ಬೆಂಗಳೂರು: ನಿರಂತರವಾಗಿ ಹೋರಾಟ ನಡೆಸಿಕೊಂಡು ಬಂದ ಕುಟುಂಬದ ಹಿನ್ನೆಲೆಯಲ್ಲಿ ಹುಟ್ಟಿ ಗಟ್ಟಿ ಮಹಿಳೆಯಾಗಿ ನಾನು ಬೆಳೆದು ನಿಂತಿದ್ದೇನೆ ಎಂದು ಎಐಸಿಸಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಹೇಳಿದ್ದಾರೆ. ಬೆಂಗಳೂರಿನ ಅರಮನೆ ಮೈದಾನದಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ನಾಯಕಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಇಬ್ಬರು ಗಟ್ಟಿ ಮಹಿಳೆಯರ ನಡುವೆ ಬದುಕಿ ನಾನು ಜೀವನದಲ್ಲಿ ಹಲವು ಪಾಠಗಳನ್ನು ಕಲಿತು ರಾಜಕೀಯ ನಡೆ ಇಟ್ಟಿದ್ದೇನೆ. ಜೀವನದಲ್ಲಿ ಎಷ್ಟೇ ಕಷ್ಟ ಬಂದರೂ, ಅಪಮಾನ ಎದುರಾದರೂ ಎದ್ದು ನಿಂತು ಸ್ವಂತ ಶಕ್ತಿಯ ಮೇಲೆ ನಿಂತು ಹೋರಾಡಿ ಜೀವನವನ್ನು ಕಲ್ಪಿಸಿಕೊಳ್ಳಿ ಎಂದು ಕಾಂಗ್ರೆಸ್ ಕಾರ್ಯಕರ್ತರಿಗೆ ಪ್ರಿಯಾಂಕಾ ಗಾಂಧಿ ಕರೆ ನೀಡಿದರು.
’’ನಿಮ್ಮದೇ ಆಗ ಬದುಕು ಕಟ್ಟಿಕೊಳ್ಳುವುದರಿಂದ ಯಶಸ್ಸು ಸಿಗಲಿದೆ. ಪ್ರತಿಯೊಂದು ಸವಾಲಿನ ಮುಂದೆಯೂ ಗೆಲುವಿದೆ ಎನ್ನುವುದನ್ನು ಅರಿಯಬೇಕು. ಇಲ್ಲಿ ಬಂದಿರುವ ಪ್ರತಿಯೊಬ್ಬ ಮಹಿಳೆಯರು ನಿತ್ಯದ ಜೀವನ ನಡೆಸಲು ಎಷ್ಟು ಶ್ರಮ ಪಡುತ್ತೀರಿ ಎನ್ನುವುದನ್ನು ಅರಿತಿದ್ದೇನೆ. ಕೋವಿಡ್ ನಂತರದ ದಿನಗಳಲ್ಲಿ ನಿಮ್ಮ ಬದುಕಿನ ನಿರ್ವಹಣೆ ಇನ್ನಷ್ಟು ಕಷ್ಟವಾಗಿದೆ ಎಂಬುದು ನನಗೆ ತಿಳಿದಿದೆ. ನಿಮ್ಮ ಭವಿಷ್ಯವನ್ನು ನೀವೇ ರೂಪಿಸಿಕೊಳ್ಳಬೇಕು ಮತ್ತು ಅದೊಂದು ಅವಕಾಶ ನಿಮಗೆ ಇದೆ. ನಿಮ್ಮಿಂದಲೇ ಒಂದು ಬದಲಾವಣೆ ಆಗಬೇಕಿದ್ದು, ಈ ನಿಟ್ಟಿನಲ್ಲಿ ನೀವು ಮುಂದಡಿ ಇಡಿ ಎಂದು‘‘ ಕರೆ ಕೊಟ್ಟರು.
