ಬೆಂಗಳೂರು: ಪೋಷಕರಿಂದ ಒತ್ತಡ, ಶಿಕ್ಷಕರಿಂದ ಬೈಗುಳ, ಪರೀಕ್ಷೆಯಲ್ಲಿ ಫೇಲಾದೆ ಎಂಬ ಮಕ್ಕಳಲ್ಲಿನ ಖಿನ್ನತೆ ಸೇರಿದಂತೆ ವಿವಿಧ ಕಾರಣಗಳಿಗಾಗಿ ಇತ್ತೀಚಿನ ದಿನಗಳಲ್ಲಿ ಶಾಲಾ ಮಕ್ಕಳು ಸೇರಿದಂತೆ ಎಲ್ಲಾ ವಯೋಮಾನದ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ರಾಜ್ಯದಲ್ಲಿ ಹೆಚ್ಚಾಗುತ್ತಿದೆ.
ಮಕ್ಕಳ ಸೂಕ್ಷ್ಮ ಮನಸ್ಸನ್ನು ಅರಿಯದ ಪೋಷಕರು ಹಾಗೂ ಬದಲಾಗದ ಶಿಕ್ಷಕರ ಬೋಧನಾ ಶೈಲಿಯಿಂದ ಒತ್ತಡಕ್ಕೊಳಕ್ಕಾಗಿ ಖಿನ್ನತೆಯಿಂದ ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದು ಆತಂಕಕಾರಿಯಾಗಿದೆ. ಈ ವರ್ಷದಲ್ಲಿ 117 ವಿದ್ಯಾರ್ಥಿಗಳು ಸಾವನ್ನಪ್ಪಿದ್ದಾರೆ. ಈ ಪೈಕಿ 59 ವಿದ್ಯಾರ್ಥಿಗಳು ಹಾಗೂ 58 ವಿದ್ಯಾರ್ಥಿನಿಯರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
2020ರಲ್ಲಿ 149, 2019ರಲ್ಲಿ 199, 2018ರಲ್ಲಿ 253 ವಿದ್ಯಾರ್ಥಿಗಳು ಸೇರಿದಂತೆ ಕಳೆದ ಐದು ವರ್ಷಗಳಲ್ಲಿ ಒಟ್ಟು 1058 ಸ್ಟೂಡೆಂಟ್ಸ್ ಜೀವನ ಅಂತ್ಯಗೊಳಿಸಿದ್ದಾರೆ. ಇದರಲ್ಲಿ 584 ಗಂಡು ಮಕ್ಕಳು ಹಾಗೂ 474 ಹೆಣ್ಣು ಮಕ್ಕಳು ಸಾವನ್ನಪ್ಪಿದ್ದಾರೆ ಎಂಬುದು ಪೊಲೀಸ್ ಇಲಾಖೆ ಅಂಕಿ-ಅಂಶಗಳಿಂದ ತಿಳಿದುಬಂದಿದೆ.
ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮೇಲೆ ಪೋಷಕರು ಹೇರುವ ಒತ್ತಡ, ರ್‍ಯಾಂಕ್ ಬರಲೇಬೇಕೆಂಬ ಹಪಾಹಪಿ, ಕಡಿಮೆ ಅಂಕ ಬಂದರೆ ಬೈಯುವುದು ಹೀಗೆ ಮಕ್ಕಳ ಮನೋಧೈರ್ಯ ಕುಗ್ಗಿಸುವ ಪ್ರಮಾಣ ಅಧಿಕವಾಗುತ್ತಿವೆ. ಇದರ ಬದಲಾಗಿ ಫೇಲಾಗಲು ಅಥವಾ ಕಡಿಮೆ ಅಂಕ ಬರಲು ಕಾರಣವೇನು ? ಹೆಚ್ಚು ಅಂಕ ಬರಲು ಮಕ್ಕಳನ್ನು ಹೇಗೆ ಹುರಿದುಂಬಿಸಬೇಕು ? ಬೆನ್ನು ತಟ್ಟಿ ಪ್ರೋತ್ಸಾಹದ ಮಾತುಗಳನ್ನು ಆಡುವ ಪೋಷಕರು ಹಾಗೂ ಶಿಕ್ಷಕರ ಪ್ರಮಾಣ ಕಡಿಮೆಯಾಗುತ್ತಿದೆ. ಇದು ಶಾಲಾಮಕ್ಕಳ ಸ್ಥಿತಿಯಾದರೆ, ಕಾಲೇಜು ವಿದ್ಯಾರ್ಥಿಗಳ ಮನಸ್ಥಿತಿ ಇದಕ್ಕಿಂತ ವಿಭಿನ್ನವಾಗಿದೆ.
