ಬೆಂಗಳೂರು: ವಿಧಾನಪರಿಷತ್ ಸದಸ್ಯ ಡಾ. ಸೂರಜ್ ರೇವಣ್ಣ ಆಯ್ಕೆಯನ್ನು ಅಸಿಂಧುಗೊಳಿಸುವಂತೆ ಕೋರಿ ಸಲ್ಲಿಸಿರುವ ಅರ್ಜಿ ಸಂಬಂಧ ಹೈಕೋರ್ಟ್ ಸಮನ್ಸ್ ಜಾರಿಗೊಳಿಸಲು ಆದೇಶಿಸಿದೆ.
ಸೂರಜ್ ಆಯ್ಕೆ ರದ್ದು ಕೋರಿ ಹೊಳೆನರಸೀಪುರ ತಾಲೂಕಿನ ಕಾಮಸಮುದ್ರ ಗ್ರಾಮ ಪಂಚಾಯಿತಿ ಸದಸ್ಯ ಎಲ್. ಹನುಮೇಗೌಡ ಸಲ್ಲಿಸಿರುವ ಚುನಾವಣಾ ತಕರಾರು ಅರ್ಜಿಯನ್ನು, ನ್ಯಾ. ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ಅರ್ಜಿದಾರರ ಪರ ಹಿರಿಯ ವಕೀಲೆ ಪ್ರಮೀಳಾ ನೇಸರ್ಗಿ ವಾದ ಮಂಡಿಸಿ, ಪ್ರತಿವಾದಿ ಸೂರಜ್ ರೇವಣ್ಣ ನೋಟಿಸ್ ಸ್ವೀಕರಿಸುವ ಕಾನೂನು ಪ್ರಕ್ರಿಯೆಗೆ ಸಹಕರಿಸುತ್ತಿಲ್ಲ. ಈಗಾಗಲೇ ಸಾಕಷ್ಟು ವಿಳಂಬ ಮಾಡಿದ್ದಾರೆ. ಆದ್ದರಿಂದ, ಸ್ಥಳೀಯ ಜಿಲ್ಲಾ ನ್ಯಾಯಾಧೀಶರ ಮೂಲಕ ಜಾರಿಗೊಳಿಸಲು ನಿರ್ದೇಶಿಸಬೇಕು ಎಂದು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಪೀಠ, ಕಾನೂನು ಪ್ರಕಾರ ಈಗ ಸಮನ್ಸ್ ಜಾರಿಗೊಳಿಸೋಣ. ಸ್ವೀಕರಿಸದೇ ಹೋದಲ್ಲಿ ಮುಂದಿನ ಕ್ರಮದ ಬಗ್ಗೆ ನೋಡೋಣ ಎಂದು ತಿಳಿಸಿ, ವಿಚಾರಣೆಯನ್ನು ಏಪ್ರಿಲ್ 8ಕ್ಕೆ ಮುಂದೂಡಿತು.
ಇದನ್ನೂ ಓದಿ: ಬಾಲಕನಿಗೆ ಓಪನ್ ಹಾರ್ಟ್ ಸರ್ಜರಿ ಮಾಡದೇ ಕವಾಟ ಬದಲಾಯಿಸಿದ ಜಯದೇವ ವೈದ್ಯರು
ಅರ್ಜಿದಾರರ ಮನವಿ: ಜೆಡಿಎಸ್ ಟಿಕೆಟ್ ಮೂಲಕ ವಿಧಾನಪರಿಷತ್ಗೆ ಸ್ಪರ್ಧಿಸಿ ಆಯ್ಕೆಯಾಗಿರುವ ಸೂರಜ್ ರೇವಣ್ಣ ಚುನಾವಣಾ ನಾಮಪತ್ರದಲ್ಲಿ ವೈವಾಹಿಕ ವಿವರ ಮುಚ್ಚಿಟ್ಟು ಅಕ್ರಮ ಎಸಗಿದ್ದಾರೆ. 2017ರ ಮಾರ್ಚ್ 4ರಂದು ನ್ಯಾಯಮೂರ್ತಿಯೊಬ್ಬರ ಪುತ್ರಿಯನ್ನು ಮದುವೆಯಾಗಿದ್ದರೂ, ನಾಮಪತ್ರ ಸಲ್ಲಿಕೆ ವೇಳೆ ಚುನಾವಣಾ ಆಯೋಗಕ್ಕೆ ಸಲ್ಲಿಸಿರುವ ಪ್ರಮಾಣ ಪತ್ರದ ಅರ್ಜಿ ನಮೂನೆ 26ರಲ್ಲಿ ತಮ್ಮ ಪತ್ನಿಗೆ ಸಂಬಂಧಿಸಿದ ಯಾವುದೇ ಮಾಹಿತಿಯನ್ನು ನಮೂದಿಸಿಲ್ಲ.
ಪತ್ನಿಯ ವಿವರಗಳಿಗೆ ಸಂಬಂಧಿಸಿದ ಕಾಲಂನಲ್ಲಿ ‘ಅನ್ವಯಿಸುವುದಿಲ್ಲ‘ ಎಂದಿದ್ದಾರೆ. ತಮ್ಮ ಬ್ಯಾಂಕ್ ಖಾತೆಗಳ ಬಗ್ಗೆಯೂ ನಿಖರ ಮಾಹಿತಿ ನೀಡಿಲ್ಲ ಎಂದು ಆರೋಪಿಸಿದ್ದಾರೆ. ಅಲ್ಲದೇ, ಚುನಾವಣೆಯಲ್ಲಿ ಅಕ್ರಮ ಎಸಗಿರುವ ಸೂರಜ್ ಆಯ್ಕೆಯು ಜನಪ್ರತಿನಿಧಿ ಕಾಯ್ದೆ-1951ರ ಕಲಂ 123 (1) (ಎ) (ಬಿ) ಮತ್ತು 123 (2)ಗೆ ವಿರುದ್ಧವಾಗಿದೆ. ಆದ್ದರಿಂದ ಇವರ ಆಯ್ಕೆಯನ್ನು ಕಾನೂನು ಬಾಹಿರ ಎಂದು ಘೋಷಿಸುವ ಮೂಲಕ ರದ್ದುಗೊಳಿಸಿಬೇಕು ಎಂದು ಕೋರಿದ್ದಾರೆ.