ನಿಮ್ಮಲ್ಲಿ ಅಪಾರ ಪ್ರಮಾಣದ ಶಕ್ತಿ ಇದೆ: ರಾಜ್ಯದ ಮಹಿಳೆಯರು ಇಡೀ ದೇಶವೇ ಹೆಮ್ಮೆ ಪಡುವ ರೀತಿಯ ಕಾರ್ಯವನ್ನು ಮಾಡುತ್ತಿದ್ದಾರೆ. ನಿಮ್ಮ ಕಠಿಣ ಪರಿಶ್ರಮ ಹಾಗೂ ದೊಡ್ಡ ಮಟ್ಟದಲ್ಲಿ ಕೈಗಾರಿಕೆಯನ್ನು ಅಭಿವೃದ್ಧಿಪಡಿಸುವ ಮೂಲಕ ಕರ್ನಾಟಕವನ್ನು ವಿಶ್ವಮಟ್ಟದಲ್ಲಿ ಗುರುತಿಸಿಕೊಳ್ಳುವಂತೆ ಮಹಿಳೆಯರು ಮಾಡಿದ್ದಾರೆ. ನಿಮ್ಮ ಬಗ್ಗೆ ನನಗೆ ಹೆಮ್ಮೆ ಇದೆ. ನಿಮ್ಮಲ್ಲಿ ಅಪಾರ ಪ್ರಮಾಣದ ಶಕ್ತಿ ಇದೆ. ಕುಟುಂಬವನ್ನು ನಿಭಾಯಿಸುವ ನೀವು ಇಡೀ ರಾಜ್ಯವನ್ನು ನಿಭಾಯಿಸುವ ಶಕ್ತಿಯನ್ನು ಹೊಂದಿದ್ದೀರಿ. ನೀವು ಕುಟುಂಬದ ಸಹಕಾರಕ್ಕೆ ನಿಲ್ಲದಿದ್ದರೆ ಯಾವುದೇ ರೀತಿಯ ಅಭಿವೃದ್ಧಿ ಸಾಧ್ಯವಿಲ್ಲ ಎಂಬುದನ್ನ ನಾನು ಗರ್ವದಿಂದ ಹೇಳಲು ಬಯಸುತ್ತೇನೆ. ಪ್ರತಿಯೊಬ್ಬರಲ್ಲೂ ರಾಜ್ಯದ ಭುವನೇಶ್ವರಿ ಹಾಗೂ ಚಾಮುಂಡೇಶ್ವರಿಯ ಶಕ್ತಿ ತುಂಬಿದೆ.
ನೀವು ಕಿತ್ತೂರು ರಾಣಿ ಚೆನ್ನಮ್ಮನ ಮಕ್ಕಳು. ಶಾಂತಿ ಹಾಗೂ ತಾಳ್ಮೆಯ ಸಂಕೇತ. ಸಮಾನತೆಯ ಹರಿಕಾರರಾದ ಬಸವಣ್ಣನವರ ಸಂದೇಶವನ್ನು ನಿಮ್ಮಲ್ಲಿ ಅಳವಡಿಸಿಕೊಂಡಿದ್ದೀರಿ. ನೀವು ಎಲ್ಲರನ್ನೂ ಸಮಾನವಾಗಿ ಕಾಣುತ್ತೀರಿ. ಇದರಿಂದಲೇ ನೀವು ಎಲ್ಲರಲ್ಲೂ ಉತ್ಕೃಷ್ಟವಾಗಿ ಕಾಣುತ್ತೀರಿ. ಕಲೆ ಸಂಸ್ಕೃತಿ ಹಾಗೂ ಉತ್ತಮ ಸಮಾಜದ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಬಹಳ ದೊಡ್ಡದಿದೆ. ನಾಡಿನ ಕಲೆ ಸಂಸ್ಕೃತಿಯನ್ನು ಎತ್ತಿ ಹಿಡಿಯುವಲ್ಲಿ ನಿಮ್ಮ ಪಾತ್ರ ದೊಡ್ಡದಿದೆ ಎಂದರು.
