ಬೆಂಗಳೂರು: 1ರಿಂದ 7ನೇ ತರಗತಿವರೆಗೆ ಆನ್‌ಲೈನ್ ತರಗತಿಗಳು ನಡೆಯುವುದಿಲ್ಲ. ಇದು ಸಚಿವ ಸಂಪುಟದ ತೀರ್ಮಾನವಾಗಿದ್ದು, ಕೂಡಲೇ ಶಿಕ್ಷಣ ಇಲಾಖೆಯ ಮೂಲಕ ಈ ಮಾಹಿತಿ ತಲುಪಿಸಲಾಗುತ್ತದೆ ಎಂಬ ಸಂಸದೀಯ ವ್ಯವಹಾರಗಳ ಖಾತೆ ಸಚಿವ ಮಾಧುಸ್ವಾಮಿ ಹೇಳಿಕೆಗೆ ಶಿಕ್ಷಣ ಸಚಿವ ಸುರೇಶ್ ಕುಮಾರ್ ಯೂಟರ್ನ್ ಹೊಡೆದಿದ್ದಾರೆ.
ಈ ಬಗ್ಗೆ ತಮ್ಮ ಟ್ವಿಟರ್ನಲ್ಲಿ ಬರೆದುಕೊಂಡಿರುವ ಸಚಿವರು, ಎಲ್ಕೆಜಿ-ಯುಕೆಜಿ ಮತ್ತು ಐದನೇ ತರಗತಿಯವರೆಗೆ ಆನ್‌ಲೈನ್ ಶಿಕ್ಷಣ ನೀಡುವುದನ್ನು ನಿಲ್ಲಿಸಲು ಸರ್ಕಾರ ನಿರ್ಧರಿಸಿದೆ. ಇಂದು ಸಚಿವ ಸಂಪುಟ ಸಭೆಯಲ್ಲಿ ಕೆಲ ಸಚಿವರು ಆನ್‌ಲೈನ್ ಶಿಕ್ಷಣ ನಿಲ್ಲಿಸುವ ಈ ನಿರ್ಧಾರವನ್ನು ಏಳನೇ ತರಗತಿಯವರೆಗೆ ವಿಸ್ತರಿಸಬೇಕೆಂದು ಸಲಹೆ ನೀಡಿದರು ಅಷ್ಟೇ ಎಂದು ತಿಳಿಸಿದ್ದಾರೆ.
ಅಲ್ಲದೆ ಎಲ್ಲೋ ಕೊಂಚ ಗೊಂದಲವಾಗಿ ಈ ರೀತಿ ಸುದ್ದಿಗೋಷ್ಠಿ ವೇಳೆ ಹೇಳಿರಬೇಕು. ಅದು ಸಲಹೆ ಮಾತ್ರವಾಗಿದ್ದು, ಆನ್‌ಲೈನ್ ಶಿಕ್ಷಣ ನೀಡುವುದನ್ನು ಎಲ್ಕೆಜಿ-ಯುಕೆಜಿ ಮತ್ತು ಪ್ರಾಥಮಿಕ ಹಂತದ ಐದನೇ ತರಗತಿವರೆಗೆ ನಿಲ್ಲಿಸುವುದು ಸರ್ಕಾರದ ನಿರ್ಧಾರವಾಗಿದೆ ಎಂದು ಬರೆದುಕೊಂಡಿದ್ದಾರೆ.
ಸದ್ಯ 5ನೇ ತರಗತಿವರೆಗೆ ಆನ್‌ಲೈನ್ ಶಿಕ್ಷಣ ರದ್ದುಗೊಳ್ಳಿಸಲಾಗಿದ್ದು, 6ನೇ ತರಗತಿಯ ನಂತರದ ಮಕ್ಕಳಿಗೆ ರೆಕಾರ್ಡೆಡ್ ವಿಡಿಯೋ, ಯಾವ ರೀತಿ ವಿಡಿಯೋ ಸ್ಕ್ರೀನಿಂಗ್, ಯಾವ ಸಮಯದಲ್ಲಿ ಎಂಬುದನ್ನ ಸಮಿತಿ ನಿರ್ಧರಿಸಲಿದೆ. ವರದಿ ಬಂದ ನಂತರ ನಿರ್ಧಾರ ತಿಳಿಸಲಾಗುತ್ತೆ ಎಂದು ಸ್ಪಷ್ಟಪಡಿಸಿದ್ದಾರೆ.