ಬೆಂಗಳೂರು: ತಂದೆ ಹತ್ಯೆಗೆ 1 ಕೋಟಿ ರೂಪಾಯಿ ಸುಫಾರಿ ನೀಡಿದ್ದ ಮೂವರು ಆರೋಪಿಗಳನ್ನು ಮಾರತ್ ಹಳ್ಳಿ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. 70 ವರ್ಷದ ನಾರಾಯಣಸ್ವಾಮಿ ಎಂಬುವರ ಕೊಲೆಗೆ ಸುಫಾರಿ ನೀಡಿದ ಪುತ್ರ ಮಣಿಕಂಠ, ಸುಫಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ನವೀನ್ ಎಂಬುವರನ್ನು ಬಂಧಿಸಲಾಗಿದೆ.
ಫೆಬ್ರವರಿ 13ರಂದು ಪಣತ್ತೂರಿನ ಕಾವೇರಪ್ಪ ಲೇಔಟ್ ನ ಅಪಾರ್ಟ್ ಮೆಂಟ್ ಪಾರ್ಕಿಂಗ್ ಲಾಟ್ ನಲ್ಲಿ ನಾರಾಯಣಸ್ವಾಮಿ ಅವರ ಕೊಲೆಯಾದ ಸ್ಥಿತಿಯಲ್ಲಿ ಶವ ಪತ್ತೆಯಾಗಿತ್ತು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಪುತ್ರ ಮಣಿಕಂಠನನ್ನು ವಶಕ್ಕೆ ಪಡೆದು ಪ್ರಶ್ನಿಸಿದಾಗ ಸುಫಾರಿ ನೀಡಿರುವ ಸಂಗತಿ ಬೆಳಕಿಗೆ ಬಂದಿತ್ತು. ಬಂಧಿಸಿ ತೀವ್ರ ವಿಚಾರಣೆಗೊಳಪಡಿಸಿದಾಗ ಅಪ್ಪ-ಮಗ ನಡುವೆ ಕೌಟುಂಬಿಕ ಕಲಹವಿತ್ತು. ಆಸ್ತಿ ಪಡೆಯಲು ಹಂತಕರಿಗೆ 1 ಕೋಟಿಗೆ ಮಾತುಕತೆ ನಡೆಸಿ ಮುಂಗಡವಾಗಿ 1 ಲಕ್ಷ ನೀಡಿರುವುದು ಗೊತ್ತಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಸುಫಾರಿ ಪಡೆದ ರೌಡಿಶೀಟರ್ ಶಿವಕುಮಾರ್ ಹಾಗೂ ಸಹಚರ ನವೀನ್ ಫೆ.13ರಂದು ಮಾರಕಾಸ್ತ್ರಗಳಿಂದ ಬರ್ಬರವಾಗಿ ನಾರಾಯಣಸ್ವಾಮಿ ಅವರನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಆರೋಪಿ ಮಣಿಕಂಠ ಮೊದಲ ಪತ್ನಿ ಕೊಂದ ಆರೋಪದಡಿ ಜೈಲು ಸೇರಿದ್ದ. ಜಾಮೀನು ಪಡೆದು ಹೊರಬಂದು ಎರಡನೇ ವಿವಾಹವಾಗಿದ್ದ. ಈಕೆಗೂ ಒಂದು ಹೆಣ್ಣು ಮಗುವಿದೆ. ಹೀಗಿದ್ದರೂ ಬೇರೆ ಮಹಿಳೆಯೊಂದಿಗೆ ಸಲುಗೆ ಬೆಳೆಸಿಕೊಂಡಿದ್ದ. ಈ ವಿಚಾರ ಗೊತ್ತಾಗುತ್ತಿದ್ದಂತೆ ಎರಡನೇ ಪತ್ನಿ ಪತಿಯಿಂದ ದೂರವಾಗಿದ್ದಳು ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಫ್ಲಾಟ್ ಸೊಸೆಗೆ ನೀಡಲು ನಿರ್ಧರಿಸಿದ್ದೇ ತಪ್ಪಾಯ್ತಾ?: ಇಬ್ಬರು ನಡುವೆಯೂ ವಿಚ್ಛೇದನ ವಿಚಾರವಾಗಿಯೂ ಮಾತುಕತೆ ನಡೆಯುತ್ತಿತ್ತು. ಈ ವಿಚಾರ ಅರಿತ ನಾರಾಯಣಸ್ವಾಮಿ, ಡಿವೋರ್ಸ್ ನೀಡಬೇಡ ಎಂದು ಮಗನ ಬಳಿ ಮನವಿ ಮಾಡಿಕೊಂಡಿದ್ದ. ಇದಕ್ಕೆ ಮಗ ತಲೆಕೆಡಿಸಿಕೊಂಡಿರಲಿಲ್ಲ. ಜೀವನ ನಿರ್ವಹಣೆಗೆ ಕಷ್ಟವಾಗುತ್ತೆ ಅಂತಾ ತನ್ನ ಹೆಸರಿನಲ್ಲಿದ್ದ ಫ್ಲ್ಯಾಟ್ನ್ನು ಸೊಸೆಗೆ ರಿಜಿಸ್ಟರ್ ಮಾಡಲು ಮುಂದಾಗಿದ್ದರು. ಈ ವಿಚಾರ ಗೊತ್ತಾಗುತ್ತಿದ್ದಂತೆ ಮಣಿಕಂಠ ಹಾಗೂ ಅವನ ತಂದೆ ನಾರಾಯಣಸ್ವಾಮಿ ನಡುವೆ ಕೌಟುಂಬಿಕ ಕಲಹಕ್ಕೆ ಕಾರಣವಾಗಿತ್ತು. ಹೀಗಾಗಿ ಸುಫಾರಿ ಪಡೆದು ಬಂದವರು ನಾರಾಯಣಸ್ವಾಮಿಯನ್ನು ಕೊಂದು ಎಸ್ಕೇಪ್ ಆಗಿದ್ದರು ಎಂದು ಪೊಲೀಸರು ಕೊಲೆ ಕೇಸ್ ಬಗ್ಗೆ ವಿವರಿಸಿದ್ದಾರೆ.
ಆಸ್ತಿಗಾಗಿ ಒಂದೇ ಕುಟುಂಬದ ನಾಲ್ವರ ಹತ್ಯೆ: ಆಸ್ತಿಗಾಗಿ ಉತ್ತರಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹಾಡವಳ್ಳಿಯ ಓಣಿಭಾಗಿಲು ಗ್ರಾಮದಲ್ಲಿ ಒಂದೇ ಕುಟುಂಬದ ನಾಲ್ವರನ್ನು ಫೆಬ್ರವರಿ 24 ರಂದು ಕೊಲೆ ಮಾಡಲಾಗಿತ್ತು. ಈ ಕೊಲೆಯಲ್ಲಿ ಶಂಭು ಭಟ್, ಪತ್ನಿ ಮಾದೇವಿ ಹೆಗೆಡೆ, ಅವರ ಮಗ ರಾಜೀವ್ ಹೆಗಡೆ ಹಾಗೂ ಸೊಸೆ ಕುಸುಮಾ ಭಟ್ ಮೃತಪಟ್ಟಿದ್ದಾರೆ. ಮನೆಯೊಳಗೆ ಮಲಗಿದ್ದ ಮಗು ಹಾಗೂ ಪಕ್ಕದ ಮನೆಯಲ್ಲಿದ್ದ ಇನ್ನೊಂದು ಮಗು ಬಚಾವ್ ಆಗಿದ್ದವು. ಪ್ರಮುಖ ಆರೋಪಿ ಸೇರಿದಂತೆ ಈವರೆಗೆ ಮೂವರನ್ನು ಭಟ್ಕಳ ಪೊಲೀಸರು ಪತ್ತೆಹಚ್ಚಿ ಬಂಧಿಸಿದ್ದಾರೆ.
ಇದನ್ನೂ ಓದಿ: ಅಪಾರ್ಟ್ಮೆಂಟ್ನ ಫ್ಲಾಟ್ನಲ್ಲಿ ಚಿನ್ನದ ವ್ಯಾಪಾರಿ ಮತ್ತವರ ಪತ್ನಿ, ಮಗಳ ಕೊಳೆತ ಶವ ಪತ್ತೆ