ನಾನು ಎಂಟನೇ ವರ್ಷದಲ್ಲಿದ್ದಾಗ ನನ್ನ ಅಜ್ಜಿ ಹಾಗೂ ಮಾಜಿ ಪ್ರಧಾನಿ ಇಂದಿರಾಗಾಂಧಿ ನಿಧನರಾದರು. ಇಬ್ಬರು ಶಕ್ತಿಶಾಲಿ ಮಹಿಳೆಯರ ಮಧ್ಯೆ ನಾನು ಬದುಕಿದ್ದೇನೆ. ತಮ್ಮ ಪುತ್ರನ ನಿಧನದ ಮಾರನೇ ದಿನವೇ ಅವರು ಸೇವೆಗೆ ತೆರಳಿದ್ದನ್ನ ನಾನು ಗಮನಿಸಿದ್ದೇನೆ ಎಂದು ಇಂದಿರಾಗಾಂಧಿಯವರನ್ನು ಕೊಂಡಾಡಿದರು. ತಮ್ಮ ಕಡೆಯ ಉಸಿರು ಇರುವವರೆಗೂ ದೇಶಕ್ಕಾಗಿ ಕೆಲಸ ಮಾಡಿದ್ದಾರೆ.
ದೇಶ ಕಟ್ಟುವಲ್ಲಿ ಶ್ರಮಿಸಿದ್ದಾರೆ: ನಾನು ತಾಯಿ ಸೋನಿಯಾ ಗಾಂಧಿಯವರನ್ನು ನೋಡುತ್ತಾ ಬೆಳೆದಿದ್ದೇನೆ. 21ನೇ ವಯಸ್ಸಿನಲ್ಲಿಯೇ ರಾಜೀವ್ ಗಾಂಧಿ ಅವರನ್ನು ವಿವಾಹವಾಗಿ ಇಟಲಿಯನ್ನ ತೊರೆದು ಭಾರತಕ್ಕೆ ಆಗಮಿಸಿದರು. ಅಲ್ಲಿನ ಸಂಸ್ಕೃತಿಯನ್ನು ಬಿಟ್ಟು ಇಲ್ಲಿ ಬಂದು ಇಂದಿರಾಗಾಂಧಿ ಅವರ ಜೊತೆ ಬೆರೆತು ಇಲ್ಲಿನ ಸಂಸ್ಕೃತಿಯನ್ನು ಅಳವಡಿಸಿಕೊಂಡ ಸೋನಿಯಾ ಗಾಂಧಿ 44ನೇ ವರ್ಷದಲ್ಲಿ ತಮ್ಮ ಪತಿ ರಾಜೀವ್ ಗಾಂಧಿಯನ್ನು ಕಳೆದುಕೊಂಡರು. ಇಷ್ಟಾದರೂ ದೇಶಕ್ಕಾಗಿ ಒಂದು ರಾಜಕೀಯ ಸೇವೆ ಸಲ್ಲಿಸುವ ಸಂಕಲ್ಪ ತೊಟ್ಟು ದೇಶ ಕಟ್ಟುವಲ್ಲಿ ಶ್ರಮಿಸಿದ್ದಾರೆ.
