ಬೆಂಗಳೂರು: ಸಾಗರ ತಾಲೂಕಿನ ಖಂಡಿಕಾ ಗ್ರಾಮದ ಶ್ರೀಕಾಂತ್ ನಾಯ್ಕ್ ಹಾಗೂ ಸುಜಾತ ನಾಯ್ಕ್ ಎಂಬುವರು ದಯಾಮರಣ ನೀಡುವಂತೆ ರಾಷ್ಟ್ರಪತಿಗೆ ಅರ್ಜಿ ಸಲ್ಲಿಸಿದರು. ತಮ್ಮ ಜಮೀನಿನಲ್ಲಿ ಲೇಔಟ್ ನಿರ್ಮಾಣ ಮಾಡಿದ್ದು, ಈಗಾಗಲೇ ಗ್ರಾಮ ಪಂಚಾಯತ್‌ಗೆ ಹಣ ಕಟ್ಟಿದ್ದಾರೆ. ಇದೀಗ ತಾಲೂಕು ಪಂಚಾಯತ್‌ನ ಹಿರಿಯ ಅಧಿಕಾರಿಯೊಬ್ಬರು ಮತ್ತೆ 10 ಲಕ್ಷ ರೂ.ಗೆ ಬೇಡಿಕೆ ಇಟ್ಟಿದ್ದು, ಮತ್ತೋರ್ವ ಅಧಿಕಾರಿಯ ಮೂಲಕ ಒತ್ತಡ ಹಾಕಿಸುತ್ತಿದ್ದಾರೆ ಎಂದು ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವುದು ದೊಡ್ಡ ಸುದ್ದಿಯಾಗಿತ್ತು.
ಈ ಹಿನ್ನೆಲೆಯಲ್ಲಿ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ ಟ್ವೀಟ್ ಮೂಲಕ ಸರ್ಕಾರಿ ಅಧಿಕಾರಿ ಲಂಚಬಾಕತನಕ್ಕೆ ಸಂಕಷ್ಟಕ್ಕೆ ಈಡಾಗಿರುವ ಕುಟುಂಬ ದಯಾಮರಣಕ್ಕೆ ಅರ್ಜಿ ಸಲ್ಲಿಸಿರುವುದು ದುರದೃಷ್ಟಕರ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ಈ ಕೊಲೆಗಡುಕ ಸರ್ಕಾರಕ್ಕೆ ಇನ್ನೆಷ್ಟು ಜನರ ಪ್ರಾಣ ಬೇಕೋ! ಒಂದು ಕುಟುಂಬವೇ ಈ ಸರ್ಕಾರದ ಲಂಚಬಾಕತನಕ್ಕೆ ಬೇಸತ್ತು ದಯಾಮರಣಕ್ಕೆ ಪತ್ರ ಬರೆದಿದ್ದಾರೆಂದರೆ ಇದೆಂಥ ಮಾನಗೆಟ್ಟ ನರಹಂತಕ ಸರ್ಕಾರವಿರಬೇಕು!
ಇನ್ನೆಷ್ಟು ಸಂತೋಷ ಪಾಟೀಲ್ ನಂಥವರು ಈ ಸರ್ಕಾರದ ಲಂಚಬಾಕ ಮೃಗಗಳಿಗೆ ಬಲಿಯಾಗಬೇಕು? ರೀ ಪ್ರಧಾನಿಗಳೇ ನೋಡಿ ನಿಮ್ಮ ಶೇ 40ರಷ್ಟು ಕಮಿಷನ್ ಸರ್ಕಾರದ ಅಸಹ್ಯವನ್ನ! ಎಂದು ಪ್ರಶ್ನೆ ಮಾಡಿದ್ದಾರೆ.
ಇದನ್ನೂ ಓದಿ: 'ಅಧಿಕಾರಿಗಳಿಗೆ ಲಂಚ ನೀಡಲು ಆಗುತ್ತಿಲ್ಲ': ದಯಾಮರಣಕ್ಕೆ ಅರ್ಜಿ ಸಲ್ಲಿಸಿದ ದಂಪತಿ