ಬೆಂಗಳೂರು: ರಾಜ್ಯದಲ್ಲಿ ಸಾಂಕ್ರಾಮಿಕ ಕೊರೊನಾ ಸೋಂಕಿನ ಮೊದಲ ಹಾಗೂ ಎರಡನೇ ಅಲೆಯ ಪರಿಣಾಮ, ವರ್ಷಗಳ ಕಾಲ ಶಾಲೆಗಳ ಬಾಗಿಲು ಮುಚ್ಚಿದ್ದವು. ಇದೀಗ ಎರಡನೇ ಅಲೆ ತೀವ್ರತೆ ಕಡಿಮೆಯಾದ ಬೆನ್ನಲ್ಲೇ, ಸಾರ್ವಜನಿಕ ಶಿಕ್ಷಣ ಇಲಾಖೆಯು ಪೂರ್ಣ ಪ್ರಮಾಣದಲ್ಲಿ ತರಗತಿಯನ್ನ ಆರಂಭಿಸಿದೆ.
ಮೊದಲು ಪ್ರಾಯೋಗಿಕವಾಗಿ ಆಗಸ್ಟ್ 23 ರಂದು 9-10 ನೇ ತರಗತಿ ಆರಂಭಿಸಿ ಬಳಿಕ ಸೆಪ್ಟೆಂಬರ್ 06 ರಂದು 6 ರಿಂದ 8 ನೇ ತರಗತಿಯ ಭೌತಿಕ ತರಗತಿ ಶುರುವಾಯ್ತು. ಅಕ್ಟೋಬರ್ 25 ರಿಂದ 1-5 ಹಾಗೂ ನವೆಂಬರ್ 8ರಿಂದ ಎಲ್ ಕೆ ಜಿ ಯುಕೆಜಿ ತರಗತಿಗಳು ಶುರುವಾಗಿವೆ.
ಇದೀಗ ಪೂರ್ಣ ಪ್ರಮಾಣದಲ್ಲಿ ತರಗತಿಗಳು ಆರಂಭವಾದರೂ ಶಾಲೆಗೆ ಬರಲು ವಿದ್ಯಾರ್ಥಿಗಳು ಹಿಂದೇಟು ಹಾಕುತ್ತಿದ್ದರು. ಹೈಸ್ಕೂಲ್ ಹಾಜರಾತಿ ಪ್ರಮಾಣ ತಕ್ಕ ಮಟ್ಟಿಗೆ ಇದ್ದರೂ ಪ್ರಾಥಮಿಕ ತರಗತಿಯ ಹಾಜರಾತಿ ನಿರೀಕ್ಷೆಯಷ್ಟು ಏರಿಕೆ ಕಂಡಿಲ್ಲ. ಕೋವಿಡ್ ಭೀತಿ ಒಂದು ಕಡೆಯಾದರೆ ಮತ್ತೊಂದು ಕಡೆ ಭೌತಿಕ ತರಗತಿಗೆ ಬಂದರೆ ಶುಲ್ಕ ಕಟ್ಟುವ ಭೀತಿಗೆ ಪೋಷಕರು ಮನಸ್ಸು ಮಾಡ್ತಿಲ್ಲ.
ಈ ಕುರಿತು ಖಾಸಗಿ ಶಾಲಾ ಆಡಳಿತ ಮಂಡಳಿಗಳ ಒಕ್ಕೂಟ ಕಾರ್ಯದರ್ಶಿ (ಕ್ಯಾಮ್ಸ್)ಶಶಿಕುಮಾರ್ ಮಾತನಾಡಿದ್ದು, ರಾಜ್ಯಾದ್ಯಂತ ಖಾಸಗಿ ಅನುದಾನರಹಿತ ಶಿಕ್ಷಣ ಸಂಸ್ಥೆ ಅನುದಾನಿತ ಹಾಗೂ ಸರ್ಕಾರಿ ಶಾಲೆಗಳು ಪ್ರಾರಂಭವಾಗಿವೆ. ಬೆರಳೆಣಿಕೆ ಶಾಲೆಗಳಲ್ಲಿ ಮಾತ್ರ ಪೂರ್ತಿ ದಾಖಲಾತಿ ಪ್ರಕ್ರಿಯೆಯಾಗಿದೆ. ಆದರೆ ಬಹುತೇಕ ಶಾಲೆಗಳಲ್ಲಿ ಪಾಲಕ-ಪೋಷಕರು ಮಕ್ಕಳ ದಾಖಲಾತಿಯೇ ಮಾಡಿಲ್ಲ. ಕಾರಣ ಕೋವಿಡ್ ನೆಪವೊಂದು ಕಡೆಯಾದರೆ ಶಾಲೆಗೆ ಕಳುಹಿಸಿದರೆ ಶುಲ್ಕ ಕಟ್ಟಬೇಕು ಎಂಬ ಕಾರಣಕ್ಕೆ ಆನ್ ಲೈನ್ ನಲ್ಲೇ ಉಳಿದಿದ್ದಾರೆ. ಖಾಸಗಿ ಶಾಲೆ ಆರಂಭವಾಗಿರುವುದೇ ಶುಲ್ಕ ವಸೂಲಿಗೆ, ಲಾಬಿ ಮಾಡಲು ಎಂಬ ಮನಸ್ಥಿತಿ ಪೋಷಕರಲ್ಲಿದೆ. ನಿರಂತರ ಕಲಿಕೆಗೆ ಪೋಷಕರೇ ಅಡ್ಡಗಾಲು ಹಾಕುತ್ತಿದ್ದಾರೆ. ಇದನ್ನ ಅರ್ಥ ಮಾಡಿಕೊಂಡು ಕನಿಷ್ಠ ಶುಲ್ಕ ಕೊಟ್ಟು, ನಿರಂತರ ಕಲಿಕೆಗೆ ಅನುವು ಮಾಡಿಕೊಡಬೇಕಿದೆ ಎಂದರು.
