ಬೆಂಗಳೂರು: ಲಂಬಾಣಿ ತಾಂಡಾ, ಹಟ್ಟಿ, ಸೋಲಿಗ, ಕಾಡು ಕುರುಬರಿಗೆ ಹಕ್ಕು ಪತ್ರಗಳನ್ನು ನೀಡಿ ಅವರ ಊರುಗಳನ್ನು ಕಂದಾಯ ಗ್ರಾಮ ಮಾನ್ಯ ನೀಡಿ ನಿವಾಸಿಗಳು ಬಯಸುವ ಹೆಸರನ್ನೇ ಆ ಗ್ರಾಮಗಳಿಗೆ ಇಡಲಾಗುತ್ತದೆ ಎಂದು ಕಂದಾಯ ಸಚಿವ ಆರ್ ಅಶೋಕ್ ಹೇಳಿದರು.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಬಿಜೆಪಿ ಸದಸ್ಯ ಶಶಿಲ್ ನಮೋಶಿ ಪ್ರಶ್ನೆಗೆ ಉತ್ತರಿಸಿದ ಸಚಿವರು, ಲಂಬಾಣಿ ತಾಂಡಾ, ಗೊಲ್ಲರಹಟ್ಟಿ, ಸೋಲಿಗ, ಕಾಡು ಕುರುಬ ಸಮುದಾಯ ಊರಿಂದ ಹೊರಗಿದೆ. ಕೆಆರ್ಎಸ್ ಜಲಾಶಯ ಕಟ್ಟಲು ಬಂದವರು ವಾಪಸ್ ಹೋಗಲಿಲ್ಲ. 60 ವರ್ಷ ವಾಸವಾಗಿದ್ದರೂ ಅವರ ಜಾಗಕ್ಕೆ ಗ್ರಾಮ ಎಂದು ಗುರುತಿಸಲಿಲ್ಲ ಮತ್ತು ಸವಲತ್ತು ಕಲ್ಪಿಸಲಿಲ್ಲ. ಆದರೆ ನಾವು ಗ್ರಾಮ ಎಂದು ಘೋಷಿಸಿದ್ದೇವೆ ಎಂದರು.
ಅದೇ ರೀತಿ 1,061 ತಾಂಡಾಗಳು ಕಲ್ಯಾಣ ಕರ್ನಾಟದಲ್ಲಿದೆ. ಈ ತಾಂಡಾಗಳನ್ನು ಗ್ರಾಮ ಮಾಡಬೇಕಾದಲ್ಲಿ ನೋಟಿಫೈ ಮಾಡಿ ಗೆಜೆಟ್ ನೋಟಿಫಿಕೇಷನ್ ಮಾಡಬೇಕು. ಗ್ರಾಮ ಮಾಡಲು ಅಲ್ಲಿ 50 ಕುಟುಂಬ, 250 ಜನಸಂಖ್ಯೆ, 100 ಎಕರೆ ಜಾಗ ಇರಬೇಕು ಎನ್ನುವ ನಿಯಮ ಮಾಡಿದ್ದೇವೆ ಎಂದು ತಿಳಿಸಿದರು.
