ಬೆಂಗಳೂರು: ಗಣಿ ಗುತ್ತಿಗೆಗಳಿಂದ ಸಂಗ್ರಹಿಸಿರುವ 18 ಸಾವಿರ ಕೋಟಿ ರೂ. ಡಿಎಂಎಫ್ ಬಿಡುಗಡೆ ಕುರಿತ ಪ್ರಸ್ತಾವನೆ ಸುಪ್ರೀಂ ಕೋರ್ಟ್ನಲ್ಲಿ ಬಾಕಿ ಉಳಿದಿದ್ದು, ಆದಷ್ಟು ಬೇಗ ಅದನ್ನು ಇತ್ಯರ್ಥಪಡಿಸಿಕೊಳ್ಳುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ ಎಂದು ಗಣಿ ಮತ್ತು ಭೂ ವಿಜ್ಞಾನ ಸಚಿವ ಮುರುಗೇಶ್ ನಿರಾಣಿ ಹೇಳಿದ್ದಾರೆ.
ಓದಿ: 'ಹುಟ್ಟುವ ಮಗುವಿಗೂ ಋಣಭಾರ ಹೊರಿಸಿದ ಬೂಸಾ ಬಜೆಟ್.. ದುಡಿಯೋ ರೈತನಿಗೆ ಹಗ್ಗವೇ ಗತಿ'
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಸದಸ್ಯ ಕಾಂತರಾಜ್, ರಾಜ್ಯದಲ್ಲಿ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನಡಿ ಬರುವ ಅನುದಾನ ಬಳಕೆ ಕುರಿತು ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಗಣಿಗಾರಿಕೆಯಿಂದ ಒಟ್ಟು 18 ಸಾವಿರ ಕೋಟಿಯಷ್ಟು ಡಿಎಂಎಫ್ ನಿಧಿ ಸಂಗ್ರಹವಾಗಿದೆ. ಇದಕ್ಕೆ 3 ಸಾವಿರ ಕೋಟಿ ರೂ. ಬಡ್ಡಿಯ ರೂಪದಲ್ಲಿ ಬಂದಿದೆ. ಸದ್ಯ ಈ ಹಣದ ವಿನಿಯೋಗ ವಿಚಾರ ಸುಪ್ರೀಂ ಕೋರ್ಟ್ನಲ್ಲಿದೆ.
ಸುಪ್ರೀಂ ಕೋರ್ಟ್ ಉಸ್ತುವಾರಿಯ ಕೇಂದ್ರೀಯ ಉನ್ನತಾಧಿಕಾರ ಸಮಿತಿಯು ಡಿಎಂಎಫ್ ನಿಧಿ ಬಳಸಲು ಅನುಮತಿ ನೀಡುವ ಪ್ರಸ್ತಾವನೆಯನ್ನು ಸುಪ್ರೀಂ ಕೋರ್ಟ್ಗೆ ಸಲ್ಲಿಸಿದೆ. ಆದರೆ ನ್ಯಾಯಾಲಯ ಇನ್ನೂ ಅನುಮತಿ ನೀಡಿಲ್ಲ. ಹಾಗಾಗಿ ಈ ಹಣವನ್ನು ಮಂಜೂರು ಮಾಡಿಸಿಕೊಳ್ಳಲು ಸರ್ಕಾರ ಪ್ರಯತ್ನ ನಡೆಸುತ್ತಿದೆ. ಇದೇ ವಾರದಲ್ಲಿ ರಾಜ್ಯದ ಅಡ್ವಕೇಟ್ ಜನರಲ್ ಅವರ ಜೊತೆ ದೆಹಲಿಗೆ ಹೋಗಿ ಮಾತುಕತೆ ನಡೆಸುತ್ತೇನೆ. ಪ್ರಹ್ಲಾದ್ ಜೋಶಿ ಅವರ ಜೊತೆ ಮಾತನಾಡಿ ನಂತರ ಕೇಂದ್ರ ಕಾನೂನು ಸಚಿವರ ಜೊತೆಯಲ್ಲಿಯೂ ಮಾತನಾಡಿ, ಡಿಎಂಎಫ್ ಹಣ ತರಿಸುವ ಬಗ್ಗೆ ಕೆಲಸ ಮಾಡುತ್ತೇವೆ ಎಂದು ಭರವಸೆ ನೀಡಿದರು.
