ಬೆಂಗಳೂರು: ರಾಜ್ಯದಲ್ಲಿ ಕೊರೊನಾ ಭೀತಿ ಹಿನ್ನೆಲೆ ಶಾಲೆಗಳ ಆರಂಭಕ್ಕೆ ತಾತ್ಕಾಲಿಕ ತಡೆ ಹಿಡಿಯಲಾಗಿದೆ. ಕೋವಿಡ್ ಸಂದರ್ಭದಲ್ಲಿ ಮಕ್ಕಳ ಕಲಿಕೆಯನ್ನು ಮುಂದುವರೆಸುವ ಹಲವಾರು ಕ್ರಿಯಾಶೀಲ ಕಾರ್ಯಕ್ರಮಗಳಿಗೆ ಇಲಾಖೆ ಚಾಲನೆ ನೀಡಿದೆ.
ಮೊದಲಿಗೆ ತಂತ್ರಜ್ಞಾನ ಆಧಾರಿತ ಶಿಕ್ಷಣವನ್ನು ನೀಡುವಲ್ಲಿ ತಜ್ಞ ಸಮಿತಿಯನ್ನು ರಚಿಸಿ ವರದಿ ಪಡೆಯಲಾಗಿತ್ತು. ನಂತರ ರಾಷ್ಟ್ರದಲ್ಲೇ ಮೊದಲ ಪ್ರಯತ್ನವಾಗಿ 'ವಿದ್ಯಾಗಮ' ಎಂಬ ವಿಶಿಷ್ಟ ಯೋಜನೆಯನ್ನು ಅನುಷ್ಠಾನಗೊಳಿಸಲಾಗಿದೆ.
ಮಕ್ಕಳ ಆರ್ಥಿಕ, ಸಾಮಾಜಿಕ ಹಿನ್ನೆಲೆ ಏನೇ ಇರಲಿ, ನಿರಂತರವಾಗಿ ಅವರನ್ನು ಕಲಿಕೆಯಲ್ಲಿ ತೊಡಗಿಸುವ ಕಾರ್ಯಕ್ರಮ ಅದಾಗಿದೆ. ರಾಜ್ಯಾದ್ಯಂತ ವಿದ್ಯಾಗಮವು ಕೋವಿಡ್ ನಂತರದ ಸಾಮಾಜಿಕ ಖಿನ್ನತೆಯನ್ನು ಹೊರಹಾಕಲು ಒಂದಷ್ಟು ಸಹಕಾರಿಯಾಗಿದ್ದು, ಈ ಯೋಜನೆಗೆ ಎಲ್ಲೆಡೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಇದರ ಜೊತೆಗೆ ಕಳೆದ ಎಸ್.ಎಸ್.ಎಲ್.ಸಿ ಪರೀಕ್ಷೆ ಪೂರ್ವ ಸಿದ್ಧತೆ ಸಂದರ್ಭದಲ್ಲಿ ದೂರದರ್ಶನ ಚಂದನ ವಾಹಿನಿ ಮೂಲಕ ಪುನರ್ ಮನನ ತರಗತಿಗಳನ್ನು ನಡೆಸಲಾಗಿತ್ತು. ವಿದ್ಯಾರ್ಥಿಗಳಿಗೆ ಈ ಕಾರ್ಯಕ್ರಮಗಳು ಉಪಯುಕ್ತವಾದವು. ಈಗಲೂ ಚಂದನ ವಾಹಿನಿಯ ಮೂಲಕ 8-10 ನೇ ತರಗತಿಯ ವಿದ್ಯಾರ್ಥಿಗಳಿಗೆ ಸೇತುಬಂಧ ಕಾರ್ಯಕ್ರಮಗಳನ್ನು ಪ್ರಸಾರ ಮಾಡಲಾಗುತ್ತಿದೆ. ಆದರೆ ಎಲ್ಲಾ ತರಗತಿಗಳಿಗೆ ಕನ್ನಡ ಹಾಗೂ ಆಂಗ್ಲ ಮಾಧ್ಯಮದಲ್ಲಿ ಟಿವಿ ಮೂಲಕ ಬೋಧನೆ ಮಾಡುವ ಉದ್ದೇಶ ಸಚಿವರದ್ದಾಗಿದ್ದು, ಚಂದನ ವಾಹಿನಿಯ ಇತಿಮಿತಿಗಳು ಈ ಮಹತ್ವದ ಕಾರ್ಯಕ್ಕೆ ಅಡ್ಡಿಯಾಗಿವೆ.
