ಆನೇಕಲ್(ಬೆಂಗಳೂರು): ಬನ್ನೇರುಘಟ್ಟ ಉದ್ಯಾನದ ಮರಿ ಆನೆಗೆ ಇನ್ಫೋಸಿಸ್ ಫೌಂಡೇಷನ್ ಅಧ್ಯಕ್ಷೆ ಸುಧಾಮೂರ್ತಿ ಅವರ ಹೆಸರಿಟ್ಟು ನಾಮಕರಣ ಮಾಡಲಾಗಿದೆ.
ಆಗಸ್ಟ್ 17ರಂದು ಸುವರ್ಣಾ ಎಂಬ ಆನೆಗೆ ಜನಿಸಿದ ಮರಿಗೆ ಹೆಸರನ್ನಿಡಲು ಹತ್ತು ಹಲವು ಸಲಹೆಗಳು ಬಂದಿದ್ದವು. ಬನ್ನೇರುಘಟ್ಟ ಜೈವಿಕ ಉದ್ಯಾನದ ಕಾರ್ಯನಿರ್ವಾಹಕ ನಿರ್ದೇಶಕಿ ವನಶ್ರೀ ಅವರು ಸುಧಾಮೂರ್ತಿ ಅವರ ಹೆಸರನ್ನು ನಾಮಕರಣ ಮಾಡಿದ್ದಾರೆ. ಸುಧಾಮೂರ್ತಿ ಅವರು ಕಳೆದ ನಾಲ್ಕು ವರ್ಷದಿಂದ ಜಿರಾಫೆ, ಝೀಬ್ರಾ ಮತ್ತು ಹುಲಿ ಆವರಣವನ್ನು ಕೊಡುಗೆ ನೀಡಿದ್ದಾರೆ. ಅವರು ಈ ಉದ್ಯಾನದ ಬಗ್ಗೆ ಅಪಾರ ಕಾಳಜಿ ಹೊಂದಿದ್ದಾರೆ. ಹೀಗಾಗಿ, ಆನೆ ಮರಿಗೆ ಅವರ ಹೆಸರು ಇಡಲಾಗಿದೆ.
ಅಲ್ಲದೆ, ಕುಡಿಯುವ ನೀರಿನ ಟ್ಯಾಂಕ್ ನಿರ್ಮಿಸಿ ಕೊಡುವ ಮೂಲಕ ಉದಾರತೆ ಮೆರೆದ ಸುಧಾಮೂರ್ತಿ ಅವರ ಹೆಸರನ್ನಿಡಲು ಸಂತಸವಾಯಿತೆಂದು ವನಶ್ರೀ ತಿಳಿಸಿದ್ದಾರೆ.