ಬೆಂಗಳೂರು: ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಎಂಎಲ್ಎ ಆದರೆ ನಾನು ಎಂಪಿ. ಗೌರವ ಕೊಟ್ಟು, ಗೌರವ ತೆಗೆದುಕೊಳ್ಳಬೇಕು ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದರು.
ಗೃಹ ಕಚೇರಿ ಕೃಷ್ಣಾಗೆ ಸುಮಲತಾ ಅಂಬರೀಶ್ ಆಗಮಿಸಿದರು. ಈ ವೇಳೆ, ಸಿಎಂ ಯಡಿಯೂರಪ್ಪ ಅವರನ್ನು ಭೇಟಿಯಾಗಿ ಮಂಡ್ಯ ಮೈ ಶುಗರ್ ಕಾರ್ಖಾನೆ, ಕೆಆರ್ಎಸ್ ಡ್ಯಾಂ ಮತ್ತು ಮನ್ಮೂಲ್ ವಿಚಾರ ಕುರಿತು ಚರ್ಚಿಸಿದರು.
ತಮ್ಮ ಬಗ್ಗೆ ಹಗುರವಾಗಿ ಹೇಳಿಕೆ ನೀಡಿರುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಈಗ ಅದನ್ನು ಸಮರ್ಥನೆ ಮಾಡಿಕೊಳ್ಳಲು ಏನೇ ಹೇಳಬಹುದು. ಆಡೋ ಮಾತು ಆಡಿ, ಈಗ ಸಮರ್ಥನೆ ಮಾಡಿಕೊಳ್ಳೋದು ಅವರಿಗೆ ಶೋಭೆ ತರೋದಿಲ್ಲ. ಅವರು ಒಮ್ಮೆ ಹೇಳಿದ ಮಾತು ಉಳಿದುಕೊಂಡಿದೆ. ಹಾಗಾಗಿ ಅವರು ತಮ್ಮ ಹೇಳಿಕೆ ಬಗ್ಗೆ ಕ್ಷಮೆ ಕೇಳಲಿ ಎಂದು ಆಗ್ರಹಿಸಿದರು.
ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ: ಕುಮಾರಸ್ವಾಮಿ ಇವತ್ತು ತಮ್ಮ ಗೌರವ ಕಳೆದುಕೊಂಡಿದ್ದಾರೆ. ಕೆಆರ್ಎಸ್ ಡ್ಯಾಂ ಬಿರುಕು ಬಗ್ಗೆ ಮಾಧ್ಯಮಗಳಲ್ಲೇ ವರದಿಗಳು ಬಂದಿದ್ದವು. ಡ್ಯಾಂ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯಿಂದಲೇ ಬಿರುಕು ಅಂತ ಮಾಧ್ಯಮ ವರದಿಗಳು ಬಂದಿವೆ. ಈ ಹಿನ್ನೆಲೆಯಲ್ಲಿ ನಾನು ಡ್ಯಾಂ ಬಿರುಕು ಹೇಳಿಕೆ ಕೊಟ್ಟಿದ್ದೇನೆ. ಸರ್ಕಾರ ತನಿಖೆ ನಡೆಸಲಿ. ಡ್ಯಾಂ ಬಿರುಕು ಇಲ್ಲ ಅಂತ ಕೆಲವರು ಅಷ್ಟೊಂದು ಸಮರ್ಥಿಸಿಕೊಳ್ಳುತ್ತಿರೋದು ಯಾಕೆ? ಇದರಲ್ಲಿ ಏನೋ ಇದೆ ಅನ್ನೋ ಅನುಮಾನ ಎಲ್ಲರಿಗೂ ಬರುತ್ತದೆ. ತನಿಖೆ ನಡೆದರೆ ಎಲ್ಲವೂ ಗೊತ್ತಾಗಲಿದೆ ಎಂದರು.
