ಬೆಂಗಳೂರು: ಕೊರೊನಾ ಆತಂಕ ಕೊಂಚ ಕಡಿಮೆಯಾಗಿದ್ದು, ಸಿಲಿಕಾನ್ ಸಿಟಿಯಲ್ಲಿ ಮತ್ತೆ ಫ್ಯಾಷನ್ ಕಲರವ ಶರುವಾಗಿದೆ. ರಂಗು ರಂಗಿನ ಉಡುಗೆ ತೊಟ್ಟ ರೂಪದರ್ಶಿಯರ ಕ್ಯಾಟ್ ವಾಕ್ ಗಮನ ಸೆಳೆಯಿತು.
ವೈಟ್ ಫೀಲ್ಡ್ನಲ್ಲಿರುವ ಖಾಸಗಿ ಹೋಟೆಲ್‌ನಲ್ಲಿ ನಡೆದ ಅಂತಾರಾಷ್ಟ್ರೀಯ ಮಟ್ಟದ ‘ಟಾಕ್ ಆಫ್ ದಿ ಟೌನ್-2022’ ಫ್ಯಾಷನ್ ವೀಕ್ ನಡೆಯಿತು. ಝಗಮಗಿಸುವ ವೇದಿಕೆಯಲ್ಲಿ ಮಾಡೆಲ್‌ಗಳು ಹೆಜ್ಜೆ ಹಾಕಿದರು. ಸುಮಾರು 40 ಸೂಪರ್ ಮಾಡೆಲ್‌ಗಳು ಇದರಲ್ಲಿ ಭಾಗವಹಿಸಿದ್ದರು.
ಜಯಂತಿ ಬಲ್ಲಾಳ್, ರೇಷ್ಮಾ ಕುನ್ಹಿ, ಸಮಂತಾ ಅರ್ಪಣಾ, ಮಾನವ್, ವೈಲ್ಡ್‌ಕ್ಯಾಟ್ ಸೇರಿ ಪ್ರಖ್ಯಾತ ಸೆಲೆಬ್ರಿಟಿ ಫ್ಯಾಷನ್ ಡಿಸೈನರ್‌ಗಳು ವಿನ್ಯಾಸಗೊಳಿಸಿದ ದೇಶಿ ಮತ್ತು ವಿದೇಶಿ ಶೈಲಿಯ ನೂತನ ಧಿರಿಸು, ಆಭರಣಗಳನ್ನು ತೊಟ್ಟು ಮಾಡೆಲ್‌ಗಳು ರ್ಯಾಂಪ್ ಮೇಲೆ ಬಳುಕುತ್ತಾ ಹೆಜ್ಜೆ ಹಾಕಿದರು.
ಸ್ಯಾಂಡಲ್‌ವುಡ್ ತಾರೆಯರಾದ ಶ್ವೇತಾ ಶ್ರೀವಾತ್ಸವ್, ಇತಿ ಆಚಾರ್ಯ, ಕಾರುಣ್ಯರಾಮ್, ಶ್ವೇತಾ ನಂದಿತಾ, ಕಾರ್ತಿಕ್ ಜಯರಾಮ್, ಬಾಲಿವುಡ್ ನಟ ಕೀತ್ ಸಿಕ್ವೇರಾ ವಿವಿಧ ಡಿಸೈನರ್ಸ್ ಗಳಿಗೆ ಶೋಸ್ ಟಾಪರ್ ಆಗಿ ಹೆಜ್ಜೆ ಹಾಕಿ ಫ್ಯಾಷನ್ ಶೋಗೆ ಮತ್ತಷ್ಟು ರಂಗು ತುಂಬಿದರು. ಟಗರು ಖ್ಯಾತಿ ಕಾಕ್ರೋಚ್ ಸುಧಿ ಸೇರಿದಂತೆ ಹಲವು ಸೆಲಿಬ್ರಿಟಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು.
