ನೆಲಮಂಗಲ : ಕಳೆದ 15 ವರ್ಷದಿಂದ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸಿ ವರ್ಗಾವಣೆಗೊಂಡ ಶಿಕ್ಷಕರನ್ನು ಕಳಿಸಿಕೊಡಲು ಮಕ್ಕಳು ಕಣ್ಣೀರು ಹಾಕಿದ ಘಟನೆ ನೆಲಮಂಗಲ ತಾಲೂಕಿನ ಲಕ್ಕೂರು ಸರ್ಕಾರಿ ಶಾಲೆಯಲ್ಲಿ ನಡೆದಿದೆ.
ಗಂಗಮಲ್ಲಯ್ಯ ಎಂಬ ಶಿಕ್ಷಕ ವಯಸ್ಸಾದ ತಂದೆ-ತಾಯಿ ನೋಡಿಕೊಳ್ಳುವ ಕಾರಣಕ್ಕೆ ತಮ್ಮ ಸ್ವಗ್ರಾಮದ ಬಳಿಯ ಶಾಲೆಗೆ ಪರಸ್ಪರ ವರ್ಗಾವಣೆ ಮಾಡಿಕೊಂಡಿದ್ದರು. ವರ್ಗಾವಣೆಯ ವಿಷಯ ಶಾಲಾ ಮಕ್ಕಳಿಗೆ ಗೊತ್ತಿರಲಿಲ್ಲ. ಮಕ್ಕಳಿಗೆ ಗೊತ್ತಾಗದಂತೆ ಶಾಲೆಯ ಶಿಕ್ಷಕರೇ ಗಂಗಮಲ್ಲಯ್ಯನವರಿಗೆ ಬೀಳ್ಕೊಡುಗೆ ನೀಡಿದ್ದರು.
ತಮ್ಮ ಮೆಚ್ಚಿನ ಶಿಕ್ಷಕರ ವರ್ಗಾವಣೆ ಸುದ್ದಿ ತಿಳಿದ ಶಾಲೆಯ 125 ಮಕ್ಕಳು ಸಾಕಷ್ಟು ನೊಂದುಕೊಂಡಿದ್ದರು. ಶಿಕ್ಷಕರನ್ನು ನೋಡದ ಹೊರತು ಊಟ ಮಾಡುವುದಿಲ್ಲವೆಂದು ಹಠ ಹಿಡಿದರು. ಮಕ್ಕಳ ಹಠಕ್ಕೆ ಮಣಿದ ಪೋಷಕರು, ವರ್ಗಾವಣೆಯಾದ ಶಿಕ್ಷಕರಿಗೆ ಮನವಿ ಮಾಡಿ ಮಕ್ಕಳನ್ನು ಭೇಟಿ ಮಾಡಿ ಎಂದು ವಿನಂತಿಸಿದರು.
ನಂತರ ಶಾಲೆಗೆ ಭೇಟಿ ನೀಡಿದ ಗಂಗಮಲ್ಲಯ್ಯನವರನ್ನ ಸುತ್ತುವರೆದ ಮಕ್ಕಳು, ಮೇಷ್ಟ್ರೇ ನಮ್ಮ ಶಾಲೆ ಬಿಟ್ಟು ಹೋಗ್ಬೇಡಿ ಎಂದು ಕಣ್ಣೀರು ಹಾಕಿದ್ದಾರೆ. ಮಕ್ಕಳ ಮುಗ್ಧ ಪ್ರೀತಿ ಕಂಡು ಶಿಕ್ಷಕ ಗಂಗಮಲ್ಲಯ್ಯ ಕೂಡ ಭಾವುಕರಾದರು.
ಇದನ್ನೂ ಓದಿ: ದಿನಕ್ಕೆ ಆರು ಬಾರಿ ಸ್ನಾನ ಮಾಡುವ ಪತ್ನಿ: ಅತಿರೇಕದ ಸ್ವಚ್ಛತೆ ಸಹಿಸದೆ ಠಾಣೆ ಮೆಟ್ಟಿಲೇರಿದ ಪತಿ