ಬೆಂಗಳೂರು: ನಗರದ ಬಾಡಿಗೆ ಮನೆಯೊಂದರಲ್ಲಿ ವಾಸ ಮಾಡುತ್ತಿದ್ದ ಶಂಕಿತ ಉಗ್ರನನ್ನು ಸಿಸಿಬಿ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಸ್ಸೋಂ ಮೂಲದ ಅಖ್ತರ್ ಹುಸೇನ್ ಲಷ್ಕರ್ ಎಂಬಾತನೆ ಬಂಧಿತ ಶಂಕಿತ ಉಗ್ರನಾಗಿದ್ದಾನೆ. ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬಿಟಿಪಿ ಪ್ರದೇಶದ ಕಟ್ಟಡದ 3ನೇ ಮಹಡಿಯಲ್ಲಿ ಅಖ್ತರ್ ವಾಸವಾಗಿದ್ದ. ರೂಮ್ನಲ್ಲಿದ್ದ ಇತರ ಮೂವರು ಯುವಕರು ಫುಡ್ ಡೆಲಿವರಿ ಕೆಲಸ ಮಾಡುತ್ತಿದ್ದರು. ನಾಲ್ವರೂ ಸಹ ರಾತ್ರಿ ವೇಳೆ ಮಾತ್ರ ಓಡಾಟ ನಡೆಸುತ್ತಿದ್ದು, ಸ್ಥಳೀಯರೊಂದಿಗೆ ಸಂಪರ್ಕದಲ್ಲಿ ಇರಲಿಲ್ಲ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: ಬೆಂಗಳೂರಲ್ಲಿ ಠಿಕಾಣಿ ಹೂಡಿದ್ದ ಹಿಜ್ಬುಲ್ ಉಗ್ರ ಸಂಘಟನೆ ಕಮಾಂಡರ್ ಅರೆಸ್ಟ್
ಶಂಕಿತ ಉಗ್ರನ ವಾಸ್ತವ್ಯ ಬಗ್ಗೆ ಖಚಿತ ಮಾಹಿತಿ ಸಂಗ್ರಹಿಸಿದ ಪೊಲೀಸರು ನಿನ್ನೆ ಸಂಜೆ 5 ಗಂಟೆಯಿಂದಲೇ ಮನೆ ಬಳಿ ಕಾದು ಕುಳಿತಿದ್ದರು. 7 ಗಂಟೆ ಸುಮಾರಿಗೆ ಅಖ್ತರ್ ಹುಸೇನ್ ಮನೆಗೆ ಬಂದಿದ್ದಾನೆ. ಕೆಲ ಹೊತ್ತಿನ ಬಳಿಕ ಜಮಾವಣೆಗೊಂಡ ಸಿಸಿಬಿ ತಂಡ ದಾಳಿ ನಡೆಸಿ ಶಂಕಿತ ಉಗ್ರ ಸೇರಿ ನಾಲ್ವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದೆ.
ಕಳೆದ ತಿಂಗಳಷ್ಟೇ ಹಿಜ್ಬುಲ್ ಮುಜಾಹಿದ್ದೀನ್ ಕಮಾಂಡರ್ ಆಗಿದ್ದ ತಾಲೀಬ್ ಹುಸೇನ್ ಎಂಬಾತನನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿತ್ತು. ಆತ ಕಳೆದ ಕೆಲ ತಿಂಗಳಿನಿಂದ ನಗರದ ಶ್ರೀರಾಮಪುರದಲ್ಲಿ ನೆಲೆಸಿದ್ದ. ಇದೀಗ ಮತ್ತೊಬ್ಬ ಶಂಕಿತ ಉಗ್ರನನ್ನು ವಶಕ್ಕೆ ಪಡೆಯಲಾಗಿದೆ.
ಇದನ್ನೂ ಓದಿ: ದುಷ್ಟರಿಂದ ಪಿಒಕೆ ಜನರ ರಕ್ಷಣೆಗೆ ಭಾರತ ಸದಾ ಬದ್ಧ: ರಾಜನಾಥ್ ಸಿಂಗ್
ಜೊತೆಗಿದ್ದ ಮೂವರನ್ನು ಕಸ್ಟಡಿ ಪಡೆದುಕೊಂಡಿಲ್ಲ: ನಗರದಲ್ಲಿ ನೆಲೆಯೂರಿದ್ದ ಮನೆ ಮೇಲೆ ದಾಳಿ ಮಾಡಿ ಶಂಕಿತ ಉಗ್ರನನ್ನು ವಶಕ್ಕೆ ಪಡೆದುಕೊಳ್ಳಲಾಗಿದ್ದು, ಜೊತೆಯಲ್ಲಿದ್ದ ಮೂವರನ್ನು ತನಿಖೆಗೆ ಒಳಪಡಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ ಸ್ಪಷ್ಟಪಡಿಸಿದ್ದಾರೆ.
