ಬೆಂಗಳೂರು: ಮಾಜಿ ಸಚಿವ ತನ್ವೀರ್ ಸೇಠ್ ಇಂದು ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಭೇಟಿ ಮಾಡಿ ಚರ್ಚಿಸಿದರು.
ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಭೇಟಿ ಮಾಡಿ, ಮೈಸೂರು ಮೇಯರ್ ಆಯ್ಕೆ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಆದ ಹಿನ್ನಡೆಯ ಕುರಿತು ಮಾಹಿತಿ ನೀಡಿದರು.
ಮೈಸೂರು ಮೇಯರ್ ಆಯ್ಕೆ ಈ ಸಲ ಕಾಂಗ್ರೆಸ್ ಪಾಲಾಗಬೇಕಿತ್ತು. ಆದರೆ ಕಡೆಯ ಕ್ಷಣದಲ್ಲಿ ಜೆಡಿಎಸ್ ಪಕ್ಷ ಕಾಂಗ್ರೆಸ್ ಸದಸ್ಯರನ್ನು ತನ್ನತ್ತ ಸೆಳೆದುಕೊಂಡು ಮೇಯರ್ ಪದವಿಯನ್ನು ಪಡೆದುಕೊಳ್ಳುವಲ್ಲಿ ಸಫಲವಾಗಿದೆ. ಕಳೆದೆರಡು ಅವಧಿಗೆ ಕಾಂಗ್ರೆಸ್ ಬೆಂಬಲದೊಂದಿಗೆ ಮೇಯರ್ ಅಭ್ಯರ್ಥಿಯನ್ನು ಆಯ್ಕೆ ಮಾಡಿಕೊಂಡಿದ್ದ ಜೆಡಿಎಸ್ ಈ ಬಾರಿ ಮೇಯರ್ ಸ್ಥಾನವನ್ನು ಕಾಂಗ್ರೆಸ್‌ಗೆ ಬಿಟ್ಟು ಕೊಡಬೇಕಿತ್ತು. ಆದರೆ ಕೊಟ್ಟ ಮಾತಿನಂತೆ ನಡೆದುಕೊಳ್ಳದೆ ಜೆಡಿಎಸ್ ಕಾಂಗ್ರೆಸ್‌ಗೆ ಕೈಕೊಟ್ಟಿದೆ. ಮೇಯರ್ ಆಯ್ಕೆ ಸಂಬಂಧ ಕಾಂಗ್ರೆಸ್ ಪಕ್ಷದ ವತಿಯಿಂದ ಮಾಜಿ ಸಚಿವ ತನ್ವೀರ್ ಸೇಠ್ರನ್ನು ಉಸ್ತುವಾರಿಯನ್ನಾಗಿ ನೇಮಿಸಲಾಗಿತ್ತು. ಆದರೆ ಅದರಲ್ಲಿ ಅವರು ವೈಫಲ್ಯ ಕಂಡ ಕಾರಣ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಸ್ಪಷ್ಟೀಕರಣ ಕೇಳಿದ್ದಾರೆ.
ಅಲ್ಲದೇ ಮೇಯರ್ ಆಯ್ಕೆ ವಿಚಾರದಲ್ಲಿ ತನ್ವೀರ್ ಸೇಠ್ರಿಂದ ಲೋಪವಾಗಿದ್ದು ನೋಟಿಸ್ ಕೊಡುವುದಾಗಿಯೂ ಈಗಾಗಲೇ ತಿಳಿಸಿದ್ದಾರೆ.
ಐದು ಪುಟಗಳ ವರದಿಯೊಂದಿಗೆ ನಿನ್ನೆಯೇ ಕೆಪಿಸಿಸಿ ಕಚೇರಿಗೆ ಸೇಟ್ ಆಗಮಿಸಿದ್ದರು. ಆದರೆ ಕೆಪಿಸಿಸಿ ಅಧ್ಯಕ್ಷ ಡಿಕೆಶಿ ಕೋಲಾರ ಜಿಲ್ಲೆಗೆ ತೆರಳಿದ್ದ ಕಾರಣ ಭೇಟಿ ಸಾಧ್ಯವಾಗಿರಲಿಲ್ಲ.
ಇದನ್ನೂ ಓದಿ: ಒಳ್ಳೆಯ ಸಮಯವೇಕೆ?, ಸಿಡಿ ಇದ್ರೆ ನಾಳೆಯೇ ಬಿಡುಗಡೆ ಮಾಡ್ಲಿ: ಯೋಗೇಶ್ವರ್ಗೆ ಹೆಚ್ಡಿಕೆ ಸವಾಲ್
ಮೇಯರ್ ಆಯ್ಕೆ ವಿಚಾರದಲ್ಲಿ ನಾನು ಸಾಕಷ್ಟು ಪ್ರಯತ್ನ ಮಾಡಿದ್ದಾಗಿ ಅವರು ಹೇಳಿಕೊಂಡಿದ್ದಾರೆ. ಆದರೆ ಸಿದ್ದರಾಮಯ್ಯ ಮೇಲಿನ ಮುನಿಸು ಈ ರೀತಿ ಉದ್ದೇಶಪೂರ್ವಕವಾಗಿ ಮೇಯರ್ ಸ್ಥಾನ ತಪ್ಪಿಸುವಂತೆ ಮಾಡಿದೆ ಎಂದು ಹೇಳಲಾಗುತ್ತಿದೆ. ತನ್ವೀರ್ ಸೇಠ್ ಮೇಲೆ ನೇರ ಆರೋಪ ಕೇಳಿ ಬರುತ್ತಿದ್ದು, ಇವರೊಂದಿಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹೆಸರು ಕೂಡ ತಳುಕು ಹಾಕಿಕೊಂಡು ದೊಡ್ಡಮಟ್ಟದಲ್ಲಿ ಸುದ್ದಿಯಾಗಿದೆ.
ಮೈಸೂರು ಮೇಯರ್ ಆಯ್ಕೆ ವಿಚಾರದಲ್ಲಿ ಆದ ಹಿನ್ನೆಡೆಗೆ ಮುನಿಸಿಕೊಂಡಿರುವ ಸಿದ್ದರಾಮಯ್ಯ ಕೂಡ ಸಕ್ರಿಯವಾಗಿ ಪಕ್ಷದ ಚಟುವಟಿಕೆಯಲ್ಲಿ ಭಾಗಿಯಾಗುತ್ತಿಲ್ಲ. ಇದೀಗ ಇಡೀ ಪ್ರಕರಣಕ್ಕೆ ಒಂದು ಅಂತ್ಯ ಹಾಡುವ ಉದ್ದೇಶದಿಂದ ಡಿ.ಕೆ.ಶಿವಕುಮಾರ್ ತನ್ವೀರ್ ಸೇಠ್ರನ್ನ ಕರೆದು ವಿಚಾರಣೆ ನಡೆಸಿದ್ರು. ಈ ವಿಚಾರಣೆ ಕೂಡ ಕೇವಲ ತೋರಿಕೆಗೆ ನಡೆಯುತ್ತಿದೆ ಎಂಬ ಆರೋಪಗಳು ಕೂಡ ಕೇಳಿಬರುತ್ತಿವೆ.