ಬೆಂಗಳೂರು: ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾದ ಅನರ್ಹ ಶಾಸಕರ ಅರ್ಜಿಯನ್ನು ತುರ್ತು ವಿಚಾರಣೆ ನಡೆಸಲು ಸುಪ್ರೀಂಕೋರ್ಟ್ ನಿರಾಕರಿಸಿದೆ.
ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ಅನರ್ಹ ಶಾಸಕರು ಸಲ್ಲಿಸಿದ್ದ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ತಗೆದುಕೊಳ್ಳುವ ಅಗತ್ಯತೆ ಇಲ್ಲ ಎಂದು ಸುಪ್ರೀಂ ಹೇಳಿದ್ದು, ಅನರ್ಹ ಶಾಸಕರಿಗೆ ತೀವ್ರ ನಿರಾಸೆಯುನ್ನುಂಟು ಮಾಡಿದೆ. ಸ್ಪೀಕರ್ ಆದೇಶಕ್ಕೆ ನ್ಯಾಯಾಲಯದಲ್ಲಿ ಕಾನೂನು ಸಮರ ನಡೆಸಿ ತಡೆಯಾಜ್ಞೆ ಪಡೆದು ಮುಂದಿನ ರಾಜಕೀಯ ನಿಲುವು ತಗೆದುಕೊಳ್ಳುವ ಕಾತುರದಲ್ಲಿ ಅನರ್ಹ ಶಾಸಕರಿದ್ದರು.
ಅಯೋಧ್ಯೆ ಪ್ರಕರಣದ ಬಗ್ಗೆ ಪ್ರತಿದಿನ ನ್ಯಾಯಾಲಯದಲ್ಲಿ ತುರ್ತು ವಿಚಾರಣೆ ನಡೆಯುತ್ತಿರುವುದರಿಂದ ಅನರ್ಹತೆ ಪ್ರಕರಣದ ವಿಚಾರಣೆ ತಕ್ಷಣವೇ ತಗೆದುಕೊಳ್ಳಲು ಸಾಧ್ಯವಿಲ್ಲ. ವಿಚಾರಣೆ ದಿನಾಂಕವನ್ನು ನಂತರ ತಿಳಿಸಲಾಗುವುದೆಂದು ಅರ್ಜಿದಾರರಾದ ಅನರ್ಹ ಶಾಸಕರ ತಂಡಕ್ಕೆ ಸುಪ್ರೀಂಕೋರ್ಟ್ ಹೇಳಿದೆ. 15 ದಿನಗಳ ಹಿಂದೆ ಅನರ್ಹ ಶಾಸಕರು ಸುಪ್ರೀಂಕೋರ್ಟ್ಗೆ ಸ್ಪೀಕರ್ ಆದೇಶದ ವಿರುದ್ಧ ಅರ್ಜಿ ಸಲ್ಲಿಸಿ ವಿಚಾರಣೆಗೆ ಬರುವುದನ್ನು ಎದುರು ನೋಡುತ್ತಿದ್ದರು.
ಇನ್ನು ಅನರ್ಹ ಶಾಸಕರು ಹೈಕೋರ್ಟ್ಗೆ ಸ್ಪೀಕರ್ ತೀರ್ಪನ್ನು ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಇಂದು ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿಗಳಿದ್ದ ವಿಭಾಗೀಯ ನ್ಯಾಯಪೀಠ, ನೂತನ ಸರ್ಕಾರ ರಚನೆಯಾಗಿದೆ. ಅತೃಪ್ತ ಶಾಸಕರನ್ನ ಸ್ಪೀಕರ್ ಅನರ್ಹಗೊಳಿಸಿದ್ದು ಈ ವಿಚಾರ ಸುಪ್ರೀಂಕೋರ್ಟ್ನಲ್ಲಿದೆ. ಹಾಗಾಗಿ ಮಧ್ಯಪ್ರವೇಶಿಸಲ್ಲ ಎಂದು ಹೈಕೋರ್ಟ್ ಹೇಳಿದೆ.