ಬೆಂಗಳೂರು : ಶಾಲಾ ತರಗತಿಯಲ್ಲಿ ಬೋರ್ಡ್ ಮೇಲೆ ಬರಹ ಬರೆದು ಮಕ್ಕಳನ್ನು ಅವಮಾನಿಸಿದ ಆರೋಪದ ಮೇಲೆ ನಗರದ ವಿದ್ಯಾಸಾಗರ್ ಶಾಲೆಯ ಶಿಕ್ಷಕಿಯನ್ನು ವಜಾ ಮಾಡಲಾಗಿದೆ. ಈ ಬಗ್ಗೆ ಪೋಷಕರು, ಚಂದ್ರಾಲೇಔಟ್ ಠಾಣೆಗೆ ದೂರು ನೀಡಿದ್ದರು.
ನಗರದ ಚಂದ್ರಾಲೇಔಟ್ನಲ್ಲಿರುವ ವಿದ್ಯಾಸಾಗರ್ ಇಂಗ್ಲಿಷ್ ಪಬ್ಲಿಕ್ ಶಾಲೆಯಲ್ಲಿ ಎಂದಿನಂತೆ ಮಕ್ಕಳು ತರಗತಿಗೆ ಬಂದಿದ್ದರು. ಪಾಠ ಮಾಡುತ್ತಿದ್ದ ಶಿಕ್ಷಕಿ, ವಿವಾದದ ಬರಹವನ್ನು ಬೋರ್ಡ್ ಮೇಲೆ ಬರೆದಿದ್ದಾರೆ ಎನ್ನಲಾಗಿದೆ. ಅದರ ಅರ್ಥವೇನು ಎಂಬುದಾಗಿ ವಿದ್ಯಾರ್ಥಿಗಳನ್ನು ಕೇಳಿದ್ದರು. ಅದಕ್ಕೆ ಆಕ್ಷೇಪ ವ್ಯಕ್ತಪಡಿಸಿದ್ದ ವಿದ್ಯಾರ್ಥಿಯೊಬ್ಬರು, ಬರಹ ಅಳಿಸುವಂತೆ ಒತ್ತಾಯಿಸಿದ್ದರು. ಅದೇ ವಿಚಾರಕ್ಕೆ ಮಾತಿಗೆ ಮಾತು ಬೆಳೆದಿತ್ತು ಎಂದು ತಿಳಿದು ಬಂದಿದೆ.
ಕೆಲ ವಿದ್ಯಾರ್ಥಿಗಳು, ಪೋಷಕರಿಗೆ ವಿಷಯ ತಿಳಿಸಿದ್ದರು. ಶಾಲೆಗೆ ಬಂದ ಪೋಷಕರು, ಶಿಕ್ಷಕಿ ವಿರುದ್ಧ ಗರಂ ಆದರು. ಶಾಲೆಯಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ಹೋಗಿದ್ದರು. ಪರಸ್ಪರ ಮಾತುಕತೆ ಮೂಲಕ ಸಮಸ್ಯೆ ಬಗೆಹರಿಸಿದರು. ನಂತರ, ಪೋಷಕರು ಠಾಣೆಗೆ ಬಂದು ದೂರು ನೀಡಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದರು.
ಡಿಡಿಪಿಐ ಸ್ಪಷ್ಟನೆ : ಹಿಜಾಬ್ ವಿಚಾರಕ್ಕೆ ಸ್ಕೂಲ್ ಬಳಿ ಪ್ರತಿಭಟನೆ ಆಗಿಲ್ಲ. ಶಿಕ್ಷಕಿಯೊಬ್ಬರು ಅಸಭ್ಯ ಪದ ಬಳಸಿದರು ಎನ್ನುವ ಆರೋಪ ಕೇಳಿ ಬಂದಿತ್ತು. ಈ ಸಂಬಂಧ ಶಿಕ್ಷಕರು ಮತ್ತು ಕೆಲ ಪೋಷಕರ ಜೊತೆ ಮಾತುಕತೆ ನಡೆಸಿದ್ದೇವೆ. 7ನೇ ತರಗತಿಯ ಮಕ್ಕಳಿಂದಲೂ ಏನಾಯ್ತು ಎಂದು ವಿಚಾರಿಸಿದ್ದೇವೆ.
ಶಿಕ್ಷಕಿಯ ಬಳಿಯೂ ನಾವು ವಿವರಣೆಯನ್ನು ಪಡೆದುಕೊಂಡಿದ್ದೇವೆ. ಯಾವುದೇ ದುರುದ್ದೇಶ, ಧರ್ಮ ನಿಂದನೆ ಮಾಡಿಲ್ಲ ಎಂದು ಹೇಳಿದ್ದಾರೆ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಬೈಲಾಂಜನಪ್ಪ ಸ್ಪಷ್ಟನೆ ನೀಡಿದ್ದರು.
ಶಿಕ್ಷಕಿ ಅಮಾನತು: ಈ ಬಗ್ಗೆ ಡಿಡಿಪಿಐ ಆಡಳಿತ ಮಂಡಳಿ, ಪೋಷಕರು, ಶಿಕ್ಷಕರ ಜೊತೆ ಸಭೆ ನಡೆಸಿದ್ದರು. ಇದೀಗ ಆಡಳಿತ ಮಂಡಳಿ ಶಿಕ್ಷಕಿಯನ್ನು ವಜಾ ಮಾಡಿದೆ. ಈ ಕುರಿತು ಪ್ರಿನ್ಸಿಪಾಲ್ ದೃಢಪಡಿಸಿದ್ದಾರೆ. ಬೋರ್ಡ್ ಮೇಲೆ ಶಿಕ್ಷಕಿ ಕೆಎಸ್ಎಲ್ ಎಂದು ಬರೆದಿದ್ದಕ್ಕೆ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ ಎಂದಿದ್ದಾರೆ.
ಇದನ್ನೂ ಓದಿ: ಕಮಿಷನ್ ಆರೋಪ: ಧರ್ಮಸ್ಥಳದಲ್ಲಿ ಆಣೆ ಪ್ರಮಾಣ ಮಾಡಿದ ಹರತಾಳು ಹಾಲಪ್ಪ - ಬೇಳೂರು ಗೋಪಾಲಕೃಷ್ಣ
ಕ್ರಮಕ್ಕೆ ವಿರೋಧ: ಶಿಕ್ಷಕಿಯನ್ನು ಕೆಲಸದಿಂದ ತೆಗೆದಿರುವುದಕ್ಕೆ ಕೆಲವು ಹಿಂದೂ ಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿವೆ. ಶಾಲೆಯ ಮುಂಭಾಗದಲ್ಲಿ ರಾಷ್ಟ್ರ ರಕ್ಷಣಾ ಪಡೆಯ ಪುನೀತ್ ಕೆರೆಹಳ್ಳಿ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಸರಿಯಾದ ವಿವರಣೆ ಕೇಳದೆ ಶಿಕ್ಷಕಿಯನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಶಿಕ್ಷಕಿಯನ್ನು ಕೆಲಸದಿಂದ ತೆಗೆದಿದ್ದು ತಪ್ಪು, ಅಮಾನತು ಮಾಡಬಹುದಿತ್ತು. ಶಿಕ್ಷಕಿಗೆ ನ್ಯಾಯ ಸಿಗುವವರೆಗೂ ಹೋರಾಟ ಮಾಡುತ್ತೇವೆ ಎಂದಿದ್ದಾರೆ.