
ಬೆಂಗಳೂರು: 68ನೇ ಕರ್ನಾಟಕ ರಾಜ್ಯೋತ್ಸವ ನಿಮಿತ್ತ ಈ ಬಾರಿ ರಾಜ್ಯದ ವಿವಿಧೆಡೆಯ 68 ಸಾಧಕರಿಗೆ, ಸಂಘ ಸಂಸ್ಥೆಗಳಿಗೆ ರಾಜ್ಯೋತ್ಸವ ಪ್ರಶಸ್ತಿ ಘೋಷಣೆಯಾಗಿದೆ. ಇಂದು ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯಲಿದ್ದು, ಅದಕ್ಕೂ ಮುನ್ನ ಪ್ರತಿ ವರ್ಷದಂತೆ ಈ ಬಾರಿಯೂ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆಯಾದ ಸಾಧಕರಿಗೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಚಹಾ ಕೂಟ ಏರ್ಪಡಿಸಲಾಯಿತು. ಪ್ರಶಸ್ತಿ ಪುರಸ್ಕೃತರನ್ನು ಬಸ್ಗಳಲ್ಲಿ ಚಹಾಕೂಟ ಏರ್ಪಡಿಸಿದ್ದ ವಿಧಾನಸೌಧಕ್ಕೆ ಕರೆತರಲಾಯಿತು.
68 ನೇ ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಪ್ರಯುಕ್ತ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ನಲ್ಲಿ ಇಂದು ಸಂಜೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯೋತ್ಸವ ಪ್ರಶಸ್ತಿ ಪಡೆದ ಸಾಧಕರು, ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಸೇರಿದಂತೆ ಸರ್ಕಾರದ ಹಿರಿಯ ಅಧಿಕಾರಿಗಳು ಹಾಗೂ ಇತರ ಗಣ್ಯರಿಗೆ ಚಹಾ ಕೂಟ ಆಯೋಜಿಸಿದ್ದರು. ಈ ಸಂತೋಷ ಕೂಟದಲ್ಲಿ ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್, ಗೃಹ ಸಚಿವ ಡಾ. ಜಿ. ಪರಮೇಶ್ವರ್, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ. ಹೆಚ್. ಮುನಿಯಪ್ಪ, ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ತಂಗಡಗಿ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಗೋವಿಂದರಾಜು, ನಸೀರ್ ಅಹ್ಮದ್, ಮುಖ್ಯ ಕಾರ್ಯದರ್ಶಿ ವಂದಿತಾ ಶರ್ಮಾ ಸೇರಿದಂತೆ ಇತರ ಗಣ್ಯರು ಭಾಗವಹಿಸಿದರು.

ಈ ವೇಳೆ ಸಚಿವ ಶಿವರಾಜ್ ತಂಗಡಗಿ ಅವರು ಧರಿಸಿದ್ದ ವೇಸ್ ಕೋಟ್ ಅನ್ನು ಕೈಯಿಂದ ಹಿಡಿದು, ಡಿಸಿಎಂ ಡಿ. ಕೆ. ಶಿವಕುಮಾರ್ ವೇಸ್ ಕೋಟ್ ಚೆನ್ನಾಗಿದೆ ಎಂದಿದ್ದು ಗಮನಸೆಳೆಯಿತು. ಪ್ರಶಸ್ತಿ ಪುರಸ್ಕೃತರನ್ನು ಮಾತನಾಡಿಸಿದ ಸಿಎಂ, ಡಿಸಿಎಂ ಫೋಟೋಗಳಿಗೆ ಪೋಸ್ ಕೊಟ್ಟರು. ಸಂತೋಷ ಕೂಟದ ನಂತರ ಅಲ್ಲಿಂದ ರಾಜ್ಯೋತ್ಸವ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ನಡೆಯುವ ರವೀಂದ್ರ ಕಲಾಕ್ಷೇತ್ರಕ್ಕೆ ಗಣ್ಯರು ಹಾಗೂ ಸಾಧಕರನ್ನು ಒಟ್ಟಿಗೆ ಕರೆದೊಯ್ಯಲಾಯಿತು.

ಈ ಬಾರಿ ಹೊಸ ಸಂಪ್ರದಾಯಕ್ಕೆ ಮುನ್ನುಡಿ ಬರೆದ ಸರ್ಕಾರ, ವಿಧಾನಸೌಧದ ಮುಂಭಾಗದಲ್ಲಿ ಪ್ರಶಸ್ತಿ ಪುರಸ್ಕೃತರಿಗೆ ಗೃಹ ಇಲಾಖೆಯಿಂದ ಪೊಲೀಸ್ ಸಮೂಹ ವಾದ್ಯ ಮೇಳವನ್ನು ಆಯೋಜಿಸಿತ್ತು. ಪೊಲೀಸ್ ಬ್ಯಾಂಡ್ ಎಲ್ಲರ ಗಮನ ಸೆಳೆಯಿತು.

ಈ ಬಾರಿ 68ನೇ ಕರ್ನಾಟಕ ರಾಜ್ಯೋತ್ಸವವನ್ನು ಆಚರಿಸುತ್ತಿದ್ದು, ಮೈಸೂರು ರಾಜ್ಯ ಎಂದು ಇದ್ದ ರಾಜ್ಯಕ್ಕೆ ಕರ್ನಾಟಕ ಎನ್ನುವ ಹೆಸರು ನಾಮಕರಣಗೊಂಡು ಇವತ್ತಿಗೆ 50 ವರ್ಷಗಳಾಗಿವೆ. ಆ ಹಿನ್ನೆಲೆ ಕರ್ನಾಟಕ ನಾಮಕರಣದ ಸುವರ್ಣ ಮಹೋತ್ಸವವನ್ನೂ ಆಚರಿಸಲಾಗುತ್ತಿದೆ. ಆ ಹಿನ್ನೆಲೆ ಈ ಬಾರಿ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ 68 ಸಾಧಕರಿಗೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ರಾಜ್ಯೋತ್ಸವ ಪ್ರಶಸ್ತಿಯನ್ನು ಘೋಷಿಸಿತ್ತು.
ಇದನ್ನೂ ಓದಿ : ಚಾಮರಾಜನಗರ: ಇಬ್ಬರು ಗಣ್ಯರಿಗೆ ರಾಜ್ಯೋತ್ಸವ ಪ್ರಶಸ್ತಿ: ಒಬ್ಬರು ಸಾಹಿತಿ, ಇನ್ನೊಬ್ಬರು ವಿಜ್ಞಾನಿ