ಬೆಂಗಳೂರು : ಹಲವು ವರ್ಷಗಳ ಕಾಲ ಸಿನಿಮಾ ಇಂಡಸ್ಟ್ರಿಯಿಂದ ಹೊರಗುಳಿದಿದ್ದ ಸ್ಯಾಂಡಲ್ವುಡ್ನಟಿ ರಮ್ಯಾ ಮತ್ತೆ ರಿ ಎಂಟ್ರಿ ಕೊಟ್ಟಿದ್ದಾರೆ. ತಾವು ನಟಿಸದೇ ಸಿನಿಮಾ ನಿರ್ಮಾಪಕಿಯಾಗಿ ಅವರು ಕಾಣಿಸಿಕೊಳ್ಳುತ್ತಿದ್ದಾರೆ. ಇದೀಗ ಅವರ ನಿರ್ಮಾಣದಲ್ಲಿ ಮೂಡಿ ಬರುತ್ತಿರುವ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಚಿತ್ರಕ್ಕೆ ಸಂಕಷ್ಟ ಎದುರಾಗಿದೆ. ನಟ, ನಿರ್ದೇಶಕ ರಾಜ್ ಬಿ. ಶೆಟ್ಟಿ ಅವರ ಲೈಟರ್ ಬುದ್ಧ ಫಿಲ್ಮ್ಸ್ ಸಹಯೋಗದಲ್ಲಿ ರಮ್ಯಾ ಅವರ ನಿರ್ಮಾಣ ಸಂಸ್ಥೆ ಆ್ಯಪಲ್ ಬಾಕ್ಸ್ ಸ್ಟುಡಿಯೋದಲ್ಲಿ ಸಿದ್ಧವಾಗುತ್ತಿರುವ ಚಿತ್ರದ ಶೀರ್ಷಿಕೆಗೆ ನಗರದ ಪ್ರಧಾನ ಹೆಚ್ಚುವರಿ ಸಿವಿಲ್ ನ್ಯಾಯಾಲಯ ತಡೆಯಾಜ್ಞೆ ನೀಡಿದೆ.
ಈ ಕುರಿತು ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರು ಸಲ್ಲಿಸಿರುವ ಅರ್ಜಿ ವಿಚಾರಣೆ ನಡೆಸಿರುವ 18ನೇ ಹೆಚ್ಚುವರಿ ನಗರ ಸಿವಿಲ್ ನ್ಯಾಯಾಲಯದ ನ್ಯಾಯಾಧೀಶ ಪದ್ಮ ಪ್ರಸಾದ್ ಅವರು ಶೀರ್ಷಿಕೆ ಬಳಸದಂತೆ ತಡೆಯಾಜ್ಞೆ ನೀಡಿ ಆದೇಶಿಸಿದ್ದಾರೆ. ಪ್ರಕರಣದ ವಿಚಾರಣೆಯಲ್ಲಿ ರಾಜೇಂದ್ರಸಿಂಗ್ ಬಾಬು ಅವರ ಪರ ವಕೀಲರು, ನಮ್ಮ ಅರ್ಜಿದಾರರರು ಮಂಡಳಿಯಲ್ಲಿ ಈಗಾಗಲೇ ತಾವು ನಿರ್ಮಾಣ ಮಾಡುತ್ತಿರುವ ಕನ್ನಡ ಚಲನಚಿತ್ರ ‘ಸ್ವಾತಿ ಮುತ್ತಿನ ಮಳೆ ಹನಿಯೇ’ ಎಂಬ ಶೀರ್ಷಿಕೆ ನೋಂದಣಿ ಮಾಡಿದ್ದಾರೆ.
ಈ ಚಲನಚಿತ್ರದ ತಾರಾಗಣದಲ್ಲಿ ಅಂಬರೀಶ್, ಸುಹಾಸಿನಿ ಮತ್ತು ಇತರ ಕಲಾವಿದರು ನಟಿಸಿದ್ದರು. ಶೇ 80ರಷ್ಟು ಚಿತ್ರೀಕರಣವಾಗಿದೆ. ಅಂಬರೀಶ್ ನಿಧನದಿಂದ ಚಿತ್ರೀಕರಣವು ಸ್ಥಗಿತವಾಗಿತ್ತು. ಈ ಶೀರ್ಷಿಕೆಯು ರಾಜೇಂದ್ರಸಿಂಗ್ ಬಾಬು ಅವರೇ ನಿರ್ದೇಶಿಸಿರುವ ಬಣ್ಣದ ಗೆಜ್ಜೆ ಚಿತ್ರದ ಹಾಡಿನದ್ದಾಗಿದೆ. ಹಾಗಾಗಿ ಶೀರ್ಷಿಕೆ ಬಳಸಲು ಬೇರೆ ಯಾರಿಗೂ ಯಾವುದೇ ರೀತಿಯ ಹಕ್ಕು ಇರುವುದಿಲ್ಲ.
