ಹೊಸಕೋಟೆ: ನಗರ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘದ ಟಿಎಪಿಸಿಎಂಎಸ್ ಚುನಾವಣೆ ಪ್ರಕ್ರಿಯೆ ಆರಂಭವಾಗಿದ್ದು, ತಾಲೂಕಿನಲ್ಲಿ ಮತ್ತೆ ರಾಜಕೀಯ ಜಿದ್ದಾಜಿದ್ದಿ ಏರ್ಪಟ್ಟಿದೆ.
ಇದೇ ತಿಂಗಳ 18ರಂದು ಹೊಸಕೋಟೆ ನಗರದ ತಾಲೂಕು ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಟಿಎಪಿಸಿಎಂಎಸ್ ಚುನಾವಣೆಗೆ ಮುಹೂರ್ತ ನಿಗದಿಯಾಗಿದ್ದು, ಸೊಸೈಟಿಯ ಆಡಳಿತ ಚುಕ್ಕಾಣಿ ಹಿಡಿಯಲು ತಾಲೂಕಿನಲ್ಲಿ ರಾಜಕೀಯ ಪಕ್ಷಗಳು ಲೆಕ್ಕಾಚಾರ ಶುರು ಮಾಡಿವೆ. ಸೊಸೈಟಿ ಆರಂಭ ಆದಾಗಿಂದಲೂ ಬಚ್ಚೇಗೌಡರ ಬಣವೇ ಹೆಚ್ಚು ಬಾರಿ ಅಧಿಕಾರ ಹಿಡಿದಿರುವ ಪರಿಣಾಮ ಸೊಸೈಟಿಯಲ್ಲಿ ಅವರ ಬೆಂಬಲಿಗರೇ ಹೆಚ್ಚಿನ ಷೇರುದಾರರಾಗಿದ್ದಾರೆ.
ಈ ಮೊದಲು ಅಭ್ಯರ್ಥಿಗಳನ್ನು ಅವಿರೋಧವಾಗಿ ಆಯ್ಕೆ ಮಾಡಲಾಗುತ್ತಿತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಈ ಸಂಪ್ರದಾಯ ಬದಲಾಗಿದೆ. ಚುನಾವಣೆಗಳು ನಡೆಯುತ್ತಿದ್ದು, ರಾಜಕೀಯ ಬಣ್ಣ ಪಡೆಯುತ್ತಿವೆ. ಸೊಸೈಟಿಯ ಆಡಳಿತ ಚುಕ್ಕಾಣಿ ಹಿಡಿಯಲು ಅಭ್ಯರ್ಥಿಗಳು ಎಲ್ಲಾ ಬಗೆಯ ಕಸರತ್ತು, ತಂತ್ರಗಾರಿಕೆ ಮಾಡುತ್ತಿದ್ದಾರೆ.
ನಗರಸಭೆ ಮತ್ತು ಟೌನ್ ಬ್ಯಾಂಕ್ಗಳಲ್ಲಿ ಅಧಿಕಾರ ಕಳೆದುಕೊಂಡಿರುವ ಶಾಸಕ ಶರತ್ ಬಚ್ಚೇಗೌಡ ಮತ್ತು ಅವರ ಬೆಂಬಲಿಗರು ಟಿಎಪಿಸಿಎಂಎಸ್‌ನ ಅಧಿಕಾರ ಯಾವುದೇ ಕಾರಣಕ್ಕೂ ಎಂಟಿಬಿ ನಾಗರಾಜ್ ಅವರ ಬೆಂಬಲಿಗರ ಪಾಲಾಗಬಾರದು ಎಂಬ ಜಿದ್ದಿಗೆ ಬಿದ್ದಿದ್ದಾರೆ. ಆದರೆ ಎಂಟಿಬಿ ನಾಗರಾಜ್ ಉಪಚುನಾವಣೆಯಲ್ಲಿ ಸೋತ ನಂತರ ತಾಲೂಕಿನಲ್ಲಿ ತಮ್ಮ ಅಸ್ತಿತ್ವ ಮರುಸ್ಥಾಪಿಸಿಕೊಳ್ಳಲು ಎಲ್ಲಾ ಪ್ರಯತ್ನಗಳನ್ನೂ ಮಾಡುತ್ತಿದ್ದಾರೆ.
ಟಿಎಪಿಸಿಎಂಎಸ್‌ನಲ್ಲಿ ಒಟ್ಟು 6,300 ಷೇರುದಾರರಿದ್ದಾರೆ. ಸಹಕಾರಿ ಸಂಘಗಳ ನಿಯಮದ ಪ್ರಕಾರ ಈ ಬಾರಿ 2,663 ಷೇರುದಾರರಿಗೆ ಮಾತ್ರ ಮತ ಚಲಾವಣೆ ಹಕ್ಕು ದೊರೆತಿದೆ. ಈ ಬಾರಿಯ ಚುನಾವಣೆಯಲ್ಲಿ ಬೆಂಬಲಿತ ಅಭ್ಯರ್ಥಿಗಳನ್ನು ಗೆಲ್ಲಿಸಲು ಎಂಟಿಬಿ ನಾಗರಾಜ್ ಎಲ್ಲಾ ಬಗೆಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ. ಸತತ 20 ವರ್ಷಗಳಿಂದ ಆಡಳಿತದಲ್ಲಿರುವ ಬಚ್ಚೇಗೌಡ ಬೆಂಬಲಿಗರು ತಮ್ಮ ಗೆಲುವಿನ ನಾಗಾಲೋಟ ಮುಂದುವರಿಸಲು ಎಲ್ಲಾ ರೀತಿಯಲ್ಲೂ ಪೈಪೋಟಿ ನೀಡುತ್ತಿದ್ದಾರೆ.