ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಸಂಕಷ್ಟವನ್ನು ಸಮರ್ಥವಾಗಿ ಎದುರಿಸುತ್ತಿರುವ ರಾಜ್ಯ ಸರ್ಕಾರಕ್ಕೆ ಈಗ ಮತ್ತಷ್ಟು ಬಲ ಬಂದಂತಾಗಿದೆ.
ರಾಜ್ಯ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ಬೆಂಗಳೂರಿನ ಕಿದ್ವಾಯಿ ಸ್ಮಾರಕ ಗಂಥಿ ಸಂಸ್ಥೆಯಲ್ಲಿ ಇಂದು ವೈದ್ಯಕೀಯ ಶಿಕ್ಷಣ ಸಚಿವ ಡಾ. ಕೆ.ಸುಧಾಕರ್ ಗಂಟಲು ದ್ರವ ಸಂಗ್ರಹಣಾ ಬೂತ್ಗಳಿಗೆ ಚಾಲನೆ ನೀಡಿದ್ದಾರೆ.
ಸಂಸ್ಥೆಯ ನಿರ್ದೇಶಕ ಡಾ. ರಾಮಚಂದ್ರ ಮಾತಾನಾಡಿ, ಕಿದ್ವಾಯಿ ಸಂಸ್ಥೆಯಲ್ಲಿ ದಾಖಲಾಗುವ ಒಳರೋಗಿಗಳ ಸುರಕ್ಷತೆಯ ದೃಷ್ಟಿಯಿಂದ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಸಚಿವ ಡಾ. ಸುಧಾಕರ್ ಮಾತಾನಾಡಿ, ಕಿದ್ವಾಯಿ ಸಂಸ್ಥೆಯಲ್ಲಿ ಕೋವಿಡ್ ಪರೀಕ್ಷಾ ಪ್ರಯೋಗಾಲಯ ಸ್ಥಾಪಿಸುವ ಕುರಿತಂತೆ ಐಸಿಎಂಆರ್ನ ಡಾ. ಮಂಜುನಾಥ್ ಅವರು ಮೌಖಿಕ ಅನುಮತಿ ನೀಡಿದ್ದು, ಅದರ ಮಾರ್ಗಸೂಚಿಗಳನ್ನು ಈಗಾಗಲೇ ಸಂಸ್ಥೆಗೆ ಸಲ್ಲಿಸಲಾಗಿದೆ.
ಶೀಘ್ರದಲ್ಲೇ ಅನುಮೋದನೆ ದೊರಕುವ ನಿರೀಕ್ಷೆ ಇದೆ. ಇದಕ್ಕಾಗಿ ಬೆಕ್‍ಮ್ಯಾನ್ ಕೌಲ್ಟರ್ ಬಯೋಮೆಕ್-4000 ಮತ್ತು ಕ್ವಾಂಟ್ ಸ್ಟುಡಿಯೋ 5 ಉಪಕರಣಗಳನ್ನು ಬಳಸಲಾಗುತ್ತಿದೆ ಎಂದರು.
ಇದು 3 ಗಂಟೆ 30 ನಿಮಿಷ ಅವಧಿಯೊಳಗೆ 380 ಮಾದರಿಗಳ ಪರೀಕ್ಷೆ ನಡೆಸುವ ಸಾಮರ್ಥ್ಯ ಹೊಂದಿದೆ. ಶೀಘ್ರದಲ್ಲೇ ಹೆಚ್ಚಿನ ಸಾಮರ್ಥ್ಯದ ಉಪಕರಣವನ್ನು ಅಳವಡಿಸಲಾಗುತ್ತದೆ ಎಂದು ತಿಳಿಸಿದರು.