ಬೆಂಗಳೂರು: ಕರ್ನಾಟಕ ಉಗ್ರರ ಅಡಗು ತಾಣವಾಗ್ತಿದೆಯಾ ಎಂಬ ಆತಂಕಕಾರಿ ಪ್ರಶ್ನೆ ಇತ್ತೀಚಿನ ಪ್ರಕರಣಗಳನ್ನು ಗಮನಿಸಿದಾಗ ಉದ್ಭವಿಸುತ್ತದೆ. ಕಳೆದ ಒಂದು ವರ್ಷದಲ್ಲಿ ರಾಜ್ಯದಲ್ಲಿ ಸೆರೆ ಸಿಕ್ಕ ಶಂಕಿತ ಉಗ್ರರ ಸಂಖ್ಯೆ ಕೇಳಿದ್ರೆ ನಿಜಕ್ಕೂ ಆತಂಕ ಮೂಡುತ್ತದೆ. ಕರ್ನಾಟಕ ಉಗ್ರರಿಗೆ ಸುರಕ್ಷಿತ ತಾಣವಾಗಿ ಮಾರ್ಪಾಡಾಗಿದೆಯೇ ಅನ್ನೋ ಅನುಮಾನವೂ ಇತ್ತೀಚಿನ ದಿನಗಳಲ್ಲಿ ಮೂಡಿದೆ. ಕಳೆದ ವರ್ಷದ ಜೂನ್ ತಿಂಗಳಿನಿಂದ ಇಲ್ಲಿವರೆಗೆ ರಾಜ್ಯದಲ್ಲಿ ಒಟ್ಟು ಎಂಟು ಮಂದಿ ಶಂಕಿತ ಉಗ್ರರನ್ನು ಸೆರೆಹಿಡಿಯಲಾಗಿದ್ದು, ಈ ಉಗ್ರರನ್ನು ಮಂಗಳೂರು ಹಾಗೂ ಬೆಂಗಳೂರಿನಲ್ಲಿ ಬಂಧಿಸಲಾಗಿದೆ.
ರಾಜ್ಯದಲ್ಲಿ ಒಂದೇ ವರ್ಷದಲ್ಲಿ ಎಂಟು ಜನ ಉಗ್ರರನ್ನು ಪತ್ತೆ ಹಚ್ಚಿರುವುದು ಇದೇ ಮೊದಲಾಗಿದ್ದು, ಬಂಧಿತರ ವಿವರ ಈ ಕೆಳಗಿನಂತಿದೆ. ಈ ಹಿಂದೆ ಕೇರಳದಲ್ಲಿ ಐಸಿಸ್ ನೇಮಕಾತಿ ಪ್ರಕರಣದಲ್ಲಿ ಅಮರ್ ಅಬ್ದುಲ್ ರೆಹಮಾನ್ ಹಾಗೂ ಶಂಕರ್ ವೆಂಕಟೇಶ್ ಪೆರುಮಾಳ್ ಎಂಬವರನ್ನು ಬಂಧಿಸಲಾಗಿತ್ತು. ಬೆಂಗಳೂರಿನಲ್ಲಿದ್ದುಕೊಂಡು ಐಸಿಸ್ ನೇಮಕಾತಿಯಲ್ಲಿ ತೊಡಗಿದ್ದ ಜೋಯೆಬ್ ಮನ್ನಾ, ಇರ್ಫಾನ್ ನಾಸೀರ್, ಮಹಮ್ಮದ್ ತಕ್ವೀರ್, ಅಹಮ್ಮದ್ ಖಾದರ್ ಎಂಬವರನ್ನು ಬಲೆಗೆ ಕೆಡವಲಾಗಿತ್ತು. ಬಳಿಕ ಇದೇ ಜನವರಿಯಲ್ಲಿ ಐಸಿಸ್ ಜೊತೆ ಸಂಪರ್ಕ ಇಟ್ಟುಕೊಂಡಿದ್ದ ಬಗ್ಗೆ ದೀಪ್ತಿ ಮಾರ್ಲ ಎಂಬ ಮಹಿಳೆಯನ್ನು ಮಂಗಳೂರಿನಲ್ಲಿ ಬಂಧಿಸಲಾಗಿತ್ತು. ಇದೀಗ ಮತ್ತೊಬ್ಬ ಹಿಜ್ಬುಲ್ ಮುಜಾಹಿದ್ದೀನ್ ಉಗ್ರ ತಾಲೀಬ್ ಹುಸೇನ್ ಎಂಬಾತನನ್ನು ಜಮ್ಮು ಕಾಶ್ಮೀರ ಮತ್ತು ರಾಜ್ಯ ಪೊಲೀಸರು ಬೆಂಗಳೂರಿನಲ್ಲಿ ಜಂಟಿ ಕಾರ್ಯಾಚರಣೆ ನಡೆಸಿ ಹೆಡೆಮುರಿ ಕಟ್ಟಿದ್ದಾರೆ.
ಕಳೆದ ಎರಡು ವರ್ಷದಿಂದ ನಗರದಲ್ಲಿ ವಾಸವಾಗಿದ್ದ ತಾಲೀಬ್ ನನ್ನು ಕಾಶ್ಮೀರ ಪೊಲೀಸರು ಬಂಧಿಸುವವರೆಗೂ ಉಗ್ರನ ಬಗ್ಗೆ ಸ್ಥಳೀಯ ಪೊಲೀಸರಿಗೆ ಮಾಹಿತಿ ಇರಲಿಲ್ಲ ಎಂದು ಖುದ್ದು ಪೊಲೀಸ್ ಕಮೀಷನರ್ ಹೇಳಿರುವುದು ಆತಂಕಕಾರಿ ವಿಚಾರವಾಗಿದೆ. ಇಷ್ಟು ಪ್ರಮಾಣದಲ್ಲಿ ಉಗ್ರರು ಸಿಕ್ಕಿಬೀಳುತ್ತಿದ್ದರೂ ಗೃಹ ಇಲಾಖೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಆಂತರಿಕ ಭದ್ರತಾ ವಿಚಾರವನ್ನು ಸರ್ಕಾರಗಳು ಇನ್ನೂ ಗಂಭೀರವಾಗಿ ಪರಿಗಣಿಸಿದಂತೆ ಕಾಣುತ್ತಿಲ್ಲ. ಹಾಗಾಗಿ ಕರ್ನಾಟಕ ಉಗ್ರರ ಅಡಗುತಾಣವಾಗಿ ಮಾರ್ಪಾಡಾಗುತ್ತಿದೆಯಾ ಎಂಬ ಅನುಮಾನ ಸಹಜವಾಗಿ ಮೂಡತೊಡಗಿದೆ.
ಓದಿ : ಧಾರ್ಮಿಕ ಭಾವನೆಗಳಿಗೆ ಧಕ್ಕೆ: ಹೈದರಾಬಾದ್ ಬಿಜೆಪಿ ಶಾಸಕನ ವಿರುದ್ಧ ಪ್ರಕರಣ