ಬೆಂಗಳೂರು: ನಗರದಲ್ಲಿ ಇಂದಿನಿಂದ (ಆ.23ರಿಂದ) ಶಾಲೆಗಳು ಆರಂಭವಾಗುತ್ತಿದ್ದರೂ ಬಿಬಿಎಂಪಿ ವ್ಯಾಪ್ತಿಯಲ್ಲಿ ಕೋವಿಡ್-19 ಕಾರ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ವಲಯ ಅಧಿಕಾರಿಗಳು ಬಿಡುಗಡೆಗೊಳಿಸುತ್ತಿಲ್ಲ. ಈ ಕಾರಣದಿಂದ ಅತ್ತ ದರಿ ಇತ್ತ ಪುಲಿ ಎನ್ನುವಂತಿದೆ ಪಾಲಿಕೆ ವ್ಯಾಪ್ತಿಯ ಶಿಕ್ಷಕರ ಪರಿಸ್ಥಿತಿ.
ಪಾಲಿಕೆ ವಿಶೇಷ ಆಯುಕ್ತರು(ಶಿಕ್ಷಣ) ಈಗಾಗಲೇ ಕೋವಿಡ್-19 ಕೆಲಸಗಳಿಂದ ಪ್ರೌಢಶಾಲೆ ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ಬಿಡುಗಡೆ ಮಾಡುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಈವರೆಗೆ ವಲಯ ಅಧಿಕಾರಿಗಳಿಂದ ಮಾತ್ರ ಶಿಕ್ಷಕರಿಗೆ ಸ್ಪಷ್ಟ ನಿರ್ಧಾರ ತಲುಪಿಲ್ಲ ಎಂದು ತಿಳಿದು ಬಂದಿದೆ.
ಕೋವಿಡ್-19 ಸೋಂಕು ನಿರ್ವಹಣೆಗೆ ಎಷ್ಟೇ ಸಿಬ್ಬಂದಿ ನಿಯೋಜನೆಯಾಗಿದ್ದರೂ ಸಾಲುತ್ತಿಲ್ಲ. ಕೊರೊನಾ ಸೋಂಕಿತರ ಹೋಂ ಐಸೊಲೆಟ್, ಸೋಂಕಿತರಿಗೆ ಔಷಧ ಕಿಟ್ ಕೊಡಲು, ಮೂರಕ್ಕಿಂತ ಹೆಚ್ಚು ಜನರಲ್ಲಿ ಸೋಂಕು ಪತ್ತೆಯಾದ ಅಪಾರ್ಟ್‌ಮೆಂಟ್, ಹಾಸ್ಟೆಲ್ ಹಾಗೂ ಇನ್ನಿತರ(ವೈಯಕ್ತಿಕ ಮನೆ) ಕಡೆ ಕಂಟೈನ್‌ಮೆಂಟ್ ಜಾರಿಗೊಳಿಸಲು ಶಿಕ್ಷಕರನ್ನು ಈಗಲೂ ಬಳಸಿಕೊಳ್ಳಲಾಗುತ್ತಿದೆ ಎಂದು ತಿಳಿದು ಬಂದಿದೆ.
ಕೋವಿಡ್-19 ಸಮೀಕ್ಷಾ ಕಾರ್ಯದ ತಂಡಗಳಲ್ಲೂ ಪಾಲಿಕೆ ವ್ಯಾಪ್ತಿಯ ಶಿಕ್ಷಕರನ್ನು ಬಳಸಿಕೊಳ್ಳಲಾಗುತ್ತಿದೆ. ಹೀಗಾಗಿ, ಶಿಕ್ಷಕರು ಹಾಗೂ ಮುಖ್ಯ ಶಿಕ್ಷಕರನ್ನು ಬಿಡುಗಡೆ ಮಾಡಿದರೆ ಕೊರೊನಾ ಸೋಂಕು ನಿರ್ವಹಣೆಗೆ ಸಿಬ್ಬಂದಿ ಕೊರತೆ ಉಂಟಾಗಲಿದೆ ಎಂದು ವಲಯ ಅಧಿಕಾರಿಗಳು ಶಿಕ್ಷಕರನ್ನು ಬಿಡುಗಡೆಗೊಳಿಸಲು ಹಿಂದೇಟು ಹಾಕುತ್ತಿದ್ದಾರೆ ಎನ್ನಲಾಗಿದೆ.
ಅತಂತ್ರರಾದ ಶಿಕ್ಷಕರು: ಪಾಲಿಕೆ ವ್ಯಾಪ್ತಿಯಲ್ಲಿ 9 ಮತ್ತು 10ನೇ ತರಗತಿಗಳು ಮಾತ್ರ ಪ್ರಾರಂಭವಾಗುತ್ತಿದ್ದು, ವಿದ್ಯಾರ್ಥಿಗಳ ಲಭ್ಯತೆ ಆಧಾರದ ಮೇಲೆ ಶಿಕ್ಷಕರನ್ನು ನೇಮಿಸಲಾಗುತ್ತಿದೆ. ಈಗಾಗಲೇ ಪಾಲಿಕೆಯ ಕೋವಿಡ್ ಕೆಲಸದಿಂದ ಶಿಕ್ಷಕರನ್ನು ಬಿಡುಗಡೆಗೊಳಿಸುವಂತೆ ಸೂಚಿಸಲಾಗಿದೆ. ಆದರೆ, ವಲಯ ಅಧಿಕಾರಿಗಳಿಂದ ಈವರೆಗೂ ಸ್ಪಷ್ಟ ನಿರ್ಧಾರ ಬಾರದ ಹಿನ್ನೆಲೆಯಲ್ಲಿ ಶಿಕ್ಷಕರು ಶಾಲೆಗೆ ಹೋಗಲಾಗದೆ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಅಲ್ಲದೆ, ಕೋವಿಡ್-19 ಕಾರ್ಯಕ್ಕೂ ತೆರಳಲು ಆಗದೆ ಅತಂತ್ರ ಸ್ಥಿತಿಯಲ್ಲಿದ್ದಾರೆ ಎನ್ನುವ ಮಾಹಿತಿ ದೊರೆತಿದೆ.