ಬೆಂಗಳೂರು: ಆಡಿಸುವಾತನ ಕೈಚಳಕದಲ್ಲಿ ಎಲ್ಲವೂ ಅಡಗಿದೆ ಎಂಬ ಮೂಲಕ ಕಾಂಗ್ರೆಸ್ ಶಾಸಕರ ರಾಜೀನಾಮೆ ಹಿಂದೆ ಮಾಜಿ ಸಿಎಂ ಸಿದ್ದರಾಮಯ್ಯರ ಕೈಚಳಕ ಇದೆ ಎಂದು ಸುರೇಶ್ ಕುಮಾರ್ ಪರೋಕ್ಷವಾಗಿ ಆರೋಪಿಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಆನಂದ್ ಸಿಂಗ್ ಮತ್ತು ರಮೇಶ್ ಜಾರಕಿಹೊಳಿ ರಾಜೀನಾಮೆಗೆ ಪ್ರತಿಕ್ರಿಯಿಸುತ್ತಾ, ನನಗೆ ಒಂದು ಹಾಡು ನೆನಪಾಗುತ್ತದೆ. ಆಡಿಸುವಾತನ ಕೈಚಳಕದಲ್ಲಿ ಎಲ್ಲಾ ಅಡಗಿದೆ. ಆ ಆಡಿಸುವಾತ ಯಾರು ಎಂಬುದು ಪ್ರಶ್ನೆ. ಯಾರಿಗೆ ಈ ಸರ್ಕಾರ ನಡೆಯುವುದು ಇಷ್ಟ ಇಲ್ಲವೋ, ಅವರು ಇದನ್ನೆಲ್ಲಾ ಮಾಡುತ್ತಿದ್ದಾರೆ ಎಂದು ಪರೋಕ್ಷವಾಗಿ ಸಿದ್ದರಾಮಯ್ಯ ವಿರುದ್ಧ ಆರೋಪಿಸಿದರು.
ಸಮನ್ವಯ ಸಮಿತಿ, ಆ ಸಮನ್ವಯ ಯಾರ ಕೈಯ್ಯಲ್ಲಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ಅತೃಪ್ತಿ ಹೋಗಲಾಡಿಸುವ ಆ ಶಕ್ತಿ ಯಾರಿಗಿದೆ. ಯಾರು ಎಲ್ಲರನ್ನೂ ಕರೆದುಕೊಂಡು ಹೋಗಬಹುದು ಎಂಬುದು ಇಡೀ ರಾಜ್ಯಕ್ಕೆ ಗೊತ್ತಿದೆ ಎಂದು ಸೂಚ್ಯವಾಗಿ ತಿಳಿಸಿದರು. ರಾಜ್ಯದ ಬರ ಪರಿಸ್ಥಿತಿ ಕುರಿತು ಬಿಜೆಪಿಗೆ ಚಿಂತೆ. ಮೈತ್ರಿ ಸರ್ಕಾರ ಅದರ ಬಗ್ಗೆ ಗಮನ ಹರಿಸುತ್ತಿಲ್ಲ. ಒಂದು ಜವಾಬ್ದಾರಿಯುತ ವಿಪಕ್ಷವಾಗಿ ನಾವು ನಮ್ಮ ಕೆಲಸ ಮಾಡುತ್ತಿದ್ದೇವೆ ಎಂದು ಸ್ಪಷ್ಟಪಡಿಸಿದರು.
ಇಪ್ಪತ್ತು ಶಾಸಕರು ಅತೃಪ್ತರಾಗಿದ್ದಾರೆ ಎಂಬ ಸುದ್ದಿ ಹಲವು ದಿನಗಳಿಂದ ಹರಿದಾಡುತ್ತಿದೆ. ಅವರ ಅತೃಪ್ತಿ ಶಮನ ಮಾಡಲು ಕಾಂಗ್ರೆಸ್ ಹೋಗಿಲ್ಲ. ಆನಂದ್ ಸಿಂಗ್ ಜಿಂದಾಲ್ ಪ್ರಕರಣ ಉಲ್ಲೇಖ ಮಾಡಿದ್ದಾರೆ. ಇತ್ತ ರಮೇಶ್ ಜಾರಕಿಹೊಳಿಯೂ ಅಸಮಾಧಾನಗೊಂಡಿದ್ದಾರೆ. ಇದು ಸಂಪೂರ್ಣ ಕಾಂಗ್ರೆಸ್ ಪಕ್ಷದ ವೈಫಲ್ಯ ಎಂದು ಆಪಾದಿಸಿದರು.