಎಂದರು.
ICSE ಶಾಲೆಯಲ್ಲಿ ಕಡ್ಡಾಯ ಕನ್ನಡ ಕಲಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಇಲಾಖೆ ಪ್ರಧಾನ ಕಾರ್ಯದರ್ಶಿ ಉಮಾಶಂಕರ್, ರಾಜ್ಯ ಸರ್ಕಾರದಿಂದ ಆದೇಶ ನೀಡಲಾಗಿದೆ. ಕನ್ನಡವನ್ನು ಸೆಕೆಂಡ್ ಲಾಂಗ್ವೇಜ್ ಆಗಿ ಕಲಿಸಲು ಆದೇಶ ಹೊರಡಿಸಲಾಗಿದೆ. ಈ ಆದೇಶದ ಕುರಿತು ಕೆಲ ICSE ಶಾಲೆಗಳು ಅಪಸ್ವರ ಎತ್ತಿವೆ. ಅಂತಹ ಶಾಲೆಗಳಿಗೆ ದಂಡ ಹಾಕಲಾಗುವುದು, ಜೊತೆಗೆ ಮಾನ್ಯತೆ ಹಿಂಪಡೆಯಲಾಗುವುದು ಎಂದು ಹೇಳಿದರು.