ಮಂಗಳೂರು: ಗ್ರಾಮ ಪಂಚಾಯಿತಿ ಒಂದರ ಕಟ್ಟಡ ಉದ್ಘಾಟನೆಯ ಆಮಂತ್ರಣ ಪತ್ರಿಕೆಯಲ್ಲಿ ಪ್ರೊಟೋಕಾಲ್ ಉಲ್ಲಂಘನೆ ಮಾಡಿದ ಕಾರಣಕ್ಕೆ ಅಮಾನತು ಆಗಿದ್ದ ಇಬ್ಬರು ಅಧಿಕಾರಿಗಳನ್ನು ಮತ್ತೆ ಸೇವೆಗೆ ನಿಯೋಜನೆ ಮಾಡಿ ಆದೇಶ ಹೊರಡಿಸಲಾಗಿದೆ.
ಮೂಡಬಿದಿರೆಯ ಇರುವೈಲ್ ಗ್ರಾಮ ಪಂಚಾಯಿತಿ ಕಟ್ಟಡ ಉದ್ಘಾಟನೆಗೆ ಡಿಸಿ ಕಚೇರಿಯ ಪ್ರೊಟೋಕಾಲ್ ಪ್ರಕಾರ ಆಮಂತ್ರಣ ಪತ್ರಿಕೆ ಅಚ್ಚಾಗಿದ್ದರೂ, ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರ ಹೆಸರು ಹಾಕಿಲ್ಲ ಎಂದು ಕಾರ್ಯಕ್ರಮವನ್ನು ರದ್ದು ಮಾಡಲಾಗಿತ್ತು. ಅಲ್ಲದೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಮೂಡುಬಿದಿರೆ ಇಒ ಮತ್ತು ಇರುವೈಲು ಪಿಡಿಒ ಅವರನ್ನು ಅಮಾನತು ಮಾಡಲಾಗಿತ್ತು.
ಈ ಬಗ್ಗೆ ಕೆಡಿಪಿ ಸಭೆಯಲ್ಲಿ ಸಿದ್ದರಾಮಯ್ಯರಲ್ಲಿ ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಮಾತನಾಡಿ, ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದ್ದರು. ಆ ಸಂದರ್ಭದಲ್ಲಿ ಅವರ ಅಮಾನತು ವಾಪಸ್ ಪಡೆಯುವ ಬಗ್ಗೆ ಮುಖ್ಯಮಂತ್ರಿ ಭರವಸೆ ನೀಡಿದ್ದರು.
ಆದರೆ ಎರಡು ವಾರ ಕಳೆದರೂ ಅಮಾನತು ಆದೇಶ ವಾಪಸ್ ಪಡೆಯದೆ ಇದ್ದುದರಿಂದ ನಿನ್ನೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ನೇತೃತ್ವದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಬಿಜೆಪಿ ಶಾಸಕರು ಹಕ್ಕುಚ್ಯುತಿ ಆರೋಪ ಮಾಡಿ ಮತ್ತು ಇಬ್ಬರು ಅಧಿಕಾರಿಗಳ ಅಮಾನತು ಆದೇಶ ವಾಪಾಸ್ ಪಡೆಯುವಂತೆ ಒತ್ತಾಯಿಸಿದ್ದರು.
ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಬಂದಿದ್ದ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಅಮಾನತು ಆದೇಶ ವಾಪಸ್ ಪಡೆಯಲು ರಾಜ್ಯ ಸರ್ಕಾರದ ಆದೇಶವಾಗಿದ್ದು, ಶೀಘ್ರ ಅಮಾನತು ಆದೇಶ ವಾಪಸ್ ಪಡೆಯುವುದಾಗಿ ತಿಳಿಸಿದ್ದರು. ಅದರಂತೆ ಮೂಡುಬಿದಿರೆ ತಾಲೂಕಿನ ಇಬ್ಬರು ಅಧಿಕಾರಿಗಳ ಅಮಾನತು ಆದೇಶವನ್ನು ನಿನ್ನೆ ಸಂಜೆ ವಾಪಸ್ ಪಡೆಯಲಾಗಿದೆ. ಮೂಡುಬಿದಿರೆ ತಾಲೂಕು ಪಂಚಾಯಿತಿ ಇಒ ದಯಾವತಿ ಮತ್ತು ಇರುವೈಲು ಪಿಡಿಒ ಕಾಂತಪ್ಪ ಅವರ ಅಮಾನತು ಆದೇಶವನ್ನು ವಾಪಸ್ ಪಡೆದು ಕೆಲಸಕ್ಕೆ ಮರು ನೇಮಕ ಮಾಡಲಾಗಿದೆ.
ಇದನ್ನೂ ಓದಿ: ದಕ್ಷಿಣ ಕನ್ನಡ: ಹಕ್ಕುಚ್ಯುತಿ ಆರೋಪ- ಡಿಸಿ ಕಚೇರಿಯೆದುರು ಬಿಜೆಪಿ ಶಾಸಕರ ಧರಣಿ