ಬೆಂಗಳೂರು: ಏಳು-ಬೀಳುಗಳ ನಡುವೆ ಅಧಿಕಾರ ಹಿಡಿದ ಬಿಜೆಪಿ ಸರ್ಕಾರಕ್ಕೆ ಆರಂಭದಿಂದಲೂ ಇದುವರೆಗೂ ದೊಡ್ಡ ದೊಡ್ಡ ಸವಾಲುಗಳೇ ಎದುರಾಗಿವೆ. ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಪ್ರಮಾಣವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ ಭೀಕರ ಪ್ರವಾಹ ಉಂಟಾಯಿತು. ಅದಾದ ನಂತರ ಸಚಿವ ಸಂಪುಟ ವಿಸ್ತರಣೆ, ಉಪಚುನಾವಣೆ ಬಂತು. ಇದೆಲ್ಲವೂ ಮುಗಿಯುವಷ್ಟರಲ್ಲಿ ಇದೀಗ ಕೋವಿಡ್ ಸಂಕಷ್ಟಕ್ಕೆ ಸಿಲುಕಿದ್ದು, ಇದರ ನಡುವೆ ಸರ್ಕಾರವನ್ನು ಮುನ್ನೆಡೆಸಬೇಕಾದ ಸಂದಿಗ್ಧ ಸ್ಥಿತಿಯನ್ನು ನಿಭಾಯಿಸುತ್ತಿದ್ದಾರೆ.
ಆರ್ಥಿಕ ಸಂಕಷ್ಟಕ್ಕೆ ಸಿಲುಕಿರುವ ಸರ್ಕಾರಕ್ಕೆ ಪ್ರಸ್ತುತ ದೊಡ್ಡ ಸವಾಲೇ ಎದುರಾಗಿದೆ. ರಾಜ್ಯದ ಸ್ವಂತ ತೆರಿಗೆ ಪ್ರತಿ ತಿಂಗಳು 9,333 ಕೋಟಿ ರೂ. ಸಂಗ್ರಹವಾಗಬೇಕಿತ್ತು. ಆದರೆ, ಪ್ರಸ್ತುತ ಸರಾಸರಿ 6,268 ಕೋಟಿ ರೂ. ಮಾತ್ರ ಸಂಗ್ರಹವಾಗುತ್ತಿದೆ. ಇದರಿಂದಾಗಿ 3 ತಿಂಗಳ ಅವಧಿಯಲ್ಲಿ ಸುಮಾರು 9 ಸಾವಿರ ಕೋಟಿ ರೂ. ನಷ್ಟ ಸಂಭವಿಸಿದೆ. ಕೋವಿಡ್ನಿಂದಾಗಿ ತೆರಿಗೆ ಸಂಗ್ರಹಣೆ ಕುಸಿದಿದ್ದು, ಅದರಿಂದ ಉಂಟಾಗಿರುವ ಆರ್ಥಿಕ ಸಂಕಷ್ಟ ಸರಿದೂಗಿಸಲು ಮೊದಲ ತ್ರೈಮಾಸಿಕದಲ್ಲಿ 8 ಸಾವಿರ ಕೋಟಿ ರೂ. ಸಾಲವನ್ನು ಆರ್ಬಿಐನಿಂದ ಸರ್ಕಾರ ಪಡೆದಿದೆ. ರಾಜ್ಯ ಅಭಿವೃದ್ಧಿ ಸಾಲವನ್ನು ಆರ್ಬಿಐನಿಂದ ವಿವಿಧ ಬಡ್ಡಿ ದರದಲ್ಲಿ 3 ತಿಂಗಳಿನಲ್ಲಿ 7 ಬಾರಿ ಪಡೆದಿದ್ದು, ಆರ್ಥಿಕ ವರ್ಷ ಆರಂಭದಲ್ಲಿಯೇ ಇಷ್ಟು ಪ್ರಮಾಣದ ಸಾಲ ಪಡೆದಿರುವುದು ಇದೇ ಮೊದಲು ಎಂದು ಮೂಲಗಳು ತಿಳಿಸಿವೆ.
