ಬೆಂಗಳೂರು: ಸದನದಲ್ಲಿ ಸಿಎಂ ಹಾಗೂ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ನಡುವೆ ಮಾರಿಹಬ್ಬದ ಏಟು-ತಿರುಗೇಟಿನ ವಾಕ್ಸಮರ ನಡೆಯಿತು.
ಬಜೆಟ್ ಮೇಲಿನ ಚರ್ಚೆ ವೇಳೆ ಮಾತನಾಡಿದ ಸಿದ್ದರಾಮಯ್ಯ, ನಮ್ಮ ಅಧಿಕಾರದಲ್ಲಿ ನೀಡಿದ್ದ 165 ಭರವಸೆಗಳಲ್ಲಿ ಶೇ.99 ಈಡೇರಿಸಿದ್ದೇವೆ. ಆದರೆ ಬಿಜೆಪಿಯವರು ತಾವು ನೀಡಿದ ಭರವಸೆಗಳಲ್ಲಿ 90% ಭರವಸೆಗಳನ್ನು ಈಡೇರಿಸಿಲ್ಲ ಎಂದು ಆರೋಪಿಸಿದರು.
ಈ ವೇಳೆ ಎದ್ದು ನಿಂತ ಸಚಿವ ಕೆ.ಎಸ್.ಈಶ್ವರಪ್ಪ, ನೀವು ಮಾಡಿದ ಘೋಷಣೆಗಳ ಪೈಕಿ 99% ಈಡೇರಿಸಿದ ಬಗ್ಗೆ ನಮಗೆ ತೋರಿಸಿ. ನಾನು ಮೇಲ್ಮನೆಯಲ್ಲಿದ್ದಾಗಿನಿಂದ ಕೇಳ್ತಾ ಇದ್ದೇನೆ. ಅದಕ್ಕೆ ಬೇಕಾದ ಉತ್ತರ ಇನ್ನೂ ಕೊಟ್ಟಿಲ್ಲ. ನೀವು ಭರವಸೆ ಈಡೇರಿಸಿದ್ದರೆ ಪ್ರತಿಪಕ್ಷದಲ್ಲಿ ಇರುತ್ತಿರಲಿಲ್ಲ ಎಂದು ಕಾಲೆಳೆದರು.
ಇದನ್ನೂ ಓದಿ: ಪ್ರೀತಿಸಿ ವಿವಾಹವಾದ ತಮಿಳುನಾಡು ಸಚಿವರ ಪುತ್ರಿ: ರಕ್ಷಣೆ ಕೋರಿ ಬೆಂಗಳೂರು ಪೊಲೀಸ್ ಆಯುಕ್ತರಿಗೆ ಮನವಿ
ಹೀಗೆ ಮಾತಿನ ಮಧ್ಯೆ ಸಿದ್ದರಾಮಯ್ಯ ಮುಂದಿನ ವಿಧಾನಸಭೆ ಚುನಾವಣೆ ಉಲ್ಲೇಖಿಸಿ ಮುಂದಿದೆ ನಿಮಗೆ ಮಾರಿಹಬ್ಬ ಎಂದು ಸವಾಲು ಹಾಕಿದರು. ಈ ಸಂದರ್ಭ ಮಧ್ಯಪ್ರವೇಶಿಸಿದ ಸಿಎಂ ಬೊಮ್ಮಾಯಿ, ಜನಕ್ಕೆ ಏನು ಮುಟ್ಟಿದೆ ಎಂಬುದು ಬಹಳ ಮುಖ್ಯ. ಜನ ಅದನ್ನು ನೋಡಿ ತೀರ್ಮಾನ ಮಾಡುತ್ತಾರೆ. ನಾನು ಏನು ಮಾಡಿದ್ದೇನೆ ಎಂದು ಹೇಳಿದರೆ ಸಾಕಾಗುವುದಿಲ್ಲ. ನೀವು ಭರವಸೆ ಈಡೇರಿಸಿದ್ದರೆ, ನೀವು ಮರು ಆಯ್ಕೆ ಆಗುತ್ತಿದ್ದಿರಿ. ಆದರೆ, ಜನಕ್ಕೆ ತಲುಪಲಿಲ್ಲ. ಅದಕ್ಕೆ ನಿಮ್ಮನ್ನು ಅಲ್ಲಿ ಕೂರಿಸಿದ್ದಾರೆ ಎಂದರು.
