ಬೆಂಗಳೂರು: ಕೋವಿಡ್ ಬಳಿಕ ವರ್ಕ್ ಫ್ರಂ ಹೋಮ್ ಹೆಚ್ಚಿದ್ದು, ಸಾಮಾಜಿಕ ಅಂತರ ಕಾಪಾಡಿಕೊಳ್ಳಲು ಮುಂದಾಗಿರುವ ಜನರು ತಮ್ಮಿಷ್ಟ ಹೋಟೆಲ್ ತಿಂಡಿಗಳನ್ನು ಸವಿಯಲು ಹೆಚ್ಚೆಚ್ಚು ಆನ್ಲೈನ್ ಫುಡ್ ಆರ್ಡರ್ ಮೊರೆ ಹೋಗುತ್ತಿದ್ದಾರೆ. ಇದರಿಂದಾಗಿ ಸ್ವಿಗ್ಗಿ ಮತ್ತು ಜೊಮ್ಯಾಟೋಗಳ ವಹಿವಾಟುಗಳು ಹೆಚ್ಚಿರುವುದು ಸುಳ್ಳಲ್ಲ. ಇದನ್ನೇ ಬಂಡಾವಳ ಮಾಡಿಕೊಂಡಿರುವ ಜನಪ್ರಿಯ ಫುಡ್ ಆ್ಯಪ್ಗಳಿ ಇದೀಗ ಹೋಟೆಲ್ ಮಾಲೀಕರ ಜೊತೆಗೆ ಗ್ರಾಹಕರ ಸುಲಿಗೆಗೆ ಇಳಿದಿದ್ದಾರೆ. ಹೊಟೇಲ್ ಬೆಲೆಗಿಂತ ಶೇ 40ರಷ್ಟು ಹೆಚ್ಚು ಹಣವನ್ನು ಫುಡ್ ಆ್ಯಪ್ ಮೆನುವಿನಲ್ಲಿ ತೋರಿಸುವ ಮೂಲಕ ಲೂಟಿ ಮಾಡಲು ಮುಂದಾಗಿದೆ. ಇದರಿಂದ ಮಾಲೀಕರು ಮತ್ತು ಗ್ರಾಹಕರಿಬ್ಬರಿಗೂ ಹೊರೆಯಾಗುತ್ತಿದೆ.
ಮಾಲೀಕರ ಆಕ್ರೋಶ: ಜನಪ್ರಿಯ ಫುಡ್ ಆ್ಯಪ್ಗಳು ಈ ರೀತಿ ಸುಲಿಗೆ ಮಾಡುತ್ತಿರುವುದು ಕಂಡು ಬರುತ್ತಿದ್ದಂತೆ ಈ ಕುರಿತು ಸ್ವಿಗ್ಗಿ ಮತ್ತು ಜೊಮ್ಯಾಟೋಗಳಿಗೆ ನೈಜ ಬೆಲೆ ಬಿತ್ತರಿಸಲು ಮನವಿ ಮಾಡಿದೆ. ಗ್ರಾಹಕರಿಂದ ಅಧಿಕ ಹಣ ಪಡೆಯದಂತೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ತಿಳಿಸಿದೆ. ಆದರೆ ಸ್ವಿಗ್ಗಿ ಮತ್ತು ಜೊಮ್ಯಾಟೋ, ತಾವು ಆರ್ಥಿಕವಾಗಿ ನಷ್ಟದಲ್ಲಿರುವ ಹಿನ್ನಲೆ ಈ ಕ್ರಮ ಅನಿವಾರ್ಯ ಎಂದು ವಾದಿಸುತ್ತಿವೆ. ಇನ್ನು, ಇತ್ತೀಚಿನ ಅಂಕಿ ಅಂಶಗಳನ್ನು ಗಮನಿಸಿದರೆ ಇದು ಸುಳ್ಳು ಎಂಬುದು ಬಯಲಾಗಿದೆ. ಜನರ ಅನಿವಾರ್ಯವಾಗಿ ಫುಡ್ ಆ್ಯಪ್ಗಳ ಮೊರೆ ಹೋಗುತ್ತಿರುವ ಹಿನ್ನಲೆ ಈ ರೀತಿ ದರೋಡೆಗೆ ಇಳಿದಿದೆ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಎಂದು ಆರೋಪಿಸಿದೆ.