50 ಸಾವಿರ ಹಕ್ಕುಪತ್ರ ನೀಡುವ ಗುರಿ: ಅಲ್ಲದೇ, 2091 ತಾಂಡಾಗಳ ಪ್ರಾಥಮಿಕ ಅಧಿಸೂಚನೆ ಹೊರಡಿಸಿದ್ದು, 1166 ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ಇನ್ನು 925 ಪ್ರಾಥಮಿಕ ಅಧಿಸೂಚನೆಗೆ ಬಂದಿದೆ. ಇವೆಲ್ಲಾ ಮುಖ್ಯ ವಾಹಿನಿಗೆ ಬರಬೇಕು. ಇನ್ನು ಎರಡು ತಿಂಗಳಿನಲ್ಲಿ 50 ಸಾವಿರ ಜನಕ್ಕಾದರೂ ಹಕ್ಕುಪತ್ರ ದಾಖಲೆ ಕೊಡಬೇಕು ಎಂದುಕೊಂಡಿದ್ದೇನೆ. ಉಪ ನೋಂದಣಾಧಿಕಾರಿ ಕಚೇರಿಯಲ್ಲಿ ಇವರಿಗೆ ಹಕ್ಕುಪತ್ರ ನೋಂದಣಿ ಮಾಡಲು ಅವಕಾಶ ಮಾಡಿಕೊಡುವ ಚಿಂತನೆ ಇದೆ. ಪ್ರತಿ ದಿನ ಒಂದು ಗಂಟೆ ಇವರ ನೋಂದಣಿಗೆ ಮೀಸಲಿಡಲು ಚಿಂತನೆ ಇದೆ. ಎರಡು ತಿಂಗಳಿನಲ್ಲಿ ಇದಕ್ಕೆಲ್ಲಾ ಅಂತಿಮ ರೂಪ ಕೊಡಲಿದ್ದೇವೆ ಎಂದು ವಿವರಿಸಿದರು.
ಈ ವೇಳೆ ತಾಂಡಾಗಳಿಗೆ ಕಂದಾಯ ಗ್ರಾಮದ ಮಾನ್ಯತೆ ಕೊಟ್ಟಾಗ ಮಾತ್ರ ಅವರ ಗ್ರಾಮಗಳು ದಾಖಲೆಯಲ್ಲಿ ಸಿಗಲು ಸಾಧ್ಯ. ಹಾಗಾಗಿ ಕಂದಾಯ ಗ್ರಾಮದ ಮಾನ್ಯತೆ ನೀಡಬೇಕು ಎಂದು ಪ್ರತಿಪಕ್ಷ ನಾಯಕ ಹರಿಪ್ರಸಾದ್ ಒತ್ತಾಯಿಸಿದರು. ಇದಕ್ಕೆ ಸಹಮತ ವ್ಯಕ್ತಪಡಡಿಸಿದ ಸಚಿವ ಅಶೋಕ್, ನಿಮ್ಮ ಸಲಹೆ ಸ್ವೀಕಾರ ಮಾಡುತ್ತೇವೆ. ತಾಂಡಾಗಳನ್ನು ಕಂದಾಯ ಇಲಾಖೆಗೆ ಪರಿಗಣಿಸುವ ಮನವಿ ಸ್ವೀಕಾರ ಮಾಡಿ, ಆ ಜನರು ಹೇಳುವ ಹೆಸರನ್ನೇ ಗ್ರಾಮಗಳಿಗೆ ಇಡಲಾಗುತ್ತದೆ ಎಂದರು.
ಹೆಚ್ಚುವರಿ ಸರ್ವೆಯರ್ ನೇಮಕ: ಬೆಂಗಳೂರು ಮತ್ತು ಬೆಂಗಳೂರು ಗ್ರಾಮಾಂತರದಲ್ಲಿ ದರಕಾಸ್ತು ಜಮೀನು ಪೋಡಿ ಮಾಡಲು ದಾಖಲಾತಿಗಳ ವ್ಯತ್ಯಾಸದಿಂದ ಸರ್ವೆ ಕಾರ್ಯ ವಿಳಂಬವಾಗುತ್ತಿದೆ. ಹೀಗಾಗಿ ಹೆಚ್ಚುವರಿ ಸರ್ವೆಯರ್ಗಳ ನೇಮಕ ಮಾಡಿ ವಿಳಂಬ ಸರಿಪಡಿಸಲಾಗುತ್ತದೆ ಎಂದು ಸಚಿವ ಆರ್ ಅಶೋಕ್ ಹೇಳಿದರು.
