ಬೆಂಗಳೂರು: ಕ್ಷುಲ್ಲಕ ಕಾರಣಕ್ಕಾಗಿ ಪ್ರಕರಣ ದಾಖಲಿಸಿಕೊಳ್ಳದೆ ಠಾಣೆಗೆ ಕರೆತಂದು ಚಿತ್ರಹಿಂಸೆ ನೀಡಿದ್ದ ಆರೋಪದಡಿ ಬ್ಯಾಟರಾಯನಪುರ ಪೊಲೀಸ್ ಸಬ್ಇನ್ಸ್ಪೆಕ್ಟರ್ ಅಮಾನತುಗೊಳಿಸಿ ನಗರ ಪಶ್ಚಿಮ ವಿಭಾಗದ ಡಿಸಿಪಿ ಸಂಜೀವ್ ಪಾಟೀಲ್ ಆದೇಶಿಸಿದ್ದಾರೆ.
ಮೈಸೂರು ರಸ್ತೆಯ ಹಳೆಗುಡ್ಡದ ನಿವಾಸಿ ತೌಸಿಫ್ ಪಾಷಾನನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿಕೊಳ್ಳದೆ ಪಿಎಸ್ಐ ಹರೀಶ್ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ತೌಸಿಫ್ ಪಾಷಾ ಹಾಗೂ ಆತನ ಕುಟುಂಬಸ್ಥರು ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ತನಿಖೆ ನಡೆಸಿ ವರದಿ ನೀಡುವಂತೆ ಕೆಂಗೇರಿ ಗೇಟ್ ಎಸಿಪಿ ಕೊದಂಡರಾಮಯ್ಯಗೆ ತಾಕೀತು ಮಾಡಲಾಗಿತ್ತು.
ಇದನ್ನೂ ಸುದ್ದಿ: ಪೊಲೀಸರ ಹೊಡೆತಕ್ಕೆ ಬಲಗೈ ಕಳೆದುಕೊಂಡ ಯುವಕ: ಮೂವರು ಕಾನ್ಸ್ಟೇಬಲ್ ಸಸ್ಪೆಂಡ್
ಈ ಪ್ರಕರಣದ ತನಿಖೆ ನಡೆಸಿ ಡಿಸಿಪಿಗೆ ಮಧ್ಯಂತರ ವರದಿ ಸಲ್ಲಿಸಲಾಗಿತ್ತು. ವರದಿ ಪರಿಶೀಲನೆ ಬಳಿಕ ಕರ್ತವ್ಯಲೋಪ ಎಸಗಿರುವುದು ಮೇಲ್ನೋಟಕ್ಕೆ ಸಾಬೀತಾಗಿದ್ದು ಪಿಎಸ್ಐ ಅಮಾನತು ಮಾಡಿ ಡಿಸಿಪಿ ಆದೇಶ ಹೊರಡಿಸಿದ್ದಾರೆ.
ಘಟನೆಯ ಮತ್ತಷ್ಟು ವಿವರ:
ಇತ್ತೀಚೆಗೆ ತೌಸೀಫ್ ಪಾಷ ನೆರೆಮನೆಯವರೊಂದಿಗೆ ಜಗಳವಾಡಿದ ಸಂಬಂಧ ವಶಕ್ಕೆ ಪಡೆದಿದ್ದ ಸಬ್ಇನ್ಸ್ಪೆಕ್ಟರ್ ಹರೀಶ್, ತೌಸೀಫ್‌ನನ್ನು ಠಾಣೆಗೆ ಕರೆತಂದು ಮನಸೋ ಇಚ್ಛೆ ಥಳಿಸಿದ್ದರಂತೆ. ಕುಡಿಯಲು ನೀರು ಕೇಳಿದರೆ ಬಾಟಲಿಗೆ ಮೂತ್ರ ತುಂಬಿ ಕುಡಿಯಲು ಕೊಟ್ಟಿದ್ದರಂತೆ. ಎರಡು ದಿನಗಳ ಬಳಿಕ ತೌಸೀಪ್‌ನನ್ನು ಪಿಎಸ್‌ಐ ಮನೆಗೆ ಕಳುಹಿಸಿದ್ದಾರೆ. ನಿತ್ರಾಣ ಸ್ಥಿತಿಯಲ್ಲಿದ್ದ ಪುತ್ರನನ್ನು ಕುಟುಂಬದವರು ಆಸ್ಪತ್ರೆಗೆ ದಾಖಲಿಸಿದ್ದರು. ಪೊಲೀಸರ ಹಲ್ಲೆಯಿಂದ ಗುಪ್ತಾಂಗಕ್ಕೂ ಸಹ ಗಾಯವಾಗಿದೆ ಎಂದು ತೌಸೀಫ್ ನೋವು ತೋಡಿಕೊಂಡಿದ್ದರು.