ಬಹುಪಾಲು ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಟಿವಿ ಸೌಲಭ್ಯ ಹೊಂದಿರುವ ಹಿನ್ನೆಲೆಯಲ್ಲಿ ದೂರದರ್ಶನದಲ್ಲಿ ಬೋಧನಾ ತರಗತಿಗಳನ್ನು ಪ್ರಸಾರ ಮಾಡುವುದು ಸಾಮಾಜಿಕವಾಗಿ ಅತ್ಯಂತ ಪ್ರಮುಖ ಜವಾಬ್ದಾರಿಯಾಗಿದೆ. ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆಯು ಹೊಂದಿರುವ ಎರಡು ಎಜ್ಯುಸಾಟ್ ಚಾನಲ್ಗಳನ್ನು ಬಳಸಿಕೊಂಡು ಉಚಿತ ಪಾಠ ಪ್ರವಚನಗಳನ್ನು ಮುಂದುವರೆಸಲು ಇಲಾಖೆ ಮುಂದಾಗಿದೆ.
ಇಂದು ವಾರ್ತಾ ಇಲಾಖೆಯ ಆಯುಕ್ತ ಡಾ. ಪಿ. ಎಸ್. ಹರ್ಷ, ರಾಜ್ಯದ ವಿವಿಧ ಕೇಬಲ್ ಆಪರೇಟರ್ ಸಂಘಗಳ ಪ್ರತಿನಿಧಿಗಳೊಂದಿಗೆ ಸಚಿವ ಸುರೇಶ್ ಕುಮಾರ್ ಸಭೆ ನಡೆಸಿದರು. ಇಲಾಖೆಯ ಮಹತ್ವದ ಆಶಯಕ್ಕೆ ಸಂಪೂರ್ಣ ಸಹಕಾರ ನೀಡಬೇಕೆಂದು ಸಚಿವರು ಕೋರಿದ್ದಾರೆ.
ಇಂದಿನ ಸಭೆಯಲ್ಲಿ ಕೇಬಲ್ /ಡಿಟಿಹೆಚ್ ಆಪರೇಟರ್ ಗಳು ನಮ್ಮ ಇಲಾಖೆಯ ಉದ್ದೇಶಿತ ಚಾನಲ್ ಗಳಲ್ಲಿ ಬಿತ್ತರವಾಗುವ ಶೈಕ್ಷಣಿಕ ಕಾರ್ಯಕ್ರಮಗಳನ್ನು ಪ್ರತಿ ಮನೆಗೆ ತಲುಪಿಸುವ ಕುರಿತಂತೆ ಇಲಾಖೆಯೊಂದಿಗೆ ಸಹಕಾರ ನೀಡುವಲ್ಲಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ಕನಿಷ್ಠ ಕ್ಯಾರಿಯೇಜ್ ಶುಲ್ಕ, ಸರ್ಕಾರದ ಆದೇಶ, ಮನೆಗಳಿಗೆ ಉಚಿತ ಪ್ರಸಾರ, ಕೇಂದ್ರ ದೂರಸಂಪರ್ಕ ಇಲಾಖೆಯ ಸಹಕಾರ ಕೋರಿಕೆ, ಯೋಜನೆಯ ಪೂರ್ವದಲ್ಲಿ ತಂತ್ರಜ್ಞಾನ ಆಧಾರಿತ ಮೌಲ್ಯಮಾಪನ ಸೇರಿದಂತೆ ಹಲವು ಕ್ರಮಗಳ ಬಗ್ಗೆ ಚರ್ಚೆಯಾಗಿದೆ. ಸಂಘಟನೆಗಳು ಸಕಾರಾತ್ಮಕವಾದ ಸ್ಪಂದನೆ ನೀಡಿದ್ದು, ಮುಂದಿನ ದಿನಗಳಲ್ಲಿ ಸ್ಪಷ್ಟ ಚಿತ್ರಣ ದೊರೆಯಲಿದೆ ಎಂದು ತಿಳಿಸಿದ್ದಾರೆ.