ಬೆಂಗಳೂರು : ಸಂಕ್ರಾಂತಿ ಸಂಭ್ರಮದ ಜೊತೆಗೆ ಸೂರ್ಯನು ದಕ್ಷಿಣಾಯನದಿಂದ ಉತ್ತರಾಯಣಕ್ಕೆ ಪಥ ಬದಲಿಸಿ ಉತ್ತರಾಯಣ ಚಲನೆಗೆ ತೊಡಗುವ ದಿನವಾದ ಇಂದು ನಗರದ ಗವಿಗಂಗಾಧರೇಶ್ವರ ದೇವಾಲಯದಲ್ಲಿ ಸೂರ್ಯರಶ್ಮಿಯು ಗವಿಗಂಗಾಧರೇಶ್ವರನನ್ನು ಸ್ಪರ್ಶಿಸುವ ಪವಿತ್ರ ಕೌತುಕ ಜರುಗಿತು.
ಗವಿಗಂಗಾಧರೇಶ್ವರನಿಗೆ ಸೂರ್ಯರಶ್ಮಿ ಸ್ಪರ್ಶ: ಆರಂಭದಲ್ಲಿ ನಂದಿವಾಹನವನ್ನು ಸ್ಪರ್ಶಿಸಿದ ಸೂರ್ಯರಶ್ಮಿಯು ಕೆಲ ಕ್ಷಣಗಳಲ್ಲೇ ನಂದಿಯ ಎರಡು ಕೊಂಬಿನ ಮುಖಾಂತರ ಶಿವಲಿಂಗ ಸ್ಪರ್ಶಿಸಿತು. ಈ ವಿಸ್ಮಯ ಸಂಜೆ 5.20ರಿಂದ 5.32ರ ನಡುವಿನ ಸಮಯದಲ್ಲಿ 3 ನಿಮಿಷ 12 ಸೆಕೆಂಡುಗಳ ಕಾಲ ನಡೆಯಿತು.
ಗವಿಗಂಗಾಧರೇಶ್ವರನಿಗೆ ವಿವಿಧ ಅಭಿಷೇಕ: ಸೂರ್ಯರಶ್ಮಿ ಸ್ಪರ್ಶಿಸುವ ವೇಳೆ ಶಿವಲಿಂಗಕ್ಕೆ ವಿಶೇಷ ಬಗೆಬಗೆಯ ಅಭಿಷೇಕಗಳು ನಡೆದವು. ಸೂರ್ಯನ ಕಿರಣಗಳ ಅದ್ಭುತ ಅಭಿಷೇಕದ ಜೊತೆಗೆ ಗಂಗಾಧರೇಶ್ವರನಿಗೆ ಹಾಲು, ಎಳನೀರು, ಪವಿತ್ರ ಜಲದಿಂದ ಅಭಿಷೇಕ ಮಾಡಲಾಯಿತು. ಈ ಸಂದರ್ಭದಲ್ಲಿ ಅರ್ಚಕರಿಂದ ಮಂತ್ರಘೋಷ, ಡೊಳ್ಳು, ನಗಾರಿ, ಗಂಟೆಗಳ ನಾದ ಮೊಳಗಿತು.
ಸೂರ್ಯದೇವನು ಉತ್ತಮ ಫಲಗಳನ್ನು ನೀಡುತ್ತಾನೆ : 'ಸೂರ್ಯದೇವನು ದಕ್ಷಿಣಾಯನದಲ್ಲಿ ದಾನ, ಧರ್ಮ, ಯಜ್ಞ ಯಾಗ ಪೂಜಾದಿಗಳನ್ನು ಮಾಡಿದವರಿಗೆ ಉತ್ತರಾಯಣದ ಫಲಗಳನ್ನು ನೀಡುತ್ತಾನೆ. ದೇವಾಲಯದಲ್ಲಿ ಅರ್ಚಕರು ಸ್ವಾಮಿಯನ್ನು ನಿಷ್ಠೆಯಿಂದ ಪೂಜೆ ಮಾಡಿದರೆ, ಅಲ್ಲಿನ ದೇವರಲ್ಲಿ ಅಪಾರ ಶಕ್ತಿ ಇರುತ್ತದೆ. ನಂದಿ ಭಗವಂತ ಮೂರು ಕಾಲುಗಳನ್ನು ಮಡಿಸಿ, ಒಂದೇ ಕಾಲಿನಲ್ಲಿ ನಿಂತಿದ್ದಾನೆ. ಆ ಕಾಲನ್ನು ಸ್ಮರಿಸಿ, ನಮಿಸಿ ಸೂರ್ಯದೇವ ದೇವಾಲಯದ ಒಳಗಡೆ ಪ್ರವೇಶಿಸುವ ವೈಶಿಷ್ಟ್ಯ ಇದಾಗಿದೆ' ಎಂದು ದೇವಾಲಯದ ಪ್ರಧಾನ ಅರ್ಚಕರಾದ ಡಾ. ಸೋಮಸುಂದರ್ ದೀಕ್ಷಿತ್ ತಿಳಿಸಿದರು.
ಅಲ್ಲದೆ, ಗವಿ ಗಂಗಾಧರೇಶ್ವರ ಸ್ವಾಮಿ ಸನ್ನಿಧಿಯಲ್ಲಿ 3.12 ಸೆಕೆಂಡುಗಳ ಕಾಲ ಸೂರ್ಯ ಸ್ಪರ್ಶವಾಗಿದೆ. ತತ್ಪುರುಷವರೆಗೂ ರಶ್ಮಿ ಸ್ಪರ್ಶ ಮಾಡಿರುವುದು ವಿಶೇಷವಾಗಿದೆ. ಈ ವರ್ಷ ಎಲ್ಲರಿಗೂ ಒಳ್ಳೆಯದಾಗುತ್ತದೆ, ತೊಂದರೆಗಳು ದೂರವಾಗುತ್ತದೆ. ಒಳ್ಳೆಯ ಕೆಲಸ ಮಾಡುವುದಕ್ಕೆ ಈ ವರ್ಷ ಒಳ್ಳೆಯ ಅವಕಾಶವಿದೆ ಎಂದು ಡಾ. ಸೋಮಸುಂದರ್ ದೀಕ್ಷಿತ್ ಹೇಳಿದರು.
ಇದನ್ನೂ ಓದಿ: ಕೊಡಗಿನ ಸರ್ಕಾರಿ ಶಾಲೆಯಲ್ಲಿ ಅರ್ಥಪೂರ್ಣ ಸಂಕ್ರಾಂತಿ ಸಂಭ್ರಮಾಚರಣೆ