ಬೆಂಗಳೂರು: ಪಿಒಪಿ (ಪ್ಲಾಸ್ಟರ್ ಆಫ್ ಪ್ಯಾರಿಸ್) ಗಣೇಶ ಮೂರ್ತಿಗಳನ್ನು ನಿಷೇಧಿಸಿದ್ದರೂ ಕುಂಬಳಗೋಡಿನಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣ ಮಾಡುತ್ತಿದ್ದ ವಿನಾಯಕ ಅಂಡ್ ಕೋ ಗೋಡೌನ್ಗೆ ಕೆಎಸ್‌ಪಿಸಿಬಿ ಅಧ್ಯಕ್ಷರು, ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಿ ಎಚ್ಚರಿಕೆ ನೀಡಿದ್ರು.
ಇಲ್ಲಿನ ಉಗ್ರಾಣಗಳಲ್ಲಿ ಮೂರ್ತಿಗಳನ್ನು ಗಮನಿಸಿದ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಕೆ. ಸುಧಾಕರ್ ಅರೆಕ್ಷಣ ದಂಗಾದರು. ಈ ವಿಗ್ರಹಗಳನ್ನು ಸಂಪೂರ್ಣವಾಗಿ ಮುಚ್ಚುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ರು. ಜೊತೆಗೆ ಯಾವುದೇ ಕಾರಣಕ್ಕೂ ಇಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಬಾರದು ಎಂದು ಖಡಕ್ ಆದೇಶ ಕೊಟ್ಟರು.
ಗೊಲ್ಲಹಳ್ಳಿ, ತಿಟ್ಟನಹಳ್ಳಿ, ಕೆಂಗೇರಿ ಭಾಗದಲ್ಲಿ ಪಿಓಪಿ ಗಣೇಶ ಸಂಗ್ರಹಿಸಿದ್ದ ಗೋಡೌನ್‌ಗಳಿಗೂ ಕೆಎಸ್‌ಪಿಸಿಬಿ ಅಧಿಕಾರಿಗಳು ವಿಸಿಟ್ ಕೊಟ್ಟರು.
ಸೆಪ್ಟೆಂಬರ್ 2ರಂದು ಗಣೇಶ ಚತುರ್ಥಿ ನಿಮಿತ್ತ ಮಣ್ಣಿನ ಗಣೇಶ ಮೂರ್ತಿಗಳನ್ನು ಮಾತ್ರ ಪ್ರತಿಷ್ಠಾಪಿಸಬೇಕೆಂದು ಈ ಮೊದಲು ಬಿಬಿಎಂಪಿ ವತಿಯಿಂದಲೂ ಸೂಚನೆ ನೀಡಲಾಗಿತ್ತು. ಬಣ್ಣ ಬಣ್ಣದ ಗಣೇಶ ಮೂರ್ತಿಗಳನ್ನು ನಗರದ ಕೆರೆಗಳಲ್ಲಿ ವಿಸರ್ಜಿಸುವುದರಿಂದ ಕೆರೆಗಳ ನೀರು ಕಲುಷಿತಗೊಳ್ಳುವ ಕಾರಣಕ್ಕೆ ಕೆಲ ವರ್ಷಗಳ ಹಿಂದೆಯೇ ನಿಷೇಧ ಹೇರಲಾಗಿತ್ತು. ಆದ್ರೂ, ಅನಧಿಕೃತವಾಗಿ ಮೂರ್ತಿ ನಿರ್ಮಾಣ ಮಾಡಿದ ಹಿನ್ನೆಲೆಯಲ್ಲಿ ಇಂದು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ.
ಮಂಡಳಿ ಅಧ್ಯಕ್ಷರಿಂದ ಖಡಕ್ ವಾರ್ನಿಂಗ್:
ಕೆ. ಸುಧಾಕರ್ ಮಾತನಾಡಿ, ಇವತ್ತು ಹಲವು ಗೋಡಾನುಗಳಿಗೆ ಭೇಟಿ ಕೊಟ್ಟಿದ್ದೇವೆ. ಸಾವಿರಾರು ಮೂರ್ತಿಗಳು ಇಲ್ಲಿನೆ. ಈ ಮೂರ್ತಿಗಳು ಪರಿಸರಕ್ಕೆ ಹಾನಿಕಾರಕವಾಗಿವೆ. ಇವತ್ತಿನಿಂದಲೇ ಎಲ್ಲಾ ಪಿಓಪಿ ಮೂರ್ತಿಗಳನ್ನು ವಶಕ್ಕೆ ಪಡೆಯುತ್ತೇವೆ. ಇನ್ಮುಂದೆ ಪಿಓಪಿ ಗಣೇಶ ಮಾಡಿದ್ರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದು ಎಚ್ಚರಿಸಿದ್ರು.