ಬೆಂಗಳೂರು: ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕಿನ ತಹಶೀಲ್ದಾರ್ ಚಂದ್ರಮೌಳೇಶ್ವರ ಅವರ ಕೊಲೆ ಪ್ರಕರಣದ ಆರೋಪಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸುವುದಾಗಿ ಕಂದಾಯ ಸಚಿವ ಆರ್.ಅಶೋಕ್ ಹೇಳಿದ್ದಾರೆ.
ವಿಧಾನಸೌಧದಲ್ಲಿ ಇಂದು ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಭವಿಷ್ಯದಲ್ಲಿ ಇಂತಹ ಪ್ರಕರಣಗಳು ಸಂಭವಿಸದಂತೆ ಎಚ್ಚರ ವಹಿಸಬೇಕಾದ ಅಗತ್ಯವಿದೆ. ಹೀಗಾಗಿ ತಪ್ಪಿತಸ್ಥ ಆರೋಪಿ ವಿರುದ್ಧ ಗೂಂಡಾ ಕಾಯ್ದೆ ದಾಖಲಿಸಿ ವಿಚಾರಣೆ ನಡೆಸುವುದಾಗಿ ತಿಳಿಸಿದರು.
ಘಟನೆ ಸಂಬಂಧ ಈಗಾಗಲೇ ಅಲ್ಲಿನ ಜಿಲ್ಲಾಧಿಕಾರಿ ಜೊತೆ ದೂರವಾಣಿ ಮೂಲಕ ಮಾತನಾಡಿದ್ದೇನೆ. ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು. ಈಗಿರುವ ಕಾನೂನನ್ನು ಇನ್ನಷ್ಟು ಬಿಗಿ ಮಾಡಲಿದ್ದೇವೆ. ಇನ್ನು ಮುಂದೆ ಯಾರಾದರೂ ಇಂತಹ ಕೃತ್ಯ ನಡೆಸಿದರೆ ಕಾನೂನು ಪ್ರಕಾರವೇ ಕಠಿಣ ಶಿಕ್ಷೆಯಾಗಲಿದೆ ಎಂದು ಎಚ್ಚರಿಕೆ ನೀಡಿದರು.
ಮೃತ ತಹಶೀಲ್ದಾರ್ ಚಂದ್ರಮೌಳೇಶ್ವರ ಕುಟುಂಬಕ್ಕೆ ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರು 25 ಲಕ್ಷ ಪರಿಹಾರ ನೀಡುವುದಾಗಿ ಘೋಷಿಸಿದ್ದಾರೆ. ಅಲ್ಲದೆ ಕುಟುಂಬದ ಒಬ್ಬ ಸದಸ್ಯರಿಗೆ ಸರ್ಕಾರಿ ಕೆಲಸ ನೀಡುವುದಾಗಿಯೂ ತಿಳಿಸಿದ್ದಾರೆ. ಆದಷ್ಟು ಶೀಘ್ರ ಈ ಪ್ರಕ್ರಿಯೆ ಮುಗಿಯಲಿದೆ ಎಂದರು.