ಇದನ್ನೂ ಓದಿ: ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ವಿರುದ್ಧ ಎಫ್ಐಆರ್ ದಾಖಲಿಸಿ ತನಿಖೆಗೆ ಆದೇಶ
ಬಿಜೆಪಿ ಸದಸ್ಯ ಪಿ ಮುನಿರಾಜುಗೌಡ ಪ್ರಶ್ನೆಗೆ ಉತ್ತರಿಸಿದ ಅವರು, ಸದಸ್ಯರು ಪೋಡಿ ವಿಳಂಬ ತಪ್ಪಿಸಲು ಕ್ರಮ ಕೈಗೊಳ್ಳುವ ಬೇಡಿಕೆ ಇಟ್ಟಿದ್ದಾರೆ. 200 ಎಕರೆ ಜಮೀನಿಗೆ 400 ಎಕರೆ ದಾಖಲೆ ಇದೆ. ಇದರಿಂದ ಸಮಸ್ಯೆಯಾಗುತ್ತಿದೆ. ಹಾಗಾಗಿ ಸರ್ವೆ ವಿಳಂಬವಾಗುತ್ತಿದೆ. ಹೊಸದಾಗಿ ಮೂರು ಸಾವಿರ ಲೈಸೆನ್ಸ್ ಸರ್ವೇಯವರನ್ನು ನೇಮಕ ಮಾಡಿದ್ದು, ಹೆಚ್ಚು ಅಗತ್ಯ ಇರುವ ಕಡೆ ಹೆಚ್ಚು ಜನರ ನೇಮಕ ಮಾಡಲಿದ್ದೇವೆ ಎಂದರು.
ಡಿಸಿ, ಎಸಿ, ತಹಶೀಲ್ದಾರ್ಗೆ ಟಾರ್ಗೆಟ್: ಜಿಲ್ಲಾಧಿಕಾರಿ, ತಹಸೀಲ್ದಾರ್ ನ್ಯಾಯಾಲಯದಲ್ಲಿ ಪ್ರಕರಣಗಳ ನಡೆಸಲು ಟಾರ್ಗೆಟ್ ನೀಡಲಾಗಿದೆ. ತಿಂಗಳಿಗೆ ಡಿಸಿ 75 ಕೇಸ್ ಹಾಗೂ 100 ಕೇಸ್ ನಡೆಸಲು ಎಸಿ, ತಹಸೀಲ್ದಾರ್ಗೆ ಟಾರ್ಗೆಟ್ ನೀಡಲಾಗಿದೆ. ಪ್ರಕರಣಗಳ ತ್ವರಿತ ಇತ್ಯರ್ಥಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅಶೋಕ್ ತಿಳಿಸಿದರು.
ಜೆಡಿಎಸ್ ಸದಸ್ಯ ಸಿಎನ್ ಮಂಜೇಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ಜಿಲ್ಲಾಧಿಕಾರಿಗಳು ಮಾತ್ರ ಡಿಸಿ ಕಚೇರಿಗಳಲ್ಲಿ ಪ್ರಕರಣಗಳ ವಿಚಾರಣೆ ನಡೆಸುತ್ತಿದ್ದಾರೆ. ಇವರ ಜೊತೆ ಈಗ ಅಪರ ಜಿಲ್ಲಾಧಿಕಾರಿಗಳಿಗೂ ಕೇಸ್ ನಡೆಸುವ ಅಧಿಕಾರ ನೀಡಿದ್ದೇವೆ. ವಾರಕ್ಕೆ ಎರಡು ದಿನ ಕಡ್ಡಾಯ ಕೋರ್ಟ್ ನಡೆಸಲು ಸೂಚನೆ ನೀಡಿದ್ದೇವೆ. ಶಿರಸ್ತೇದಾರರಿಗೂ ಕೋರ್ಟ್ ನಡೆಸಲು ಅವಕಾಶ ಕಲ್ಪಿಸಿದ್ದೇವೆ. ದಾಖಲೆಗಳಲ್ಲಿನ ಅಕ್ಷರ ತಿದ್ದುಪಡಿ ಮಾಡುವ ಅಧಿಕಾರವನ್ನು ತಹಸೀಲ್ದಾರ್ಗೆ ಕೊಡುವ ಚಿಂತನೆಯೂ ಇದೆ ಎಂದು ಹೇಳಿದರು.