ಐಟಿ ಬಿಟಿ ಬೆಂಗಳೂರಿನಲ್ಲಿ ಜನರು ಹೆಚ್ಚಾಗಿ ಈ ಆ್ಯಪ್ಗಳ ಮೊರೆ ಹೋಗುತ್ತಿದ್ದಾರೆ. ಕೋವಿಡ್ ಬಳಿಕ ಜನರ ಜೀವನ ಶೈಲಿ ಬದಲಾಗಿದ್ದು, ಆಹಾರ ಆರ್ಡರ್ಗೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ ಇದನ್ನು ಸ್ವಿಗ್ಗಿ ಮತ್ತು ಜೊಮ್ಯಾಟೋ ದುರುಪಯೋಗ ಮಾಡಿಕೊಳ್ಳುತ್ತಿದೆ. ಈ ಹಿನ್ನಲೆ ಇದೀಗ ಈ ಆ್ಯಪ್ಗಳ ವಿರುದ್ದ ಕ್ರಮಕ್ಕೆ ಮುಂದಾಗುವುದು ಅನಿವಾರ್ಯವಾಗಿದೆ ಈ ಹಿನ್ನಲೆ ಕೇಂದ್ರದ ಓಪನ್ ನೆಟ್ವರ್ಕ್ ಫಾರ್ ಡಿಜಿಟಲ್ ಕಾರ್ಮಸ್ (ONDC) ಆ್ಯಪ್ ಜೊತೆಗೆ ಒಪ್ಪಂದ ಮಾಡಿಕೊಳ್ಳಲು ಹೋಟೆಲ್ ಮಾಲೀಕರ ಸಂಘ ನಿರ್ಧರಿಸಿದೆ.
ಏನಿದು ONDC: ಒಎನ್ ಡಿಸಿಯು ಸಣ್ಣ ಉದ್ಯಮಗಳು ಮತ್ತು ಕೌಟುಂಬಿಕ ವ್ಯಾಪಾರಗಳಿಗೆ ದೊಡ್ಡ ಇ-ವಾಣಿಜ್ಯ ಕಂಪನಿಗಳೊಂದಿಗೆ ಸ್ಪರ್ಧಿಸಲು ವೇದಿಕೆಯನ್ನು ಒದಗಿಸುತ್ತದೆ. ಇದರಲ್ಲಿ ಉತ್ತಮ ಬೆಲೆ ಮತ್ತು ಸ್ಪರ್ಧಾತ್ಮಕ ತೆರೆದ ಮಾರುಕಟ್ಟೆಯನ್ನು ನಿರ್ಮಿಸಲಾಗುವುದು. ಇಲ್ಲಿ ಸಣ್ಣ ವ್ಯಾಪಾರಿಗಳನ್ನು ಮತ್ತು ಗ್ರಾಹಕರನ್ನು ಉತ್ತೇಜಿಸಲಾಗುವುದು. ಈ ಹಿಂದೆ ಫ್ಲಿಪ್ ಕಾರ್ಟ್ ಮತ್ತು ಅಮೆಜಾನ್ ಪ್ರಾಬಲ್ಯ ಕಡಿಮೆ ಮಾಡಲು ಇದನ್ನು ಪರ್ಯಾಯವಾಗಿ ಬಳಕೆ ಮಾಡಲು ಕೇಂದ್ರ ನಿರ್ಧರಿಸಿತು. ಇದೀಗ ಸ್ವಿಗ್ಗಿ, ಜೊಮ್ಯಾಟೋದಲ್ಲೂ ಅದೇ ಕ್ರಮಕ್ಕೆ ಮುಂದಾಗಿದೆ. ಇದರಿಂದ ಗ್ರಾಹಕರು ಮತ್ತು ಮಾಲೀಕರಿಗೆ ಲಾಭವಾಗಲಿದ್ದು, ಶೇ 20ರಷ್ಟು ಉಳಿತಾಯವಾಗಲಿದೆ. ಈ ಸಂಬಂಧ ಬೆಂಗಳೂರು ಹೋಟೆಲ್ ಅಸೋಸಿಯೇಷನ್ ಒಎನ್ಡಿಸಿ ಜೊತೆ ಸಭೆ ನಡೆಸಲಿದ್ದು, ನಿರ್ಧಾರ ಕೈಗೊಳ್ಳಲಿದೆ.
ಇದನ್ನೂ ಓದಿ: ಕನ್ನಡಿಗರು ಅಮುಲ್ ಉತ್ಪನ್ನ ಖರೀದಿಸುವುದಿಲ್ಲ ಎಂದು ಪ್ರತಿಜ್ಞೆ ಮಾಡಬೇಕು: ಸಿದ್ದರಾಮಯ್ಯ