ಬೆಂಗಳೂರು: ವಿಧಾನಪರಿಷತ್ ಬೆಂಗಳೂರು ಶಿಕ್ಷಕರ ಕ್ಷೇತ್ರ ಹಾಗೂ ಕರ್ನಾಟಕ ಆಗ್ನೇಯ ಪದವೀಧರರ ಕ್ಷೇತ್ರದ ಮತ ಎಣಿಕೆ ಕಾರ್ಯ ಬೆಂಗಳೂರು ಸರ್ಕಾರಿ ಕಲಾ ಕಾಲೇಜಿನಲ್ಲಿ ಆರಂಭವಾಗಿದೆ.
ಅ.28 ರಂದು ನಡೆದ ಚುನಾವಣೆಯ ನಡೆಯುತ್ತಿದ್ದು, ಎಣಿಕೆ ಕೇಂದ್ರದಲ್ಲಿ 14 ಮೇಜುಗಳ ವ್ಯವಸ್ಥೆ ಮಾಡಲಾಗಿದೆ. ಪ್ರತಿ ಮೇಜಿಗೆ ಒಬ್ಬರು ಮೇಲ್ವಿಚಾರಕರು ಹಾಗೂ ಇಬ್ಬರು ಎಣಿಕೆ ಸಹಾಯಕರನ್ನು ನಿಯೋಜಿಸಲಾಗಿದೆ.
ಬೆಂಗಳೂರು ಶಿಕ್ಷಕರ ಕ್ಷೇತ್ರಕ್ಕೆ ಬಿಜೆಪಿಯಿಂದ ಪುಟ್ಟಣ್ಣ, ಕಾಂಗ್ರೆಸ್ನಿಂದ ಪ್ರವೀಣ್ ಪೀಟರ್ ಮತ್ತು ಜೆಡಿಎಸ್ನಿಂದ ವಕೀಲ ಎ.ಪಿ. ರಂಗನಾಥ್ ಸೇರಿ ಒಟ್ಟು 9 ಅಭ್ಯರ್ಥಿಗಳು ಸ್ಪರ್ಧಿಸಿದ್ದಾರೆ. ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಬಿಜೆಪಿಯಿಂದ ಚಿದಾನಂದ್ ಗೌಡ, ಕಾಂಗ್ರೆಸ್ನಿಂದ ರಮೇಶ್ ಬಾಬು ಮತ್ತು ಜೆಡಿಎಸ್ನಿಂದ ಚೌಡರೆಡ್ಡಿ ತೂಪಲ್ಲಿ ಸೇರಿ ಒಟ್ಟು 15 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಈ ಪೈಕಿ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಹಿರಿಯೂರು ಬಿಜೆಪಿ ಶಾಸಕಿ ಪೂರ್ಣಿಮಾ ಅವರ ಪತಿ ಟಿ. ಡಿ. ಶ್ರೀನಿವಾಸ್ ಮತ್ತು ಬಿಜೆಪಿ ಮುಖಂಡ ಲೇಪಾಕ್ಷಿ ಬಂಡಾಯ ಅಭ್ಯರ್ಥಿಗಳಾಗಿ ಸ್ಪರ್ಧಿಸಿದ್ದಾರೆ.
ವಿಧಾನಪರಿಷತ್ ಚುನಾವಣೆಯಲ್ಲಿ ಮತಚೀಟಿಗಳಲ್ಲಿ ದಾಖಲಾದ ಪ್ರಾಶಸ್ತ್ಯದ ಮತಗಳ ಆಧಾರದಲ್ಲಿ ಗೆದ್ದ ಅಭ್ಯರ್ಥಿಯನ್ನು ಆಯ್ಕೆ ಮಾಡಲಾಗುತ್ತದೆ. ಮೊದಲಿಗೆ ಮೊದಲ ಪ್ರಾಶಸ್ತ್ಯದ ಮತಗಳ ಎಣಿಕೆ ಮಾಡಲಾಗುತ್ತದೆ. ನಿಗದಿತ ಕೋಟಾ ತಲುಪಿದವರು ಗೆದ್ದ ಅಭ್ಯರ್ಥಿಯಾಗಲಿದ್ದಾರೆ. ಬೆಳಗ್ಗೆ 8 ಕ್ಕೆ ಮತ ಎಣಿಕೆ ಆರಂಭವಾದರೂ ಸಂಜೆಯ ವೇಳೆಗೆ ಫಲಿತಾಂಶ ಹೊರ ಬೀಳುವ ಸಾಧ್ಯತೆಯಿದೆ.
ಪದವೀಧರರು ಮತ್ತು ಶಿಕ್ಷಕರು ಈ ಚುನಾವಣೆಗಳಲ್ಲಿ ಮತ ಚಲಾಯಿಸಿದ್ದಾರೆ. 21,963 ಮತದಾರರಿರುವ ಬೆಂಗಳೂರು ಶಿಕ್ಷಕರ ಕ್ಚೇತ್ರದಲ್ಲಿ ಶೇ. 66.18 ರಷ್ಟು ಮತದಾನವಾಗಿದೆ. ಇನ್ನು 1,09,039 ಮತದಾರರಿರುವ ಆಗ್ನೇಯ ಪದವೀಧರ ಕ್ಷೇತ್ರದಲ್ಲಿ ಶೇ.74.97 ರಷ್ಟು ಮತದಾನ ಆಗಿದೆ.