ಪರಿಷತ್ ಸದಸ್ಯರಿಗೂ ಸಮಾನ ಅನುದಾನ ನೀಡಿ:
ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನಡಿ ಶಾಸಕರಿಗೆ ಅನುದಾನ ಹಂಚಿಕೆ ಮಾಡುವಂತೆ ಪರಿಷತ್ ಸದಸ್ಯರಿಗೂ ಸಮಾನ ಅನುದಾನ ಹಂಚಿಕೆ ಮಾಡಬೇಕು ಎಂದು ಸದಸ್ಯರು ಸಚಿವರ ಗಮನ ಸೆಳೆದರು. ಇದಕ್ಕೆ ಸ್ಪಂದಿಸಿದ ಸಚಿವ ಮುರುಗೇಶ್ ನಿರಾಣಿ, ಸಮಾನ ಅನುದಾನ ಹಂಚಿಕೆಗೆ ಅಗತ್ಯ ಕ್ರಮ ವಹಿಸುವ ಭರವಸೆ ನೀಡಿದರು.
ಎಲ್ಲಾ ತಾಲೂಕುಗಳಿಗೂ ಸಮಾನ ಅನುದಾನ ಹಂಚಿಕೆ ಸಾಧ್ಯವಿಲ್ಲ. ತಾಲೂಕುವಾರು ಗಣಿಗಾರಿಕೆ ವ್ಯಾಪ್ತಿಗೆ ಸಂಬಂಧಿಸಿದಂತೆ ಅನುದಾನ ಹಂಚಿಕೆಯಾಗಲಿದೆ. ಜಾಸ್ತಿ ಗಣಿಗಾರಿಕೆ ಇರುವ ತಾಲೂಕಿಗೆ ಹೆಚ್ಚು ಅನುದಾನ ಹೋಗಲಿದೆ. ಕಡಿಮೆ ಇರುವ ಕಡೆ ಕಡಿಮೆ ಅನುದಾನ ಹಂಚಿಕೆಯಾಗಲಿದೆ. ಜಿಲ್ಲಾ ಸಮಿತಿ ಜೊತೆ ಚರ್ಚೆ ನಡೆಸಿ ಎಲ್ಲಾ ಸಲಹೆ ಕ್ರೋಢೀಕರಿಸಿ ನಂತರ ಕಾಮಗಾರಿಗಳಿಗೆ ಅನುದಾನ ಹಣ ಬಿಡುಗಡೆ ಮಾಡಲಾಗುತ್ತದೆ. ಎಂಎಲ್ಸಿಗಳು ಎಲ್ಲಿ ಮತದಾನದ ಹಕ್ಕು ಹೊಂದಿದ್ದಾರೋ ಅಲ್ಲಿ ಅವರಿಗೆ ಜಿಲ್ಲಾ ಖನಿಜ ಪ್ರತಿಷ್ಠಾನ ಟ್ರಸ್ಟ್ನಲ್ಲಿ ಸದಸ್ಯತ್ವ ನೀಡಲಾಗುತ್ತದೆ ಎಂದರು.
ಗಣಿ ಹಣದಲ್ಲಿ ಹೂಳು ತೆಗೆಸಿ:
ಕಾಂಗ್ರೆಸ್ ಸದಸ್ಯ ಸಿ.ಎಂ.ಇಬ್ರಾಹಿಂ ಮಾತನಾಡಿ, ಗಣಿಗಾರಿಕೆಯಿಂದ ಜಲಾಶಯದಲ್ಲಿ ಸಂಗ್ರಹವಾಗಿರುವ ಹೂಳು ತೆಗೆಯಲು ಕ್ರಮ ಅಗತ್ಯ ಕೈಗೊಳ್ಳಿ. ದೊಡ್ಡ ಪ್ರಮಾಣದಲ್ಲಿ ಡಿಎಂಎಫ್ ಹಣ ಇದೆ. 18 ಸಾವಿರ ಕೋಟಿ ಮತ್ತೆ ಬಡ್ಡಿ 3 ಸಾವಿರ ಕೋಟಿ ಸೇರಿ ಒಟ್ಟು 21 ಸಾವಿರ ಕೋಟಿ ಇದೆ. ಬರೀ ಬಡ್ಡಿ ಹಣದಲ್ಲೇ ಹೂಳು ತೆಗೆಸಬಹುದು ಎಂದರು.
ಸತ್ತೋಗಿದ್ದನ್ನು ಬದಿಕಿಸೋರು ನೀವು, ಮುಚ್ಚಿದ್ದ ಸಕ್ಕರೆ ಕಾರ್ಖಾನೆಯನ್ನು ಆರಂಭಿಸಿದವರು ನೀವು. ಹಾಗಾಗಿ ತುಂಗಭದ್ರಾ ಜಲಾಶಯದ ಹೂಳು ತೆಗೆಸುವ ಬಗ್ಗೆ ಗಮನ ಹರಿಸಿ ಎಂದು ಸಚಿವ ನಿರಾಣಿಗೆ ಇಬ್ರಾಹಿಂ ಸಲಹೆ ನೀಡಿದರು.