ಬೆಂಗಳೂರು : ಕೆಪಿಸಿಸಿ ಅಧ್ಯಕ್ಷ ಡಿ ಕೆ ಶಿವಕುಮಾರ್ ಅವರು ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಎಸ್ ಸುರೇಶ್‌ಕುಮಾರ್ ಅವರ ರಾಜೀನಾಮೆಗೆ ಒತ್ತಾಯಿಸುತ್ತಿರುವುದು ಹಾಸ್ಯಾಸ್ಪದ. ಸುರೇಶ್ ಕುಮಾರ್ ಅವರ ಬಗ್ಗೆ ಮಾತನಾಡುವ ಯಾವುದೇ ನೈತಿಕತೆ ಕೆಪಿಸಿಸಿ ಅಧ್ಯಕ್ಷರಿಗೆ ಇಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ತಿರುಗೇಟು ನೀಡಿದ್ದಾರೆ.
ಎಸ್ಎಸ್ಎಲ್‌ಸಿ, ದ್ವಿತೀಯ ಪಿಯುಸಿ ಮತ್ತು ಸಿಇಟಿ ಪರೀಕ್ಷೆಗಳು ಸುರಕ್ಷಿತ ಮತ್ತು ಯಾವುದೇ ಒತ್ತಡವಿಲ್ಲದೆ ನಡೆದಿವೆ. ಶೇ.98ರಷ್ಟು ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು. ಸುರೇಶ್ ಕುಮಾರ್ ಅವರು ಎಲ್ಲಾ ಜಿಲ್ಲೆಗಳಿಗೂ ಪ್ರವಾಸ ಮಾಡಿ, ಸುರಕ್ಷತಾ ಕ್ರಮಗಳ ಕುರಿತಂತೆ ಅಧಿಕಾರಿಗಳು, ಶಿಕ್ಷಕರು ಮತ್ತು ಪಾಲಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿ ಈ ಮೂರೂ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಪೋಷಕರು ಮತ್ತು ವಿದ್ಯಾರ್ಥಿಗಳ ಮೆಚ್ಚುಗೆಗೂ ಪಾತ್ರರಾಗಿದ್ದಾರೆ. ಅವರ ರಾಜೀನಾಮೆ ಕೇಳುವುದು ಹಾಸ್ಯಾಸ್ಪದ ಎಂದು ಪತ್ರಿಕಾ ಹೇಳಿಕೆ ನೀಡಿದ್ದಾರೆ.
ಪರೀಕ್ಷೆಗಳು ನಡೆದ ಆ ದಿನಗಳ ದಿನಪತ್ರಿಕೆಗಳನ್ನು ಕೆಪಿಸಿಸಿ ಅಧ್ಯಕ್ಷರು ಒಮ್ಮೆ ನೋಡಲಿ, ಎಲ್ಲ ಪತ್ರಿಕೆಗಳೂ ಸುಗಮವಾಗಿ ಪರೀಕ್ಷೆ ನಡೆಸಿದ್ದಕ್ಕಾಗಿ ಸುರೇಶ್ ಕುಮಾರ್ ಅವರಿಗೆ 100ಕ್ಕೆ 100 ಅಂಕ ನೀಡಿದ್ದವು ಮತ್ತು ಶಿಕ್ಷಣ ಸಚಿವರು `ಪ್ರಥಮ ರ್ಯಾಂಕ್ನಲ್ಲಿ ಪಾಸಾಗಿದ್ದಾರೆ' ಎಂದು ಬಣ್ಣಿಸಿದ್ದಾರೆ. ಶಿವಕುಮಾರ್ ಅವರು ಕೇವಲ ಶೇ.55ರಷ್ಟು ವಿದ್ಯಾರ್ಥಿಗಳು ಮಾತ್ರ ಆನ್‌ಲೈನ್ ಕಲಿಕೆಗೆ ಪ್ರವೇಶಾವಕಾಶವಿದೆ ಎಂದು ಹೇಳಿದ್ದಾರೆ. ಕಳೆದ ಆರು ದಶಕಗಳ ಕಾಲ ಆಳಿದ ಕಾಂಗ್ರೆಸ್ ಪಕ್ಷದ ದುರಾಡಳಿತದ ಫಲವಾಗಿ ಈ ಕೆಟ್ಟ ಪರಂಪರೆ ಇದೆ.
ಕಾಲ ಕಾಲಕ್ಕೆ ಪರೀಕ್ಷೆಗೆ ಒಡ್ಡಿಕೊಂಡು ಸಾಂಪ್ರದಾಯಿಕ ಮೌಲ್ಯಗಳನ್ನು ನಂಬುವ ವ್ಯಕ್ತಿ, ಸುರೇಶ್ ಕುಮಾರ್ ಅವರಾಗಿದ್ದು, ಗ್ರಾಮೀಣ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣ ಪಡೆಯಲು ಸಾಧ್ಯವಾಗುವಂತೆ “ವಿದ್ಯಾಗಮ” ಯೋಜನೆ ರೂಪಿಸಿ ಜಾರಿಗೆ ತಂದಿದ್ದಾರೆ. ಅದಕ್ಕೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ ಎಂದು ಸುರೇಶ್ ಕುಮಾರ್ ಕಾರ್ಯ ವೈಖರಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಸರ್ಕಾರಿ ಶಾಲಾ ಶಿಕ್ಷಕಿಯ ಪುತ್ರ ಸುರೇಶ್ ಕುಮಾರ್ ಅವರಿಗೆ ಶಿಕ್ಷಕರು ಎದುರಿಸುವ ಸಮಸ್ಯೆಗಳು ಸಂಪೂರ್ಣ ತಿಳಿದಿವೆ. ಕೋವಿಡ್ -19ರ ಲಾಕ್‌ಡೌನ್ ಸಂಕಷ್ಟದಲ್ಲಿ ಶಿಕ್ಷಕರು ಎದುರಿಸುವ ಸಂಕಷ್ಟದ ಅರಿವು ಇದೆ. ಆ ಸಂಕಷ್ಟ ತಗ್ಗಿಸಲು ಅವರು ಪ್ರಾಮಾಣಿಕ ಪ್ರಯತ್ನ ಮಾಡಿದ್ದಾರೆ. ವಸ್ತುಸ್ಥಿತಿ ಹೀಗಿರುವಾಗ ಡಿಕೆಶಿ ಅವರು ಸುರೇಶ್ ಕುಮಾರ್ ಅವರ ರಾಜೀನಾಮೆ ಕೇಳುವುದರಲ್ಲಿ ಅರ್ಥವೇ ಇಲ್ಲ ಎಂದಿದ್ದಾರೆ ರವಿಕುಮಾರ್.