ಇಂದು ಬೆಳಗ್ಗೆ 11.30ಕ್ಕೆ ಸಿಎಂ ದಿಶಾ ಸಭೆಗೆ ಕರೆದಿದ್ದರು. ಯಾವುದೋ ಕಾರಣಕ್ಕೆ ಸಭೆ ಮುಂದೂಡಲಾಗಿದೆ. ಮೈ ಶುಗರ್ ಇಂದಿನಿಂದ ಅಲ್ಲ ಎರಡು ವರ್ಷದಿಂದ 20 ಬಾರಿ ಮಾತನಾಡಿದ್ದೇನೆ. ಯಾವುದೋ ಒಂದು ಉತ್ತರ ಕೊಡಬೇಕು. ಇಲ್ಲದಿದ್ದರೆ ರೈತರು ಆಕ್ರೋಶಗೊಳ್ಳುತ್ತಾರೆ. ಹಿಂದಿನ ಆರೇಳು ವರ್ಷದಲ್ಲಿ ಏನು ಮಾಡಿಲ್ಲ. ದ್ವೇಷ ಮಾಡಿ ಕೂರಲು ಆಗಲ್ಲ. ರೈತರಿಗೆ ನ್ಯಾಯ ಕೊಡಿಸೋದು ನಮ್ಮ ಜವಾಬ್ದಾರಿ. ಮಂಡ್ಯ ತಾಲೂಕು ರೈತರು ಕಬ್ಬನ್ನು ಸಾಗಾಣಿಕೆ ಮಾಡಿಕೊಂಡು ಬೇರೆಕಡೆ ಹೋಗಬೇಕಿದೆ. ಮಂಡ್ಯದಲ್ಲಿ ಶುಗರ್ ಫ್ಯಾಕ್ಟರಿ ಓಪನ್ ಆಗೋವರೆಗೂ ಸರ್ಕಾರವೇ ಸಾಗಾಣಿಕೆ ಹಣ ಭರಿಸಬೇಕು ಎಂದು ಒತ್ತಾಯಿಸಿದರು.
ಕಾವೇರಿ ಕಣಿವೆಯಲ್ಲಿ ಅಕ್ರಮ ಗಣಿಗಾರಿಕೆ ಬಗ್ಗೆ ಹೇಳಿದ್ದೇನೆ. ನಿಷೇಧ ಮಾಡಿದ್ದರೂ ಕೂಡ ಗಣಿಗಾರಿಕೆ ನಡೆಯುತ್ತಿದೆ. ಅಪರಾಧಿಗಳಿಗೆ ಶಿಕ್ಷೆ ಆಗಬೇಕು ಎಂದು ಮನವಿ ಮಾಡಿದರು.
ಈಗಲೇ ಆಡಿಯೋ ರಿಲೀಸ್ ಮಾಡಿ: ಕುಮಾರಸ್ವಾಮಿ ದಾಖಲೆ ಬಿಡುಗಡೆ ವಿಚಾರ ಕುರಿತು ಪ್ರತಿಕ್ರಿಯೆ ನೀಡಿದ ಸುಮಲತಾ ಅಂಬರೀಶ್, ದಯವಿಟ್ಟು ಆಡಿಯೋ ಇವತ್ತೇ ಬಿಡುಗಡೆ ಮಾಡಲಿ. ಚುನಾವಣೆವರೆಗೂ ಯಾಕೆ ಕಾಯಬೇಕು?ಚುನಾವಣೆವರೆಗೂ ಬಿಡುಗಡೆ ಮಾಡಲ್ಲ ಅಂದರೆ ಹೇಗೆ? ಚುನಾವಣೆಗೆ ಒಂದುವರೆ ಎರಡು ವರ್ಷ ಇದೆ. ಸ್ಪೆಷಲ್ ಎಫೆಕ್ಟ್ಸ್ ಮಾಡಿ ಬಿಡುಗಡೆ ಮಾಡೋಕೆ ಅಷ್ಟು ದಿನ ಬೇಕಾ?ಅವರು ಮಾತನಾಡೋ ಅಧಿಕಾರ ಕಳೆದುಕೊಂಡಿದ್ದಾರೆ.
ಅವರ ತಂದೆಯವರನ್ನ ನಾನು, ಅಂಬರೀಶ್ ತಂದೆ ಸ್ಥಾನದಲ್ಲೇ ನೋಡಿದ್ದೀವಿ. ಕೆಳ ಮಟ್ಟದ ಪದ ಯಾವತ್ತೂ ಮಾತನಾಡಿಲ್ಲ.ಅವರು ಎಂಎಲ್‌ಎ ಆದರೆ ನಾನು ಎಂಟು ವಿಧಾನಸಭಾ ಕ್ಷೇತ್ರಕ್ಕೆ ಎಂಪಿ. ಅವರು ಗೌರವ ಕೊಟ್ಟು, ಗೌರವ ಪಡೆಯಲಿ ಅಂತ ಮನವಿ ಮಾಡಿದರು.
ಇದನ್ನೂ ಓದಿ: ನನ್ನ ಹೇಳಿಕೆಯಿಂದ ಅನುಕಂಪ ಗಿಟ್ಟಿಸಿಕೊಳ್ಳಲು ಸುಮಲತಾ ಹೊರಟಿದ್ದಾರೆ: ಹೆಚ್ಡಿಕೆ