ನಿಮಗೆ ಶಿಕ್ಷಣ ಬೇಕಲ್ಲವೇ? ಉತ್ತಮ ಭವಿಷ್ಯ ಹಾಗೂ ನಿಮ್ಮ ಮಕ್ಕಳಿಗೆ ಉತ್ತಮ ಬದುಕು ಹಾಗೂ ನಿಮಗೊಂದು ಸ್ವಾತಂತ್ರ್ಯ ಅಗತ್ಯವಿಲ್ಲವೇ? ಇದನ್ನು ನಿಮಗೆ ಯಾರು ನೀಡಲು ಸಾಧ್ಯ ಎಂಬ ಅರಿವಿದೆಯೇ? ನೀವು ಎಷ್ಟು ಶಕ್ತಿಶಾಲಿಗಳು ಎಂಬುದು ನಿಮಗೆ ಅರಿವಿಲ್ಲ. ನೀವು ಈ ದೇಶದ ಅರ್ಧದಷ್ಟು ಜನಸಂಖ್ಯೆಯನ್ನು ಹೊಂದಿದ್ದೀರಿ. ಪ್ರತಿ ಮನೆ, ಪ್ರತಿ ಹಳ್ಳಿಗಳಲ್ಲಿ ಪ್ರತಿ ತಾಲೂಕುಗಳಲ್ಲಿ ನೀವು ಅತ್ಯಂತ ಶಕ್ತಿವಂತರಾಗಿದ್ದೀರಿ. ನೀವು ನಿಮ್ಮ ಶಕ್ತಿಯನ್ನು ಅರಿಯಬೇಕಿದೆ.
ರಾಜಕೀಯವಾಗಿ ನೀವು ಬೆಳೆಯಲು ಅತ್ಯಂತ ದೊಡ್ಡ ಶಕ್ತಿಯನ್ನು ಹೊಂದಿದ್ದೀರಿ. ಮಹಿಳೆಯರನ್ನ ಸಂತಸ ಪಡಿಸಲು ಯಾಕೆ ಯಾರು ಪ್ರಯತ್ನಿಸುವುದಿಲ್ಲ. ಹಿಂದೆ ಈ ವಿಚಾರವನ್ನು ಬರೆದಿಟ್ಟುಕೊಂಡು ಇಡೀ ದೇಶಕ್ಕೆ ಒಂದು ಸಂದೇಶವನ್ನು ಕಳಿಸಿ. ನೀವು ಇಂದು ಸಂಕಲ್ಪ ಮಾಡಿದರೆ ಯಾವುದೇ ರಾಜಕೀಯ ಪಕ್ಷವನ್ನು ಬೇಕಾದರೂ ಅಧಿಕಾರದಿಂದ ಇಳಿಸುವ ಶಕ್ತಿ ಹೊಂದಿದ್ದಾರೆ. ಕಳೆದ ಕೆಲವು ವರ್ಷದಿಂದ ಬಿಜೆಪಿ ಅಧಿಕಾರದಲ್ಲಿದ್ದು, ನಿಮ್ಮ ಬದುಕು ಉತ್ತಮವಾಗಿದೆಯೇ? ಎಂಬುದಕ್ಕೆ ನನಗೆ ಹೌದು ಅಥವಾ ಇಲ್ಲ ಎಂಬ ಶಬ್ದದಲ್ಲಿ ಉತ್ತರ ನೀಡಿ ಎಂದು ಹೇಳಿದರು.
40ರಷ್ಟು ಕಮಿಷನ್ ಕೇಳುತ್ತಿದ್ದಾರೆ: ನಿಮ್ಮ ಜೀವನದಲ್ಲಿ ಯಾವುದಾದರೂ ವಿಚಾರದಲ್ಲಿ ಧನಾತ್ಮಕವಾಗಿ ಹಾಗೂ ಉತ್ತಮವಾಗಿ ಬದಲಾವಣೆ ಆಗಿದ್ದನ್ನು ಗಮನಿಸಿದ್ದೀರಾ? ವೈಯಕ್ತಿಕವಾಗಿ ನಾನು ಬಿಜೆಪಿಯನ್ನು ದ್ವೇಷಿಸುತ್ತಿಲ್ಲ. ಆದರೆ, ನಿಮ್ಮ ಬದುಕಿನ ಹಾಗೂ ಭವಿಷ್ಯದ ಪ್ರಗತಿಗೆ ಬಿಜೆಪಿಯಿಂದ ಏನಾದರೂ ಕೊಡುಗೆ ಆಗಿದೆಯಾ? ನಿಮಗಾಗಿ ಬಿಜೆಪಿಯವರು ಏನು ಮಾಡಿದ್ದಾರೆ. ಇನ್ನು ಕೆಲವೇ ದಿನಗಳಲ್ಲಿ ವಿಧಾನಸಭೆ ಚುನಾವಣೆ ಬರಲಿದೆ.
