ಬೆಂಗಳೂರು: ತಮಿಳುನಾಡು ವಿಧಾನಸಭೆಯಲ್ಲಿ ಇಂದು ಮೇಕೆದಾಟು ಯೋಜನೆ ವಿರುದ್ಧ ಕಾನೂನು ಬಾಹಿರ ನಿರ್ಣಯ ಕೈಗೊಂಡಿದ್ದು, ಇದನ್ನು ರಾಜ್ಯ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಮೇಕೆದಾಟು ಯೋಜನೆ ಜಾರಿ ಬಗ್ಗೆ ನಮ್ಮ ನಿರ್ಧಾರ ಅಚಲವಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ವಿಧಾನಸಭೆಯಲ್ಲಿ ಇಂದು ಮೇಕೆದಾಟು ಯೋಜನೆ ವಿರುದ್ಧ ಕೈಗೊಳ್ಳಲಾಗಿರುವ ನಿರ್ಣಯ ಕಾನೂನು ಬಾಹಿರವಾಗಿದೆ. ಒಂದು ರಾಜ್ಯ ಇನ್ನೊಂದು ರಾಜ್ಯದ ಹಕ್ಕನ್ನು ಆಕ್ರಮಿಸಿಕೊಳ್ಳುವಂತಹ ಜನ ವಿರೋಧಿ ನಿರ್ಣಯವಾಗಿದೆ. ಒಕ್ಕೂಟ ವ್ಯವಸ್ಥೆಯಲ್ಲಿ ತಮಿಳುನಾಡಿಗೆ ನಂಬಿಕೆ ಇಲ್ಲದ ನಿರ್ಣಯ ಇದಾಗಿದೆ. ಈ ನಿರ್ಣಯವನ್ನು ಸಮಸ್ತ ಕರ್ನಾಟಕದ ಜನತೆ ಹಾಗೂ ಸರ್ಕಾರ ತೀವ್ರವಾಗಿ ಖಂಡಿಸುತ್ತದೆ. ಮೇಕೆದಾಟು ಯೋಜನೆ ಜಾರಿಗೆ ನಮ್ಮ ನಿರ್ಧಾರ ಅಚಲವಾಗಿದೆ ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.
ಇದನ್ನೂ ಓದಿ: ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ವಿಧಾನಸಭೆಯಲ್ಲಿ ನಿರ್ಣಯ; ಬಿಜೆಪಿ ಬೆಂಬಲ
ಮೇಕೆದಾಟು ಯೋಜನೆ ರಾಜ್ಯದಲ್ಲಿ ಹುಟ್ಟುವ ಕಾವೇರಿ ನದಿಗೆ ಸಂಬಂಧಿಸಿದ್ದಾಗಿದೆ. ಕಾವೇರಿ ನ್ಯಾಯಾಧೀಕರಣ ಅನ್ವಯ ತಮಿಳುನಾಡಿಗೆ 177. 25 ಟಿಎಂಸಿ ನೀರನ್ನು ಕೊಟ್ಟ ನಂತರ ಉಳಿದ ನೀರಿನ ಮೇಲೆ ಕರ್ನಾಟಕದ ಹಕ್ಕು ಇದೆ. ತಮಿಳುನಾಡಿನ ಈ ರಾಜಕೀಯ ನಿರ್ಧಾರವನ್ನು ಲೆಕ್ಕಿಸದೆ ಮೇಕೆದಾಟು ಯೋಜನೆಯನ್ನು ಕೈಗೆತ್ತಿಕೊಳ್ಳಲು ಸರ್ಕಾರ ಎಲ್ಲ ರೀತಿಯ ಕ್ರಮ ಕೈಗೊಳ್ಳಲಿದೆ ಎಂದು ಸಿಎಂ ಬೊಮ್ಮಾಯಿ ಭರವಸೆ ನೀಡಿದ್ದಾರೆ.