ಹತ್ತು ವರ್ಷದಲ್ಲಿ ಸರ್ಕಾರಿ ಜಾಗವೇ ಇರಲ್ಲ: ಹತ್ತು ವರ್ಷವಾದಲ್ಲಿ ಸಾರ್ವಜನಿಕ ಉದ್ದೇಶದ ಬಳಕೆಗೆ ಸರ್ಕಾರಿ ಜಾಗವೇ ಸಿಗದಂತಹ ವಾತಾವರಣ ನಿರ್ಮಾಣವಾಗಲಿದೆ. ಹಾಗಾಗಿ ಮುಂದಿನ 20-30 ವರ್ಷದ ಅಗತ್ಯತೆ ನೋಡಿಕೊಂಡು ಗ್ರಾಮಗಳಲ್ಲಿ ಸರ್ಕಾರಿ ಜಾಗವನ್ನು ಮಂಜೂರು ಮಾಡಿಸಿಕೊಳ್ಳಿ ಎಂದು ಜನಪ್ರತಿನಿಧಿಗಳಿಗೆ ಸಚಿವ ಆರ್ ಅಶೋಕ್ ಸಲಹೆ ನೀಡಿದರು.
ಕಾಂಗ್ರೆಸ್ ಸದಸ್ಯ ಮಂಜುನಾಥ ಭಂಡಾರಿ ಪ್ರಶ್ನೆಗೆ ಉತ್ತರಿಸಿದ ಅವರು, ದಕ್ಷಿಣ ಕನ್ನಡ ಜಿಲ್ಲೆಗೆ 2,123 ಎಕರೆ ಜಾಗವನ್ನು ಸರ್ಕಾರದಿಂದ ಕೊಡಲಾಗಿದೆ. 1,181 ಎಕರೆ ಜಾಗವನ್ನು ಉಡುಪಿಗೆ ಕೊಡಲಾಗಿದೆ. ಕೆಲವೆಡೆ ಡೀಮ್ಡ್ ಫಾರೆಸ್ಟ್ ಇರುವ ಕಾರಣ ವಿಳಂಬವಾಗಿದ್ದು, ಶೀಘ್ರ ವಿಲೇವಾರಿ ಮಾಡಲಾಗುತ್ತದೆ. ಗುಡ್ಡಗಳ ತುದಿವರೆಗೂ ಜಾಗವನ್ನು ಒತ್ತುವರಿ ಮಾಡಿಕೊಂಡು ಹೋಗಿದ್ದಾರೆ. ಹಾಗಾಗಿ ಈಗಲೇ 20 - 30 ವರ್ಷಕ್ಕೆ ಸಾರ್ವಜನಿಕ ಬಳಕೆ ಉದ್ದೇಶಕ್ಕಾಗಿ ಬೇಕಾದ ಜಾಗ ಇರಿಸಿಕೊಳ್ಳಬೇಕಿದೆ. ಅದಕ್ಕೆ ಬೇಡಿಕೆ ಸಲ್ಲಿಸಿ ಮಂಜೂರು ಮಾಡಿಕೊಳ್ಳಲಾಗುತ್ತದೆ ಎಂದರು.