ನಿಮ್ಮ ಸಮಸ್ಯೆಗಳಿಗೆ ಸ್ಪಂದಿಸುವ ಪಕ್ಷವನ್ನು ಅಧಿಕಾರಕ್ಕೆ ತರುವ ಸಂಕಲ್ಪ ಮಾಡಿ. ಈ ನಿಟ್ಟಿನಲ್ಲಿ ನೀವು ಗಂಭೀರವಾಗಿ ಚಿಂತನೆ ನಡೆಸಿ. ರಾಜ್ಯದಲ್ಲಿ ಹಾಗೂ ಕೇಂದ್ರದಲ್ಲಿ ಬದಲಾವಣೆ ತರುವ ನಿರ್ಧಾರ ಕೈಗೊಳ್ಳಿ. ಕರ್ನಾಟಕ ಅತ್ಯಂತ ನಾಚಿಕೆಗೇಡಿನ ಸ್ಥಿತಿಯಲ್ಲಿ ಇದೆ. ಇಲ್ಲಿನ ಸಚಿವರು ಉದ್ಯೋಗಕ್ಕಾಗಿ ಶೇಕಡಾ 40ರಷ್ಟು ಕಮಿಷನ್ ಕೇಳುತ್ತಿದ್ದಾರೆ ಎಂಬ ಮಾಹಿತಿ ಕೇಳಿದ್ದೇನೆ.
1.5 ಲಕ್ಷ ಕೋಟಿ ಮೊತ್ತದ ಹಣವನ್ನು ನೀವು ನೀಡಿದ್ದನ್ನ ಅವರು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆ. ಬೆಂಗಳೂರು ನಗರಕ್ಕೆ 8,000 ಕೋಟಿ ಮತದ ಬಜೆಟ್ ಇದೆ. ಇದರಲ್ಲಿ ಎಷ್ಟು ಮೊತ್ತದ ಹಣ ಇವರ ಜೇಬು ಸೇರುತ್ತಿದೆ ಎಂಬ ಅರಿವು ನಿಮಗಿದೆಯೇ? ಪೊಲೀಸ್ ಬಲವನ್ನೇ ಇವರು ಖರೀದಿಸಿದ್ದಾರೆ. ನಿಮ್ಮ ಮಕ್ಕಳ ಭವಿಷ್ಯದ ಬಗ್ಗೆ ನಿಮಗೆ ಅರಿವಿದೆಯೇ. ಇಂಥದೊಂದು ಭ್ರಷ್ಟ ಸರ್ಕಾರ ಮುಂದುವರೆಯುವ ಅಗತ್ಯವಿದೆಯೇ?. ಪ್ರತಿಯೊಂದಕ್ಕೂ ಲಂಚ ನೀಡುವ ಅನಿವಾರ್ಯತೆ ಎದುರಾಗಿದೆ. ಬೆಂಗಳೂರಿನಲ್ಲಿ ಗಾರ್ಮೆಂಟ್ಸ್ನಲ್ಲಿ ಕೆಲಸ ಮಾಡಿರುವ ಅನೇಕ ಮಹಿಳೆಯರು ಸಾಕಷ್ಟು ಸಂಕಷ್ಟದಲ್ಲಿದ್ದಾರೆ ಎಂಬ ಮಾಹಿತಿ ಕೇಳಿದ್ದೇನೆ. ಕೋವಿಡ್ ಸಂದರ್ಭದಲ್ಲಿ ಸರ್ಕಾರ ನಿಮ್ಮ ಸಹಾಯಕ್ಕೆ ಬಂದಿಲ್ಲ. ಮಹಾನಗರದ ರಸ್ತೆಗಳು ಗುಂಡಿಗಳಿಂದ ತುಂಬಿದೆ.