ಆರ್ಥಿಕ ವರ್ಷದ ಆರಂಭದಲ್ಲಿ ಏಪ್ರಿಲ್ 7 ಕ್ಕೆ ಮೊದಲ ಬಾರಿ 1 ಸಾವಿರ ಕೋಟಿ ರೂ.ಯನ್ನು ಸರ್ಕಾರ ಸಾಲವಾಗಿ ಪಡೆದಿದೆ. ಅಲ್ಲಿಂದ 7 ಬಾರಿ 5 ರಿಂದ 11 ವರ್ಷಗಳ ಮರು ಪಾವತಿಯ ಅವಧಿ ಹಾಗೂ ಶೇ.5.7 ರಿಂದ 7.93 ಬಡ್ಡಿ ದರದಲ್ಲಿ ಸಾಲ ಪಡೆಯಲಾಗಿದೆ. ಕಡಿಮೆ ಬಡ್ಡಿ ಹಾಗೂ ಅಯವ್ಯಯದಲ್ಲಿ ವಿಧಿಸಿಕೊಂಡಿರುವ ಮಿತಿಯೊಳಗೆ ಸಾಲ ಮಾಡಲಾಗಿದೆ ಎಂದು ಹೇಳಲಾಗುತ್ತಿದೆ. ತೆರಿಗೆ ಸಂಗ್ರಹ ಕಡಿಮೆಯಾಗಿರುವ ಪರಿಣಾಮ ಸರ್ಕಾರದ ಮೇಲೆ ಉಂಟಾಗಿರುವ ಆರ್ಥಿಕ ಹೊರೆ ತಪ್ಪಿಸಿಕೊಳ್ಳಲು ಸಾಲ ಮಾಡದ ಹೊರತು ಬೇರೆ ಮಾರ್ಗವೇ ಇಲ್ಲ. ಹಾಗಾಗಿ, ಆರ್ ಬಿಐನಿಂದ ಸಾಲ ಮಾಡಿದ್ದು, ಬೇರೆ ಕಡೆ ಸಾಲಕ್ಕೆ ಹೋಗಿಲ್ಲ.
ಸರ್ಕಾರಿ ನೌಕರರ ವೇತನ, ಪಿಂಚಣಿ, ವಿವಿಧ ಸಹಾಯಧನ, ಕೊರೊನಾ ಸೋಂಕಿಗೆ ಔಷಧ ಹಾಗೂ ಚಿಕಿತ್ಸಾ ಉಪಕರಣಗಳ ಖರೀದಿ, ಹೀಗೆ ವೆಚ್ಚ ಹೆಚ್ಚುತ್ತಿದ್ದು, ಸಾಲ ಮಾಡಬೇಕಾದ ಅನಿವಾರ್ಯತೆ ನಿರ್ಮಾಣವಾಗಿದೆ. ಅಬಕಾರಿ ತೆರಿಗೆ 3,846 ಕೋಟಿ ರೂ., ನೋಂದಣಿ ಮತ್ತು ಮುದ್ರಾಂಕ 1141.44 ಕೋಟಿ ರೂ., ಮೋಟಾರು ವಾಹನ 571 ಕೋಟಿ ರೂ. ಜೂನ್ ಅಂತ್ಯಕ್ಕೆ ಸಂಗ್ರಹವಾಗಿದೆ. ಇಷ್ಟುದಿನ ಲಾಕ್ ಡೌನ್ ಇದ್ದಕಾರಣ ಅಷ್ಟಾಗಿ ತೆರಿಗೆ ಸಂಗ್ರಹವಾಗಿಲ್ಲ. ಮುಂದಿನ ದಿನಗಳಲ್ಲಿ ಆರ್ಥಿಕ ಚಟುವಟಿಕೆಯಲ್ಲಿ ಚೇತರಿಕೆಯಾದರೆ ಅಷ್ಟೇ ಸಂಪನ್ಮೂಲ ಸಂಗ್ರಹವಾಗಲಿದೆ. ಇಲ್ಲದಿದ್ದರೆ ಆದಾಯ ಖೋತಾ ಆಗಿ ಸರ್ಕಾರಿ ನೌಕರರಿಗೆ ಸಂಬಳ ನೀಡುವುದೂ ಕಷ್ಟವಾಗಬಹುದು.
ಇದೀಗ ರಾಜ್ಯದಲ್ಲಿ ಲಾಕ್ಡೌನ್ ಸಡಿಲಗೊಳಿಸಿದ್ದರಿಂದ ಆರ್ಥಿಕ ಚಟುವಟಿಕೆ ಚುರುಕುಗೊಳ್ಳಲಿದೆ. ಇದರಿಂದಾಗಿ ತೆರಿಗೆ ಸಂಗ್ರಹದಲ್ಲಿ ಸುಧಾರಣೆ ಆಗುವ ನಿರೀಕ್ಷೆ ಇಟ್ಟುಕೊಳ್ಳಲಾಗಿದೆ. ರಾಜ್ಯದ 2020-21 ಸಾಲಿನ ಬಜೆಟ್ ಅಂದಾಜಿನ ಪ್ರಕಾರ, ಹಲವು ತೆರಿಗೆ ಮೂಲಗಳಿಂದ ರಾಜ್ಯ ಸರ್ಕಾರಕ್ಕೆ ಪ್ರತಿ ತಿಂಗಳು ಸುಮಾರು 15 ಸಾವಿರ ಕೋಟಿ ರೂ. ಸಂಪನ್ಮೂಲ ಸಂಗ್ರಹವಾಗಬೇಕು. ಆದರೆ, ಕೋವಿಡ್ನಿಂದಾಗಿ ತೆರಿಗೆ ಸಂಗ್ರಹಕ್ಕೆ ಹಿನ್ನಡೆ ಉಂಟಾಗಿದೆ.