ಬೆಂಗಳೂರು: ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟದ ವತಿಯಿಂದ ಕಬ್ಬು ಬೆಳೆಗಾರರು ಫ್ರೀಡಂ ಪಾರ್ಕ್ನಲ್ಲಿ ನಡೆಸುತ್ತಿರುವ ಅಹೋರಾತ್ರಿ ಧರಣಿ 7ನೇ ದಿನವೂ ಮುಂದುವರೆದಿದೆ. ರಾಜ್ಯದ ವಿವಿಧೆಡೆಯಿಂದ ಬಂದಿದ್ದ ನೂರಾರು ರೈತ ಮಹಿಳೆಯರು ಧರಣಿಯಲ್ಲಿ ಭಾಗವಹಿಸಿ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಲೆಗೆ ಹಸಿರು ಟವಲ್ ಸುತ್ತಿ ಕೈಯಲ್ಲಿ ಬಾರುಕೋಲು ಹಿಡಿದು ಬೀಸುವ ಮೂಲಕ ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ರೈತ ಸಂಘಟನೆಯ ರಾಜ್ಯ ಮಹಿಳಾ ಅಧ್ಯಕ್ಷೆ ಜಿ.ವಿ ಲಕ್ಷ್ಮಿ ದೇವಿ ಮಾತನಾಡಿ, 'ದೇಶಕ್ಕೆ ಅನ್ನ ನೀಡುವ ರೈತನನ್ನು ಏಳು ದಿನಗಳಿಂದ ರಸ್ತೆಯಲ್ಲಿ ಮಲಗಿಸಿರುವ ಸರ್ಕಾರಕ್ಕೆ ರೈತರ ಕಷ್ಟಕ್ಕಿಂತ ಸಕ್ಕರೆ ಕಾರ್ಖಾನೆ ಮಾಲೀಕರ ಹಿತವೇ ಮುಖ್ಯವಾಗಿದೆ. ರೈತ ಮಹಿಳೆಯರು ಕಿತ್ತೂರು ರಾಣಿ ಚೆನ್ನಮ್ಮನ ಅವತಾರ ತಾಳುವ ಮೊದಲು ಸರ್ಕಾರ ಎಚ್ಚೆತ್ತುಕೊಂಡು ಕಬ್ಬಿನ ದರ ಏರಿಕೆ ಮಾಡಲಿ' ಎಂದು ಆಗ್ರಹಿಸಿದರು.
ಸರ್ಕಾರ ತಾಕತ್ತು ತೋರಿಸಲಿ: ಸರ್ಕಾರ ಪದೇ ಪದೇ ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ಮಾಡುವ ನಾಟಕವಾಡದೆ, ಕಾನೂನಿನಂತೆ ಕಬ್ಬು ದರ ಏರಿಕೆ ಮಾಡುವ ನಿರ್ಧಾರ ಕೈಗೊಂಡು ತಾಕತ್ತು ತೋರಿಸಲಿ ಎಂದು ಅವರು ಸವಾಲು ಹಾಕಿದರು.
ಪ್ರತಿಭಟನೆಯಲ್ಲಿ ರಾಜ್ಯಾಧ್ಯಕ್ಷ ಕುರುಬೂರು ಶಾಂತಕುಮಾರ್, ಮಹಿಳಾ ಘಟಕದ ರೂಪ, ಚಂದ್ರಮಾ, ದರೆಪ್ಪಗೌಡ, ರಮೇಶ್ ಹೂಗಾರ್, ದೇವಕುಮಾರ, ಮಹಾಂತೇಶ್ ಸೇರಿದಂತೆ ಇತರರು ಇದ್ದರು.
ಇದನ್ನೂ ಓದಿ: ಬೇಡಿಕೆ ಈಡೇರಿಸುವಂತೆ ಕೊರಿ ರಾಜ್ಯಪಾಲರಿಗೆ ಬೇಡಿಕೆ ಪತ್ರ: ಕೇಂದ್ರಕ್ಕೆ ರೈತರ ಎಚ್ಚರಿಕೆ