ಬೆಲೆ ಏರಿಕೆ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ: ಪ್ರತಿದಿನ 40 ಪ್ರಕರಣಗಳು ಮಹಾನಗರ ವ್ಯಾಪ್ತಿಯಲ್ಲಿ ನಡೆಯುತ್ತಿದೆ ಎಂಬ ಆತಂಕಕಾರಿ ವಿಚಾರ ಕೇಳಿದ್ದೇನೆ. ರೈತರ ಆತ್ಮಹತ್ಯೆ ಹೆಚ್ಚಾಗಿದೆ. ಅಡುಗೆ ಅನಿಲದ ಬೆಲೆ ಹೆಚ್ಚಳವಾಗಿರುವುದು ನಿಮ್ಮ ಗಮನದಲ್ಲಿಲ್ಲವೇ? ಜೀವನ ನಿರ್ವಹಣೆ ಬಹಳ ಕಷ್ಟವಾಗಿದೆ. ವಿವಾಹ ಮಾಡುವುದು ಹಾಗೂ ವಿದ್ಯಾಭ್ಯಾಸಕ್ಕೆ ಹಣ ಹೊಂದಿಸುವುದು ಕಷ್ಟವಾಗುತ್ತಿದೆ. ಆದರೆ ಬೆಲೆ ಏರಿಕೆ ಸಮಸ್ಯೆಗೆ ಸರ್ಕಾರ ಸ್ಪಂದಿಸುತ್ತಿಲ್ಲ. ಹೊಸ ಶಿಕ್ಷಣ ನೀತಿ ಹೆಸರಿನಲ್ಲಿ ಉತ್ತಮ ವಿಚಾರಗಳನ್ನು ತೆಗೆದುಹಾಕುವ ಕೆಲಸವನ್ನು ರಾಜ್ಯ ಸರ್ಕಾರ ಮಾಡುತ್ತಿದೆ. ಇಡೀ ಶಿಕ್ಷಣ ವ್ಯವಸ್ಥೆ ಬದಲಾಗುತ್ತಿದ್ದು, ಇದನ್ನು ಬದಲಿಸುವ ಶಕ್ತಿ ಮಹಿಳೆಯರಿಗೆ ಮಾತ್ರ ಇದೆ. ಶ್ರೀಮಂತರು ಶ್ರೀಮಂತರಾಗುತ್ತಲೇ ಇದ್ದಾರೆ, ಬಡವರು ಬಡವರಾಗುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ಬದಲಾವಣೆ ತರುವ ಸಂಕಲ್ಪ ತೊಡಬೇಕು: ರಾಜ್ಯ ಹಾಗೂ ಕೇಂದ್ರದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರದಲ್ಲಿದ್ದ ಸಂದರ್ಭ ಸಾಕಷ್ಟು ಉತ್ತಮ ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದೇವೆ. ಸಮಾಜದ ಎಲ್ಲಾ ವರ್ಗಗಳ ಅಭಿವೃದ್ಧಿಗೆ ಕಾಂಗ್ರೆಸ್ ಶ್ರಮಿಸಿದೆ. ವಿವಿಧ ಯೋಜನೆಗಳ ಮೂಲಕ ಸಮಾಜದ ಎಲ್ಲಾ ವರ್ಗದ ಜನರನ್ನು ಕಾಂಗ್ರೆಸ್ ಸರ್ಕಾರ ತಲುಪಿತ್ತು. ಜನರ ಆರ್ಥಿಕ ಸಬಲೀಕರಣಕ್ಕೆ ಸಾಕಷ್ಟು ಕಾರ್ಯಕ್ರಮ ತಂದಿದ್ದೆವು. ಇಂದು ಈ ವೇದಿಕೆ ಮೇಲೆ ನಾನು ಘೋಷಣೆ ಕೂಗುತ್ತಿದ್ದು, ಮಹಿಳೆಯರಿಂದಲೇ ಬದಲಾವಣೆ ತರುವ ಸಂಕಲ್ಪ ತೊಡಬೇಕು ಎಂದರು.
