ಬೆಂಗಳೂರು: ಯುಜಿಸಿ ಸೂಚನೆಯಂತೆ ಈಗಾಗಲೇ ಮುಂದಿನ ತರಗತಿಗಳಿಗೆ ಬಡ್ತಿ ನೀಡಿದ್ದರೂ, ಮತ್ತೆ ಮಧ್ಯಂತರ ಸೆಮಿಸ್ಟರ್ಗಳಿಗೆ ಪರೀಕ್ಷೆ ನಡೆಸುವ ನಿಟ್ಟಿನಲ್ಲಿ ಕರ್ನಾಟಕ ರಾಜ್ಯ ಕಾನೂನು ವಿವಿ ಹೊರಡಿಸಿರುವ ಸುತ್ತೋಲೆ ಪ್ರಶ್ನಿಸಿ ಇಬ್ಬರು ಕಾನೂನು ವಿದ್ಯಾರ್ಥಿಗಳು ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ.
ಬೆಂಗಳೂರಿನ ಸೇಂಟ್ ಜೋಸೆಫ್ ಕಾನೂನು ಕಾಲೇಜಿನ ಮೂರನೇ ವರ್ಷದ ರುತ್ವಿಕ್ ಹಾಗೂ ಮೈಸೂರಿನ ಎಸ್.ಬಿ.ಆರ್.ಆರ್. ಮಹಾಜನ್ ಕಾನೂನು ಕಾಲೇಜಿನ ಎರಡನೇ ವರ್ಷದ ಹೆಚ್.ಎಸ್. ಅರುಣ್ ಕುಮಾರ್ ಎಂಬ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ದಾರೆ. ಕೊರೊನಾ ಕಾರಣದಿಂದ ಲಾಕ್ಡೌನ್ ಆದ ಬಳಿಕ ಕಾಲೇಜುಗಳು ನಡೆದಿಲ್ಲ. ಇನ್ನು ಆನ್ಲೈನ್ ಮೂಲಕ ತರಗತಿಗಳನ್ನು ನಡೆಸಿದ್ದರೂ, ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಇಂಟರ್ನೆಟ್ ಕೊರತೆ ಹಾಗೂ ಲ್ಯಾಪ್ಟಾಪ್, ಮೊಬೈಲ್ ಖರೀದಿಸಲಾಗದೆ ಪಾಠ ಕೇಳಲು ಸಾಧ್ಯವಾಗಿಲ್ಲ. ಇಂತಹ ಸಂದರ್ಭದಲ್ಲಿ ವಿವಿ ಪರೀಕ್ಷೆ ನಡೆಸಿದರೆ ಅದು ವಿದ್ಯಾರ್ಥಿಗಳಿಗೆ ಕಷ್ಟವಾಗಲಿದೆ ಎಂದು ವಿದ್ಯಾರ್ಥಿಗಳು ಅರ್ಜಿಯಲ್ಲಿ ತಿಳಿಸಿದ್ದಾರೆ.
ಲಾಕ್ಡೌನ್ ಸಮಯದಲ್ಲಿ ಕಾಲೇಜುಗಳನ್ನು ಏಕಾಏಕಿ ಮುಚ್ಚಿದ್ದರಿಂದ ವಿದ್ಯಾರ್ಥಿಗಳಿಗೆ ಲೈಬ್ರರಿಗಳಿಗೆ ತೆರಳಲು ಹಾಗೂ ಸಂಬಂಧಿಸಿದ ಪುಸ್ತಕಗಳನ್ನು ಪಡೆದುಕೊಳ್ಳಲು ಸಾಧ್ಯವಾಗಿಲ್ಲ. ಬರಿಗೈಯಲ್ಲಿ ಮನೆ ಸೇರಿರುವ ವಿದ್ಯಾರ್ಥಿಗಳಿಗೆ ಈಗ ಪರೀಕ್ಷೆ ನಡೆಸುವುದು ಸೂಕ್ತವಲ್ಲ. ಪರೀಕ್ಷೆ ಬರೆಯದೇ ಈ ಬಾರಿ ಪಾಸ್ ಮಾಡಿ ಮುಂದಿನ ತರಗತಿಗಳಿಗೆ ಬಡ್ತಿ ನೀಡಿದ್ದಾಗಿ ಹೇಳಿ, ಇದೀಗ ಪರೀಕ್ಷೆ ನಡೆಸಲು ಮುಂದಾಗಿರುವ ವಿವಿಯ ಕ್ರಮ ಸರಿಯಾದುದಲ್ಲ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ಕೊರೊನಾ ಪರಿಣಾಮದಿಂದಾಗಿ ಕಾಲೇಜುಗಳು ಸರಿಯಾಗಿ ನಡೆಯದ ಹಿನ್ನೆಲೆಯಲ್ಲಿ ಯುಜಿಸಿ ಕಳೆದ ಜುಲೈ 6ರಂದು ಮಾರ್ಗಸೂಚಿಗಳನ್ನು ಹೊರಡಿಸಿ ವಿದ್ಯಾರ್ಥಿಗಳನ್ನು ಪ್ರಸಕ್ತ ವರ್ಷದ ಆಂತರಿಕ ಮೌಲ್ಯಮಾಪನ ಹಾಗೂ ಹಿಂದಿನ ವರ್ಷ ಪಡೆದುಕೊಂಡ ಅಂಕಗಳ ಆಧಾರದ ಮೇಲೆ ಪಾಸು ಮಾಡುವಂತೆ ವಿವಿಗಳಿಗೆ ಸೂಚಿಸಿತ್ತು.
ಇದನ್ನು ರಾಜ್ಯ ಸರ್ಕಾರ ಬೆಂಬಲಿಸಿ ಜುಲೈ 10ರಂದು ರಾಜ್ಯದ ವಿವಿಗಳು ಯುಜಿಸಿ ಮಾರ್ಗಸೂಚಿಗಳಂತೆ ಅಂತಿಮ ವರ್ಷದ ವಿದ್ಯಾರ್ಥಿಗಳನ್ನು ಹೊರತುಪಡಿಸಿ, ಮಧ್ಯಂತರ ಸೆಮಿಸ್ಟರ್ ವಿದ್ಯಾರ್ಥಿಗಳಿಗೆ ಬಡ್ತಿ ನೀಡುವಂತೆ ಆದೇಶಿಸಿತ್ತು.
ಈ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ರಾಜ್ಯ ಕಾನೂನು ವಿವಿ ಪರೀಕ್ಷೆ ನಡೆಸಲು ಮುಂದಾಗಿರುವ ಕ್ರಮ ಸರಿಯಲ್ಲ ಎಂದು ವಿದ್ಯಾರ್ಥಿಗಳು ಇದೀಗ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಈ ಹಿಂದೆಯೂ ಕೆಲ ವಿದ್ಯಾರ್ಥಿಗಳು ಪರೀಕ್ಷೆ ನಡೆಸುವ ವಿವಿ ಕ್ರಮ ಪ್ರಶ್ನಿಸಿ ಅರ್ಜಿ ಸಲ್ಲಿಸಿದ್ದರು. ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಾಲಯ ಪರೀಕ್ಷೆ ನಡೆಸುವ ವಿಚಾರ ಸರ್ಕಾರ ಮತ್ತು ವಿವಿಗಳ ವಿವೇಚನೆಗೆ ಬಿಟ್ಟದ್ದು ಎಂದಿತ್ತು.