ಈ ವೇಳೆ ಮಾತನಾಡಿದ ನಟಿಯರಾದ ಕಾರುಣ್ಯರಾಮ್ ಹಾಗೂ ಇತಿ ಆಚಾರ್ಯ, ಮಹಿಳೆಯರೆಲ್ಲರೂ ಒಟ್ಟಿಗೆ ಕೂಡಿ ಈ ಫ್ಯಾಷನ್ ಶೋ ಆಯೋಜಿಸಿದ್ದು, ಸಖತ್ ಖುಷಿ ತಂದಿದೆ. ಮಹಿಳೆಯರು ಮನಸ್ಸು ಮಾಡಿದರೆ ಏನೆಲ್ಲಾ ವಂಡರ್‌ಗಳನ್ನು ಮಾಡಬಹುದು ಎಂಬುದನ್ನು ಶೋ ಆಯೋಜಕಿ ನಂದಿನಿ ನಾಗರಾಜ್ ಮಾಡಿ ತೋರಿಸಿದ್ದಾರೆ ಎಂದರು.
ಬಳಿಕ ಫ್ಯಾಷನ್ ವೀಕ್ ಆಯೋಜಕರಾದ ನಂದಿನಿ ನಾಗರಾಜ್ ಮಾತನಾಡಿ, ಒಳ್ಳೆಯ ಡಿಸೈನ್ಸ್ ಮತ್ತು ಡೈಮಂಡ್ ಕಲೆಕ್ಷನ್‌ಗಳನ್ನು ಒಂದೇ ವೇದಿಕೆಯಲ್ಲಿ ತೋರಿಸಬೇಕೆಂಬ ಹಂಬಲದಿಂದ ಈ ಶೋ ಆಯೋಜಿಸಲಾಗಿತ್ತು. ವಿಶ್ವಮಟ್ಟದ ಈ ಫ್ಯಾಷನ್ ಶೋಗೆ ಸ್ಯಾಂಡಲ್‌ವುಡ್, ಬಾಲಿವುಡ್ ಸೇರಿದಂತೆ ಎಲ್ಲೆಡೆಯಿಂದ ನಮಗೆ ಒಳ್ಳೆಯ ಸ್ಪಂದನೆ ಲಭಿಸಿದೆ ಎಂದರು.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡಿರುವ ಚೆನ್ನೈನ ಕರುಣ್ ರಾಮನ್ ಈ ಫ್ಯಾಷನ್ ಶೋಗೆ ಡೈರೆಕ್ಷನ್ ಮಾಡಿದ್ದಾರೆ. ಧ್ರುವ ಪ್ರೊಡಕ್ಷನ್ ಪಾರ್ಟ್‌ನರ್ ಆಗಿದ್ದರು. ಸದಾಶಿವನಗರದ ಗಣೇಶ್ ಗೋಲ್ಡ್ ಅಂಡ್ ಡೈಮೆಂಡ್ ಜ್ಯುವೆಲ್ಲರಿ ಹಾಗೂ ಕೀರ್ತಿಲಾಲ್ಸ್ ಡೈಮೆಂಡ್ಸ್ ಅಂಡ್ ಗೋಲ್ಡ್ ಜ್ಯುವೆಲ್ಲರಿ ಈ ಫ್ಯಾಷನ್ ವೀಕ್‌ನ ಸಹ ಪ್ರಾಯೋಜಕರಾಗಿದ್ದರು.
ಇದನ್ನೂ ಓದಿ: ಟ್ರೆಕ್ಕಿಂಗ್ ವೇಳೆ ಬ್ರಹ್ಮಗಿರಿ ಬೆಟ್ಟದಿಂದ ಜಾರಿಬಿದ್ದ ಯುವಕ: ಹೆಲಿಕಾಪ್ಟರ್ ಮೂಲಕ ಪ್ರವಾಸಿಗನ ರಕ್ಷಣೆ