ಇಂದು ಜಾರಿಗೆ ಬಂದಿರುವ ಹೊಸ ಯೋಜನೆ ಮಹಿಳಾ ಸಬಲೀಕರಣ ಹಾಗೂ ಸಶಕ್ತೀಕರಣಕ್ಕೆ ಶ್ರಮಿಸಲಿದೆ. ಪ್ರತಿ ತಿಂಗಳು ಎರಡು ಸಾವಿರ ರೂಪಾಯಿಯಂತೆ ವರ್ಷಕ್ಕೆ 24,000 ಒಬ್ಬ ಮಹಿಳೆಯ ಮನೆ ಸೇರಲಿದೆ. ಮನೆಯ ಭವಿಷ್ಯ ರೂಪಿಸಲು ಶ್ರಮಿಸುತ್ತಿರುವ ನಿಮ್ಮ ಮನೆಗೆ ಕಾಂಗ್ರೆಸ್ ಸರ್ಕಾರ ನೀಡುವ ಕೊಡುಗೆ ಇದಾಗಲಿದೆ. ಮನೆಯ ಜವಾಬ್ದಾರಿ ವಹಿಸಿಕೊಂಡಿರುವ ನಿಮಗೆ ಇದೊಂದು ಉತ್ತಮ ಸಂಪನ್ಮೂಲವಾಗಿ ಲಭಿಸಲಿದೆ. ಕಾಂಗ್ರೆಸ್ ಸರ್ಕಾರದ ಈ ಘೋಷಣೆ ನಾ ನಾಯಕಿ ಕಾರ್ಯಕ್ರಮದ ಭಾಗವಾಗಿದ್ದು, ಗ್ರಹ ಲಕ್ಷ್ಮಿ ಪ್ರತಿ ಮನೆಯನ್ನು ತಲುಪಲಿ ಎಂದು ಆಶಿಸುತ್ತೇನೆ.
ಪ್ರತ್ಯೇಕ ಮಹಿಳಾ ಪ್ರಣಾಳಿಕೆಯನ್ನು ತರುತ್ತಾರೆ: ನಿಮಗೊಂದು ಪ್ರತ್ಯೇಕ ಪ್ರಣಾಳಿಕೆ ಬೇಕು ಎಂದು ಅರಿತಿರುವ ನಾನು ನನ್ನನ್ನ ಆಹ್ವಾನಿಸಲು ಆಗಮಿಸಿದ ರಾಜ್ಯ ಕಾಂಗ್ರೆಸ್ ನಾಯಕರಿಗೆ ಒತ್ತಡ ಹೇರಿದ್ದೆ. ನಾ ನಾಯಕಿಯರಿಗಾಗಿ ಪ್ರತ್ಯೇಕ ಪ್ರಣಾಳಿಕೆ ಹೊರ ತರುವುದಾದರೆ ಮಾತ್ರ ಕಾರ್ಯಕ್ರಮಕ್ಕೆ ಆಗಮಿಸುತ್ತೇನೆ ಎಂದು ಹೇಳಿದ್ದೆ. ಈ ಪ್ರಣಾಳಿಕೆ ಹೊರ ಬಂದರೆ ಮಹಿಳೆಯರ ಸಮಸ್ಯೆಗೆ ವಿಶೇಷವಾಗಿ ಸ್ಪಂದಿಸಲು ಸಾಧ್ಯ ಎಂದು ತಿಳಿಸಿದ್ದೆ. ಯಾವ ರೀತಿ 200 ಯುನಿಟ್ ವಿದ್ಯುತ್ ಪ್ರತಿ ಮನೆಗೆ ತಲುಪಿಸುವ ಭರವಸೆ ನೀಡಿರುವ ರಾಜ್ಯ ಕಾಂಗ್ರೆಸ್ ನಾಯಕರು ಪ್ರತ್ಯೇಕ ಮಹಿಳಾ ಪ್ರಣಾಳಿಕೆಯನ್ನು ತರುತ್ತಾರೆ ಎಂಬ ವಿಶ್ವಾಸವಿದೆ. ಇದರ ಜೊತೆಗೆ ಗೃಹಲಕ್ಷ್ಮಿಯೂ ನಿಮ್ಮ ಮನೆ ಸೇರಲಿದೆ ಎಂದರು.