ಕೇಂದ್ರ ಹಾಗೂ ರಾಜ್ಯ ತನಿಖಾ ಸಂಸ್ಥೆಗಳ ನೆರವಿನಿಂದ ನಗರ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ನಿನ್ನೆ ತಿಲಕ್ ನಗರದ ಮನೆಯೊಂದರ ಮೇಲೆ ದಾಳಿ ನಡೆಸಿ ಶಂಕಿತ ಉಗ್ರನನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಈತನ ಜೊತೆಯಲ್ಲಿ ವಾಸವಿದ್ದ ಅಸ್ಸೋಂ ಮೂಲದ ಮೂವರು ಯುವಕರನ್ನ ಪ್ರಶ್ನಿಸಲಾಗುತ್ತಿದೆ.
ತನಿಖೆಯಲ್ಲಿ ಇವರ ಪಾತ್ರ ಕಂಡುಬಂದರೆ ವಶಕ್ಕೆ ಪಡೆದುಕೊಳ್ಳಲಾಗುವುದು ಎಂದು ಆಯುಕ್ತರು ತಿಳಿಸಿದ್ದಾರೆ. ನಗರದಲ್ಲಿ ಡೆಲಿವರಿ ಬಾಯ್ ಆಗಿ ಕೆಲಸ ಮಾಡುತ್ತಿದ್ದ. ಈತನ ಉಗ್ರ ಚಟುವಟಿಕೆ ಬಗ್ಗೆ ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ ಎಂದು ಇದೇ ವೇಳೆ ಅವರು ಮಾಹಿತಿ ನೀಡಿದರು.
ಗೃಹ ಸಚಿವರಿಂದ ಮೆಚ್ಚುಗೆ : ಈ ಬಗ್ಗೆ ಪ್ರತಿಕ್ರಿಯಿಸಿರುವ ಗೃಹ ಸಚಿವ ಆರಗ ಜ್ಞಾನೇಂದ್ರ ಉಗ್ರ ಸಂಘಟನೆ ಯೊಂದಕ್ಕೆ ಸೇರಿದ್ದಾನೆ ಎಂದು ಹೇಳಲಾಗುತ್ತಿರುವ ಶಂಕಿತ ಉಗ್ರನನ್ನ ನಗರ ಪೊಲೀಸರು ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ.
ಉಗ್ರನ ಜೊತೆಗೆ ಇದ್ದ ಸ್ಥಳೀಯ ಸಹಚರರನ್ನು ಸಹ ವಿಚಾರಣೆ ನಡೆದಿದ್ದು, ಅವನು ನಡೆಸಿದ ಚಟುವಟಿಕೆಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇತ್ತೀಚೆಗೆ ಜಮ್ಮು ಕಾಶ್ಮೀರದಲ್ಲಿ ಭಯೋತ್ಪಾದಕ ಸಂಘಟನೆಗಳ ಜತೆ ಸಂಪರ್ಕ ಹೊಂದಿದ್ದ ಹಾಗೂ ಓಕಳಿಪುರಂನಲ್ಲಿ ನೆಲೆಸಿದ್ದ ಉಗ್ರನನ್ನ ಬೆಂಗಳೂರು ಪೊಲೀಸರು ಬಂಧಿಸಿದ ನಂತರ, ಮತ್ತೊಬ್ಬ ಶಂಕಿತ ಉಗ್ರನನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದುಕೊಂಡಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಚಿತ್ತೂರಿನ ಮೃತರಾದ ಪೊಲೀಸರಿಗೆ ಗೌರವ ನಮನ : ಇದಕ್ಕೂ ಮುನ್ನ ನಗರ ಪೊಲೀಸ್ ಇಲಾಖೆಯಿಂದ ರಸ್ತೆ ಅಪಘಾತದಲ್ಲಿ ಮೃತರಾದ ಪಿಎಸ್ಐ ಅವಿನಾಶ್, ಕಾನ್ ಸ್ಟೇಬಲ್ ಅನಿಲ್ ಭಾವಚಿತ್ರಗಳಿಗೆ ಪುಷ್ಪ ಹಾಕಿ ಗೌರವವನ್ನ ಸೂಚಿಸಿತು. ಬಳಿಕ ಮಾತನಾಡಿದ ಆಯುಕ್ತರು ನಿನ್ನೆ ಚಿತ್ತೂರು ಬಳಿ ನಡೆದ ಅಪಘಾತದಲ್ಲಿ ಇಬ್ಬರು ಪೊಲೀಸರು ಸಾವನ್ನಪ್ಪಿದ್ದಾರೆ.
ಗಾಯಗೊಂಡಿರುವ ಪಿಎಸ್ಐ ದೀಕ್ಷಿತ್ ನಗರಕ್ಕೆ ಕರೆತಂದು ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ. ಮತ್ತೋರ್ವ ಕಾನ್ ಸ್ಟೇಬಲ್ ಸಹ ಚಿತ್ತೂರು ಬಳಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ ಎಂದರು.