ನೀವು 2023 ರಲ್ಲಿ ಮಾರಿ ಹಬ್ಬ ಇದೆ ಅಂತ ಹೇಳಿದ್ದೀರಿ. ಖಂಡಿತವಾಗಿಯೂ ಮಾರಿಹಬ್ಬ ಆಗುತ್ತದೆ. ಅದು ಯಾರಿಗೆ ಮಾರಿ ಹಬ್ಬ ಎಂದು ಕಾದು ನೋಡೋಣ. ನೀವು ಯಾವ ರೀತಿ ಹೋರಾಟ ಮಾಡುತ್ತಿದ್ದೀರಿ ಎಂಬುದು ನಮಗೆ ಗೊತ್ತಿದೆ. ನಾವು ನಿಮ್ಮನ್ನು ಎದುರಿಸುತ್ತೇವೆ. ಮುಂದೆ ಬಿಜೆಪಿ ಅಧಿಕಾರಕ್ಕೆ ಬರುತ್ತದೆ ಎಂದು ಸಿಎಂ ಪ್ರತಿ ಸವಾಲು ಹಾಕಿದರು.
ಆಗ ಸಿದ್ದರಾಮಯ್ಯ ಅವರು, ನಿಮ್ಮ ಯಾವುದೇ ಸವಾಲು ಎಸುರಿಸಲು ತಯಾರಿಗಿದ್ದೇವೆ. ಖಂಡಿತವಾಗಿಯೂ ಮಾರಿ ಹಬ್ಬ ಆಗುತ್ತದೆ. ನಾವು ಸದಾ ಸಿದ್ಧರಾಗಿದ್ದೇವೆ. 2023 ಬಂದರೆ ಸಾಕು ಎಂದು ಕಾಯ್ತಾ ಇದ್ದೇವೆ ಎಂದು ತಿರುಗೇಟು ನೀಡಿದರು.
ಇಮೇಜ್ ಇಲ್ಲದವರಿಗೆ ಫೋಟೋ ಬೇಕು!: ಇದೇ ವೇಳೆ ಎದ್ದು ನಿಂತ ಸಚಿವ ಆರ್.ಅಶೋಕ್, ಬಿಜೆಪಿಯನ್ನು ಎದುರಿಸಲು ಸದಾ ಸಿದ್ಧ ಎಂದು ಸಿದ್ದರಾಮಯ್ಯ ಹೇಳಿದ್ದಾರೆ. ಅದು ಓಕೆ. ಆದರೆ, ಅವರ ಪಾರ್ಟಿಯಲ್ಲಿರುವವರನ್ನು ಎದುರಿಬೇಕಲ್ಲಾ? ಎಂದು ನಾಯಕತ್ವ ಬಿಕ್ಕಟ್ಟು ಬಗ್ಗೆ ಪರೋಕ್ಷವಾಗಿ ಆರ್.ಅಶೋಕ್ ಟಾಂಗ್ ನೀಡಿದರು.
ಆಗ ಸಿದ್ದರಾಮಯ್ಯ, ನೀವು ಇದೇ ಗುಂಗಿನಲ್ಲಿ ಇರಿ. ಮುಂದಿನ ಚುನಾವಣೆಯಲ್ಲಿ ನಾವೆಲ್ಲಾ ಒಗ್ಗಟ್ಟಿನಿಂದ ಹೋರಾಟ ಮಾಡುತ್ತೇವೆ. ನಿಮ್ಮನ್ನು ದೂಳೀಪಟ ಮಾಡುತ್ತೇವೆ ಎಂದು ಸವಾಲು ಹಾಕಿದರು.
ಆದರೆ, ಪೋಸ್ಟರ್‌ನಲ್ಲಿ ನಿಮ್ಮ ಫೋಟೋ ಹಾಕಿಲ್ಲ ಎಂದು ಸಚಿವ ಆರ್.ಅಶೋಕ್ ಕಾಲೆಳೆದರು. ಆಗ ಸಿದ್ದರಾಮಯ್ಯರ ಫೋಟೋ ಹಾಕುವ ಅಗತ್ಯವಿಲ್ಲ. ಫೋಟೋ ಹಾಕಿ ಪರಿಚಿಸುವ ಅಗತ್ಯ ಇಲ್ಲ. ಜನರಿಗೆ ನಾವು ಯಾರೂ ಅಂತ ಗೊತ್ತಿದೆ. ಯಾರಿಗೆ ಜನಪ್ರಿಯತೆ ಇಲ್ಲ. ಯಾರಿಗೆ ಇಮೇಜ್ ಇಲ್ಲ ಅವರಿಗೆ ಮಾತ್ರ ಫೋಟೋ ಅಗತ್ಯ ಇದೆ ಎಂದು ಸೂಚ್ಯವಾಗಿ ತಿಳಿಸಿದರು.