ನಾವು ಯಾರಿಗೂ ಬಲವಂತ ಮಾಡಲ್ಲ :
ಇನ್ನೂ ಈ ಕುರಿತು ಶಿಕ್ಷಣ ಸಚಿವ ನಾಗೇಶ್ ಮಾತನಾಡಿ, ಮಕ್ಕಳನ್ನ ದೃಷ್ಟಿಯಲ್ಲಿಟ್ಟುಕೊಂಡು, ಮನೆಯಲ್ಲೇ ಇರುವುದರಿಂದ ಅವ್ರ ಆಗುತ್ತಿರುವ ಮಾನಸಿಕ ಬದಲಾವಣೆ ಗಮನದಲ್ಲಿಟ್ಟುಕೊಂಡು ತಜ್ಞರ ಅಭಿಪ್ರಾಯದಂತೆ ಶಾಲೆಗಳನ್ನ ತೆರೆದಿದ್ದೇವೆ. ಯಾರಿಗೆ ತಮ್ಮ ಮನೆಯಲ್ಲಿದ್ದುಕೊಂಡೇ ವ್ಯವಸ್ಥೆ ಮಾಡುವ ಶಕ್ತಿ ಇದ್ಯೋ ಆ ಪೋಕಷರು ತಮ್ಮ ಮಕ್ಕಳಿಗೆ ಬೇರೆ ವ್ಯವಸ್ಥೆ ಮಾಡಿದ್ದಾರೆ. ಇಲ್ಲದವರು ಶಾಲೆಗೆ ಕಳುಹಿಸಿದ್ದು ಆ ಮಕ್ಕಳು ಚೆನ್ನಾಗಿ ಕಲಿಯುತ್ತಿದ್ದು ಖುಷಿ ಪಡುತ್ತಿದ್ದಾರೆ ಎಂದು ತಿಳಿಸಿದರು.
ಶಾಲೆಗೆ ಕಳಿಸಲು ಯಾರಿಗೆ ಕೋವಿಡ್ ಭೀತಿ ಇದ್ಯೋ ಅವರಿಗೆ ಸರ್ಕಾರ ಸಹಿತ ಕಡ್ಡಾಯ ಮಾಡಿಲ್ಲ. ಪ್ರತಿಯೊಬ್ಬರಿಗೂ ಅವಕಾಶ ಕೊಟ್ಟಿದ್ದೀವಿ, ಯಾರಿಗೂ ಬಲವಂತ ಮಾಡಿಲ್ಲ. ಭೌತಿಕ ತರಗತಿ ಹಾಜರಾತಿ ಕಡ್ಡಾಯ ಮಾಡಿಲ್ಲ ಹೀಗಾಗಿ ಇದು ತಪ್ಪು ಸರಿ ಪ್ರಶ್ನೆ ಬರೋದಿಲ್ಲ ಅಂತ ತಿಳಿಸಿದರು.
ಪ್ರಾಥಮಿಕ ತರಗತಿ ಹಾಜರಾತಿ :
- 1ನೇ ತರಗತಿ 10,57,928 ಪೈಕಿ 3,47,170 ವಿದ್ಯಾರ್ಥಿಗಳು ಹಾಜರು (32.82)%
- 2ನೇ ತರಗತಿಗೆ 10,18,858 ಪೈಕಿ 3,00,543 ವಿದ್ಯಾರ್ಥಿಗಳು ಹಾಜರು (29.50) %
- 3ನೇ ತರಗತಿಗೆ 10,58,269 ಪೈಕಿ 2,96,307 ವಿದ್ಯಾರ್ಥಿಗಳು ಹಾಜರು (28.00)%
- 4ನೇ ತರಗತಿಗೆ 10, 89,986 ಪೈಕಿ 3,10,181 ವಿದ್ಯಾರ್ಥಿಗಳು ಹಾಜರು (28.46)%
- 5ನೇ ತರಗತಿಗೆ 10,44,985 ಪೈಕಿ 2,99,156 ವಿದ್ಯಾರ್ಥಿಗಳು ಹಾಜರು (28.63)%
- 6ನೇ ತರಗತಿ 10,52,050 ಪೈಕಿ 3,50,423 ವಿದ್ಯಾರ್ಥಿಗಳು ಹಾಜರು(33.31)
- 7ನೇ 10,63,863 ಪೈಕಿ 3,51,481 (33.04%) ಹಾಜರು
ಪ್ರೌಢ ಶಾಲಾ ತರಗತಿ ಹಾಜರಾತಿ :
- 8ನೇ ತರಗತಿ 10,46,505 ಪೈಕಿ 4,37,735 (41.83%) ಹಾಜರು
- 9ನೇ ತರಗತಿ 10,02,974 ಪೈಕಿ 4,48,559 (44.72 %) ಹಾಜರು
- 10ನೇ ತರಗತಿ 9,83,951 ಪೈಕಿ 4,40,178 ವಿದ್ಯಾರ್ಥಿಗಳು ಹಾಜರು 44.74%