ಅಲ್ಲದೇ, ಒಂದು ವೇಳೆ ಬಳಕೆ ಮಾಡಿದಲ್ಲಿ ಶೀರ್ಷಿಕೆಯ ಕೃತಿ ಚೌರ್ಯವಾಗುತ್ತದೆ. ಈ ಶೀರ್ಷಿಕೆಯ ಹೆಸರನ್ನು ಬಳಸದಂತೆ ನಿರ್ದೇಶನ ನೀಡಬೇಕು ಎಂದು ಕೋರಿದ್ದರು. ಮನವಿ ಪರಿಗಣಿಸಿದ ನ್ಯಾಯಾಲಯ ಸ್ವಾತಿ ಮುತ್ತಿನ ಮಳೆ ಹನಿಯೇ ಚಿತ್ರದ ಶೀರ್ಷಿಕೆ ಬಳಸದಂತೆ ಪ್ರತಿವಾದಿಗಳಿಗೆ ನಿರ್ದೇಶಿಸಿ ಆದೇಶಿಸಿದ್ದಾರೆ. ಅಲ್ಲದೇ, ಪ್ರತಿವಾದಿಗಳಿಗೆ ನೋಟಿಸ್ ಜಾರಿ ಮಾಡಿ ಕೋರ್ಟ್ ವಿಚಾರಣೆ ಮುಂದೂಡಿದೆ.
ಪೋಸ್ಟರ್ನಿಂದಲೇ ಕುತೂಹಲ ಹುಟ್ಟಿಸಿದ್ದ ಚಿತ್ರ: 'ಪ್ರೇರಣಾ' ಮತ್ತು 'ಅನಿಕೇತ್' ಎಂಬ ಮುಖ್ಯ ಪಾತ್ರಗಳಲ್ಲಿ ಸಿರಿ ರವಿಕುಮಾರ್ ಹಾಗು ರಾಜ್ ಬಿ.ಶೆಟ್ಟಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಲಾಗಿದೆ. ವಿಭಿನ್ನ ಕಥಾಹಂದರ ಹೊಂದಿರುವ ಸಿನಿಮಾ ಕೆಲವು ಪೋಸ್ಟರ್ನಿಂದ ಸಿನಿಮಾಭಿಮಾನಿಗಳಲ್ಲಿ ಕುತೂಹಲ ಮೂಡಿಸಿದೆ.
'ಮೋಹಕ ತಾರೆ'ಯಿಂದ ಚಿತ್ರ ನಿರ್ಮಾಣ: ಹೊಸ ಕಂಟೆಂಟ್ ಹೊಂದಿರುವ ಚಿತ್ರವನ್ನು ನಟಿ ಇದೀಗ ನಿರ್ಮಾಪಕಿಯಾಗಿರುವ ರಮ್ಯಾ ನಿರ್ಮಿಸುತ್ತಿದ್ದಾರೆ. ಈ ಕುರಿತು ತಮ್ಮ ಹೊಸ ಅನುಭವವನ್ನು ಅವರು ಇತ್ತೀಚೆಗೆ ಹಂಚಿಕೊಂಡಿದ್ದರು. "ಮೊದಲ ಬಾರಿ ನಿರ್ಮಾಪಕಿಯಾಗಿ ಜವಾಬ್ದಾರಿ ತೆಗೆದುಕೊಂಡಿದ್ದೇನೆ. ಇದರಿಂದ ಬಹಳಷ್ಟು ವಿಷಯಗಳನ್ನು ಕಲಿತೆ. ಹಾಗೆಯೇ ಇದು ನನಗೆ ಅದ್ಭುತ ಅನುಭವ. ಈ ಚಿತ್ರವು ಪ್ರೀತಿ, ಆತ್ಮಶೋಧನೆ ಕುರಿತಾದ ಒಂದು ಸುಂದರ ಕಾವ್ಯಾತ್ಮಕ ಅನುಭವವಾಗಲಿದೆ" ಎಂದಿದ್ದರು.
ತಾರಾ ಬಳಗದಲ್ಲಿ ಯಾರೆಲ್ಲಾ ಇದ್ದಾರೆ?: ಚಿತ್ರದಲ್ಲಿ ಪ್ರತಿಭಾನ್ವಿತ ಕಲಾವಿದರ ದಂಡೇ ಇದೆ. ಮುಖ್ಯವಾಗಿ ಬಾಲಾಜಿ ಮನೋಹರ್, ಸೂರ್ಯ ವಸಿಷ್ಠ, ರೇಖಾ ಕೂಡ್ಲಿಗಿ, ಸ್ನೇಹ ಶರ್ಮ, ಜೆ.ಪಿ. ತುಮ್ಮಿನಾಡ್, ಗೋಪಾಲಕೃಷ್ಣ ದೇಶಪಾಂಡೆ ಮತ್ತು ಇನ್ನಿತರು ಕಾಣಿಸಿಕೊಳ್ಳಲಿದ್ದಾರೆ. ಹಾಗೆಯೇ ಈ ಚಿತ್ರಕ್ಕೆ ಮಿಧುನ್ ಮುಕಂದನ್ ಸಂಗೀತ ಸಂಯೋಜನೆ, ಪ್ರವೀಣ್ ಶ್ರೀಯಾನ್ ಛಾಯಾಗ್ರಹಣ ಹಾಗೂ ಸಂಕಲನ ದೊರೆತಿದೆ. ಚಿತ್ರತಂಡ ಟ್ರೈಲರ್ ಬಿಡುಗಡೆ ಮಾಡಲು ಸಜ್ಜಾಗಿದೆ.
ಇದನ್ನೂ ಓದಿ: 'ಸ್ವಾತಿ ಮುತ್ತಿನ ಮಳೆ ಹನಿಯೇ' ಚಿತ್ರ ಪ್ರೀತಿ-ಪ್ರೇಮದೊಂದಿಗೆ ಒಲವಾಗುವಂತೆ ಮಾಡುತ್ತೆ: ರಮ್ಯಾ