ಬೆಂಗಳೂರು: ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣ ಯೋಜನೆ ಹಿನ್ನೆಲೆಯಲ್ಲಿ ಪರಿಸರ ಪರಿಣಾಮ ಅಧ್ಯಯನಕ್ಕೆ ಆನ್ಲೈನ್ ಮೂಲಕ ಸಾರ್ವಜನಿಕ ಆಕ್ಷೇಪಣೆ ಸ್ವೀಕರಿಸಲು ಮುಂದಾಗಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಕ್ರಮಕ್ಕೆ ತಡೆ ನೀಡಲು ಹೈಕೋರ್ಟ್ ನಿರಾಕರಿಸಿದೆ.
ಆನ್ಲೈನ್ ಮೂಲಕ ಆಕ್ಷೇಪಣೆ ಸಲ್ಲಿಕೆಗೆ ಅವಕಾಶ ಕಲ್ಪಿಸಿರುವ ಬಿಡಿಎ ಕ್ರಮ ಪ್ರಶ್ನಿಸಿ ಅನುಕ್ಷಾ ಗುಪ್ತ ಹಾಗೂ ಮತ್ತಿತರ ಕಾನೂನು ಪದವಿ ವಿದ್ಯಾರ್ಥಿಗಳು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ್ ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಈ ವೇಳೆ ಅರ್ಜಿದಾರರ ಪರ ವಕೀಲರು ಆನ್ಲೈನ್ ಮೂಲಕ ಆಕ್ಷೇಪಣೆ ಸ್ವೀಕರಿಸಲು ಮುಂದಾಗಿರುವ ಬಿಡಿಎ ಕ್ರಮಕ್ಕೆ ತಡೆ ನೀಡಬೇಕು ಎಂದು ಮನವಿ ಮಾಡಿದರು. ಮನವಿ ತಿರಸ್ಕರಿಸಿದ ಪೀಠ ಈಗಾಗಲೇ ಪ್ರಕ್ರಿಯೆ ಆರಂಭವಾಗಿದೆ ಈ ಹಂತದಲ್ಲಿ ತಡೆ ನೀಡಲು ಸಾಧ್ಯವಿಲ್ಲ ಎಂದು ತಿಳಿಸಿತು. ಆದರೆ, ಯೋಜನೆಗೆ ಸಂಬಂಧಿಸಿದ ಪರಿಸರ ಪರಿಣಾಮ ಅಧ್ಯಯನ ವರದಿ ಆಧರಿಸಿ ಮುಂದಿನ ಯಾವುದೇ ಕ್ರಮ ಜರುಗಿಸ ಬಾರದು ಎಂದು ಸೂಚಿಸಿತು.
ಹಾಗೆಯೇ, ಅರ್ಜಿಗೆ ಆಕ್ಷೇಪಣೆ ಸಲ್ಲಿಸುವಂತೆ ಸರ್ಕಾರ ಹಾಗೂ ಬಿಡಿಎಗೆ ನೋಟಿಸ್ ಜಾರಿಗೊಳಿಸಿ ವಿಚಾರಣೆಯನ್ನು ಅಕ್ಟೋಬರ್ 15ಕ್ಕೆ ಮುಂದೂಡಿತು.
ಅರ್ಜಿದಾರರ ಕೋರಿಕೆ: ಎಂಟು ಪಥದ ಪೆರಿಫೆರಲ್ ರಿಂಗ್ ರೋಡ್ ನಿರ್ಮಾಣಕ್ಕೆ ಯೋಜನೆ ರೂಪಿಸಲು ಮುಂದಾಗಿರುವ ಬಿಡಿಎ ಈ ಸಂಬಂಧ ಪರಿಸರ ಪರಿಣಾಮ ಅಧ್ಯಯನಕ್ಕೆ ಆನ್ಲೈನ್ ಅಪ್ಲಿಕೇಷನ್ ಮೂಲಕ ಸಾರ್ವಜನಿಕ ಆಕ್ಷೇಪಣೆಗಳನ್ನು ಆಲಿಸಲು ಮುಂದಾಗಿದೆ. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿರುವ ಕಾನೂನು ವಿದ್ಯಾರ್ಥಿಗಳು ಬಿಡಿಎ ಕೈಗೊಂಡಿರುವ ಆನ್ಲೈನ್ ಪ್ರಕ್ರಿಯೆಯಲ್ಲಿ ದುರ್ಬಲ ವರ್ಗದವರು ಪಾಲ್ಗೊಳ್ಳಲು ಸಾಧ್ಯವಾಗುವುದಿಲ್ಲ. ಕೇವಲ ತಾಂತ್ರಿಕವಾಗಿ ತಿಳಿದವರು ಮತ್ತು ಮೇಲ್ವರ್ಗದ ಜನ ಮಾತ್ರ ಭಾಗವಹಿಸಬಹುದು. ಯೋಜನೆಯ ಕುರಿತು ಅಭಿಪ್ರಾಯ ಹೇಳಲು ಎಲ್ಲ ವರ್ಗದವರಿಗೂ ಅವಕಾಶ ನೀಡಬೇಕು. ಹೀಗಾಗಿ ಆನ್ಲೈನ್ ಮೂಲಕ ಸಾರ್ವಜನಿಕ ಆಕ್ಷೇಪಣೆಗಳನ್ನು ಸಲ್ಲಿಸಲು ಮುಂದಾಗಿರುವ ಬಿಡಿಎ ಕ್ರಮಕ್ಕೆ ತಡೆ ನೀಡಬೇಕು ಎಂದು ಅರ್ಜಿದಾರರು ಕೋರಿದ್ದಾರೆ.