ಖಾಸಗಿ ಬಳಕೆಗೆ ಗೋಮಾಳ ಕೊಡಿ ಎನ್ನುವ ಒತ್ತಡ ಬರುತ್ತಿದೆ. ಆದರೆ, ಅದಕ್ಕೆ ನಾನು ಒಪ್ಪುತ್ತಿಲ್ಲ. ಸಾರ್ವಜನಿಕ ಉದ್ದೇಶಕ್ಕೆ ಮಾತ್ರ ಕೊಡಲಿದ್ದೇನೆ. ಸಾರ್ವಜನಿಕ ಉದ್ದೇಶದ ಕಡತ ಪ್ರತ್ಯೇಕವಾಗಿ ಬರುವ ವ್ಯವಸ್ಥೆ ಮಾಡಿದ್ದೇನೆ. ಅದಕ್ಕೆ ಒಬ್ಬ ತಹಸೀಲ್ದಾರ್ ನೇಮಿಸಿದ್ದೇನೆ. ಸಾರ್ವಜನಿಕ ಉದ್ದೇಶದ ಕಡತ ನಮ್ಮ ಇಲಾಖೆಯಲ್ಲಿ ನಿಲ್ಲಲ್ಲ. ಸರ್ವೆ ನಂಬರ್ ಹಾಕಿ ಪತ್ರ ಬರೆದರೆ ಕೂಡಲೇ ಜಾಗ ಮಂಜೂರು ಮಾಡುವ ಕೆಲಸವನ್ನು ಮಾಡಲಿದ್ದೇನೆ ಎಂದರು.
ಲಘು ಭೂಕಂಪಕ್ಕೆ ಆತಂಕ ಬೇಡ: ವಿಜಯಪುರದಲ್ಲಿ ಸಂಭವಿಸುತ್ತಿರುವ ಲಘು ಭೂಕಂಪನ ಘಟನೆಗಳಿಂದ ಜನರು ಆತಂಕಪಡುವ ಅಗತ್ಯವಿಲ್ಲ. ರಾಷ್ಟ್ರೀಯ ಸಂಶೋಧನಾ ಸಂಸ್ಥೆಗಳ ಜೊತೆ ಪರಿಶೀಲನೆ ಕೂಡ ಮಾಡಲಾಗಿದೆ. ತಾತ್ಕಾಲಿಕ ಭೂಕಂಪನ ಮಾಪನ ಕೇಂದ್ರ ಸ್ಥಾಪಿಸಲಾಗಿದೆ. ಮಳೆ ಹೆಚ್ಚಾಗಿದ್ದರಿಂದ ಈ ರೀತಿ ಆಗುತ್ತದೆ ಎಂದು ಸಚಿವ ಆರ್ ಅಶೋಕ್ ತಿಳಿಸಿದರು.
ಇದನ್ನೂ ಓದಿ: ವಿಜಯಪುರ: ಭೂಮಿ ಕಂಪಿಸಿದ ಪ್ರದೇಶಕ್ಕೆ ಅಧಿಕಾರಿಗಳ ಭೇಟಿ, ಪರಿಶೀಲನೆ
ಕಾಂಗ್ರೆಸ್ ಸದಸ್ಯ ಸುನೀಲ್ ಗೌಡ ಪ್ರಶ್ನೆಗೆ ಉತ್ತರಿಸಿದ ಸಚಿವರು, ವಿಜಯಪುರದಲ್ಲಿ 52 ಬಾರಿ ಭೂಕಂಪನ ಆಗಿದೆ. ರಿಯಾಕ್ಟರ್ ಮಾಪಕದಲ್ಲಿ ಎಷ್ಟು ಬರಲಿದೆ ಎನ್ನುವುದರ ಮೇಲೆ ಎಲ್ಲ ನಿರ್ಧಾರವಾಗಲಿದೆ. ಆದರೆ, ಸದ್ಯಕ್ಕೆ ಆತಂಕ ಬೇಡ. ಅಧ್ಯಯನ ಸಮಿತಿ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳಲಾಗುತ್ತದೆ. ಕೂಡಲೇ ಇನ್ನೊಮ್ಮೆ ಸ್ಥಳಕ್ಕೆ ಹೋಗಲು ಡಿಸಿಗೆ ಹೇಳಲಿದ್ದೇನೆ ಎಂದರು.
ಇದನ್ನೂ ಓದಿ: ಸದನದಲ್ಲಿ ಪ್ರತಿಪಕ್ಷಗಳ ವಿರುದ್ಧ ಅಗ್ರೆಸ್ಸಿವ್ ಆಗಿ ಅಟ್ಯಾಕ್ ಮಾಡಿ: ಶಾಸಕರಿಗೆ ಸಿಎಂ ಸೂಚನೆ