ಬೆಂಗಳೂರು : ವರ್ಷದ ಮೊದಲ ಹಬ್ಬವಾದ ಮಕರ ಸಂಕ್ರಾಂತಿಯಂದು ನಗರದ ಗವಿಪುರದ ಗವಿಗಂಗಾಧರೇಶ್ವರ ದೇಗುಲ ಇಂದು ಸಂಜೆ ವಿಸ್ಮಯಕ್ಕೆ ಸಾಕ್ಷಿಯಾಯಿತು. ಸೂರ್ಯನ ಬೆಳಕು ನೇರವಾಗಿ ಶಿವಲಿಂಗದ ಮೇಲೆ ಬಿದ್ದಿತು. ಸೂರ್ಯ ದಕ್ಷಿಣ ಪಥದಿಂದ ಉತ್ತರದ ಪಥಕ್ಕೆ ಸಂಚಲನ ಮಾಡುವ ವೇಳೆ ಶಿವಲಿಂಗಕ್ಕೆ ಸೂರ್ಯ ರಶ್ಮಿ ಸ್ಪರ್ಶಿಸಿತು.
ಸಂಜೆ 5.20 ರಿಂದ 5.23 ನಿಮಿಷದವರೆಗೆ ಸೂರ್ಯರಶ್ಮಿ ನಂದಿಕೊಂಬಿನ ಮೂಲಕ ಹಾದುಹೋಗಿ ಶಿವನಿಗೆ ನಮಿಸಿತು. ಅಸಂಖ್ಯಾತ ಸಂಖ್ಯೆಯಲ್ಲಿ ನೆರೆದಿದ್ದ ಭಕ್ತರು ಈ ಕೌತುಕವನ್ನು ಕಣ್ತುಂಬಿಕೊಂಡರು. ಈ ವಿಸ್ಮಯವನ್ನು ನೋಡಲು ದೇವಾಲಯದ ಹೊರಭಾಗದಲ್ಲಿ ಎರಡು ಎಲ್‌ಇಡಿ ಹಾಗೂ ಐದು ಟಿವಿಗಳ ವ್ಯವಸ್ಥೆ ಮಾಡಲಾಗಿತ್ತು. ಕೆಲ ಸೆಕೆಂಡ್‌ಗಳ ಕಾಲ ಸೂರ್ಯ ರಶ್ಮಿ ಶಿವಲಿಂಗವನ್ನು ಸ್ಪರ್ಶಿಸಿ ಮರೆಯಾಯಿತು.
ಈ ವೇಳೆ ಅರ್ಚಕರನ್ನು ಬಿಟ್ಟರೆ ಇನ್ನುಳಿದ ಯಾರಿಗೂ ದೇವಸ್ಥಾನ ಒಳ ಪ್ರವೇಶಕ್ಕೆ ಅನುಮತಿ ನೀಡಲಾಗಿರಲಿಲ್ಲ. ಉಳಿದಂತೆ ದೇವಸ್ಥಾನದಲ್ಲಿ ಹೋಮ, ಹವನಗಳು ನಡೆದವು. ಅರ್ಚಕರು ಶಿವಲಿಂಗದ ಮೇಲೆ ಎಳನೀರು ಅಭಿಷೇಕ ಮಾಡಿದರು.
ಬೆಳಗ್ಗೆ 5 ಗಂಟೆಯಿಂದಲೇ ವಿಶೇಷ ಪೂಜೆ: ಈ ವಿಶೇಷ ದಿನಕ್ಕಾಗಿ ಬೆಳಗ್ಗೆ 5 ಗಂಟೆಯಿಂದಲೇ ಗಂಗಾಧರನಿಗೆ ವಿಶೇಷ ಪೂಜೆ ಆರಂಭವಾಗಿತ್ತು. ಗಂಗಾಧರನಿಗೆ ಪಂಚಾಭಿಷೇಕ, ಪುಷ್ಪಾಭಿಷೇಕ, ಮಹಾಮಂಗಳಾರತಿ ಮಾಡಿದ ನಂತರ ಭಕ್ತರಿಗೆ ದೇವರ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿತ್ತು. ಸಾವಿರಾರು ಮಂದಿ ಭಕ್ತರು ದೇವಾಲಯಕ್ಕೆ ಆಗಮಿಸಿ ವಿಶೇಷ ಪೂಜೆ, ಪುನಸ್ಕಾರಗಳೊಂದಿಗೆ ದೇವರ ದರ್ಶನ ಪಡೆದರು.
ಶೃಂಗಾರಗೊಂಡ ಪಂಡರಾಪುರ ದೇವಾಲಯ (ಪ್ರತ್ಯೇಕ ಸುದ್ದಿ) : ದೇಶಾದ್ಯಂತ ಸಂಕ್ರಾಂತಿ ಹಬ್ಬದ ಸಡಗರ ಸಂಭ್ರಮ ಮನೆಮಾಡಿದೆ. ಹಬ್ಬದ ಪ್ರಯುಕ್ತ ಪಂಡರಾಪುರ ವಿಠಲ್ ರುಕ್ಮಿಣಿ ದೇವಸ್ಥಾನಕ್ಕೆ ಹೂವು ಹಣ್ಣಿನಿಂದ ಅಲಂಕಾರ ಮಾಡಲಾಗಿದ್ದು, ಭಕ್ತರ ಗಮನ ಸೆಳೆದಿದೆ. ಮಹಾರಾಷ್ಟ್ರ ಪಂಡರಾಪುರ ಪಾಂಡುರಂಗ ವಿಠಲ ದೇವಸ್ಥಾನ ಗರ್ಭಗುಡಿಯ ಆವರಣವನ್ನು ಹೂವು - ಹಣ್ಣಿನಿಂದ ಶೃಂಗಾರ ಮಾಡಲಾಗಿದೆ.
ರೈತರು ಬೆಳೆದ ಬಗೆ ಬಗೆ ತರಕಾರಿಗಳಿಂದ ದೇವಸ್ಥಾನ ಅಲಂಕಾರ ಮಾಡಲಾಗಿದೆ. ಇದನ್ನು ನೋಡುವುದಕ್ಕೆ ಎರಡು ಕಣ್ಣು ಸಾಲದು. ಮುಂಜಾನೆಯಿಂದಲೇ ಭಕ್ತರು ದೇವರ ದರ್ಶನ ಪಡೆಯುತ್ತಿದ್ದಾರೆ. ಕರ್ನಾಟಕದೊಂದಿಗೆ ಗಡಿ ಹಂಚಿಕೊಂಡಿರುವ ಪಂಡರಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ರಾಜ್ಯದ ಭಕ್ತರು ತೆರಳಿ, ಪಾಂಡುರಂಗ ದರ್ಶನ ಪಡೆಯುತ್ತಿದ್ದಾರೆ. ದೇವಸ್ಥಾನದ ಆವರಣದಲ್ಲಿ ಮಹಿಳೆಯರು ಒಬ್ಬರಿಗೆ ಒಬ್ಬರು ಸಿಹಿ ಹಂಚಿ, ಶುಭಾಶಯಗಳನ್ನು ಕೋರಿ ಹಬ್ಬ ಆಚರಣೆ ಮಾಡುತ್ತಿದ್ದಾರೆ.
ಇದನ್ನೂ ಓದಿ: ಸಂಕ್ರಾಂತಿ ನಿಮಿತ್ತ ಹೂವು ಹಣ್ಣುಗಳಿಂದ ಶೃಂಗಾರಗೊಂಡ ಪಂಡರಾಪುರ ದೇವಾಲಯ