ಮಹಿಳೆಯರಿಗೆ ಭರವಸೆ: ನಿರುದ್ಯೋಗ ಮಹಿಳೆಯರಿಗೆ ಗೃಹ ಲಕ್ಷ್ಮಿ ಯೋಜನೆ ಜಾರಿ ಮಾಡುವ ಭರವಸೆಯನ್ನು ಕಾಂಗ್ರೆಸ್ ನೀಡಿತು. ರಾಜ್ಯದಲ್ಲಿ ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಯಾವ ಮನೆಯಲ್ಲಿ ಮಹಿಳೆ ಸಂಸಾರವನ್ನು ನಿಭಾಯಿಸುತ್ತಿರುತ್ತಾಳೋ ಅಂತಹ ಮನೆಗೆ ಪ್ರತಿ ತಿಂಗಳು 2000 ಪ್ರೋತ್ಸಾಹ ಧನ ನೀಡುವುದಾಗಿ ಭರವಸೆ ನೀಡಿದರು. ಇದನ್ನು ಮತ್ತೆ ರೂಪದಲ್ಲಿ ನಾವು ನೀಡಲಿದ್ದೇವೆ. ಗ್ಯಾರಂಟಿ ರೂಪದಲ್ಲಿ ಇಂದಿನ ಸಮಾರಂಭದಲ್ಲಿ ಪ್ಲೇ ಕಾರ್ಡ್ ಬಿಡುಗಡೆ ಮಾಡಲಾಯಿತು.
ಸಾಂಕೇತಿಕವಾಗಿ ಪ್ರಿಯಾಂಕಾ ಗಾಂಧಿ ಅವರ ಕೈಗೆ ಎರಡು ಸಾವಿರ ರೂಪಾಯಿಯ ಚೆಕ್ ನಮೂನೆಯನ್ನು ಸಿದ್ದರಾಮಯ್ಯ ಹಾಗೂ ಡಿ ಕೆ ಶಿವಕುಮಾರ್ ಸಹಿ ಮಾಡಿ ನೀಡಿದರು. ತಾವು ಅಧಿಕಾರಕ್ಕೆ ಬಂದರೆ ಪ್ರತಿ ಮನೆಗೆ ಉಚಿತವಾಗಿ 200 ಯುನಿಟ್ ವಿದ್ಯುತ್ ನೀಡುವ ಭರವಸೆ ನೀಡಿದ್ದ ಕಾಂಗ್ರೆಸ್ ಇಂದು ಈ ಎರಡನೇ ಭರವಸೆಯನ್ನ ನಾ ನಾಯಕಿ ವೇದಿಕೆ ಮೇಲೆ ನೀಡಿದೆ.
ಓದಿ: ದೇಶದ ಸಮಗ್ರ ಅಭಿವೃದ್ಧಿಗೆ ಯುವಜನರು ಕೊಡುಗೆಗಳನ್ನು ನೀಡಲಿ: ರಾಜ್ಯಪಾಲ ಥಾವರ್‌ಚಂದ್ ಗೆಹ್ಲೋಟ್