ಪ್ರೌಢಶಿಕ್ಷಣ ಮುಗಿಸಿ ಕಾಲೇಜಿಗೆ ಎಂಟ್ರಿ ಕೊಡುವ ಹದಿಹರೆಯದ ವಿದ್ಯಾರ್ಥಿಗಳಿಗೆ ಬೇಡದ ವಸ್ತುಗಳ ಆಕರ್ಷಣೆ ಬಲುಬೇಗ ಮೈಗೂಡಿಸಿಕೊಳ್ಳುವ ಪ್ರವೃತ್ತಿ ಹೆಚ್ಚಾಗುತ್ತಿದೆ. ಸಿನಿಮಾಗಳಿಂದ ಪ್ರೇರೆಪಿತರಾಗುವ ಕಾಲೇಜು ವಿದ್ಯಾರ್ಥಿಗಳು ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ಕಡೆಗೆ ಆಕರ್ಷಿರಾಗಿ ದಾಸರಾಗುತ್ತಿದ್ದಾರೆ. ಹಣಕ್ಕಾಗಿ ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಿ ಕೆಲವರು ಜೈಲು ಸೇರಿದರೆ ಇನ್ನೂ ಹಲವಾರು ವಿದ್ಯಾರ್ಥಿಗಳು ಮಾರ್ಯಾದೆಗೆ ಅಂಜಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಇನ್ನೂ ಕಾಲೇಜು ಯುವತಿಯರು ಕಡಿಮೆ ಅಂಕ ಬಂದಿದ್ದಕ್ಕೆ ಹಾಗೂ ಪ್ರೀತಿ-ಪ್ರೇಮದಲ್ಲಿ ಬಿದ್ದು ವಿಫಲರಾಗಿ ಮನನೊಂದು ಸೂಸೈಡ್ ಮಾಡಿಕೊಂಡಿರುವ ಸಂಖ್ಯೆ ಹೆಚ್ಚಾಗಿವೆ.
ಪೋಷಕರು ಏನು ಮಾಡಬೇಕು? ಎಲ್ಲಾ ಮಕ್ಕಳಿಗಿಂತ ತಮ್ಮ ಮಕ್ಕಳು ಅಂಕ ಗಳಿಕೆಯಲ್ಲಿ ಮೊದಲ ಸ್ಥಾನ ಬರಬೇಕೆಂಬ ಉಮೇದಿನಲ್ಲಿ ಮಕ್ಕಳ ಮೇಲೆ ಪೋಷಕರು ಒತ್ತಡ ಹಾಕುತ್ತಿದ್ದಾರೆ. ಮುಖ್ಯವಾಗಿ ಕಲಿಕೆ ಜೊತೆಗೆ ಹೊರ ಜಗತ್ತಿನ ಸಂಪರ್ಕಕ್ಕೆ ತರಬೇಕಿದೆ. ಅಂದರೆ ಕಲಿಕೆ ಎಂಬ ನಾಲ್ಕು ಗೋಡೆಯಿಂದ ಹೊರಬಂದು ಮುಕ್ತವಾಗಿ ಹೊರ ವಾತಾವರಣ ಬೆಳೆಸಬೇಕಿದೆ. ಕೇಳದೆ ಎಲ್ಲವನ್ನು ಒದಗಿಸುವ ಪೋಷಕರು ಮಕ್ಕಳ ಜೊತೆ ಹೆಚ್ಚು ಸಮಯ ಕಳೆಯಬೇಕಿದೆ. ಯಾಂತ್ರಿಕೃತ ಜೀವನದಲ್ಲಿ ಮೊಬೈಲ್, ಟಿವಿ, ಹೀಗೆ ಎಲ್ಲವನ್ನು ಕೊಟ್ಟು ಸಂಬಂಧವನ್ನೇ ತಿಳಿಯದ ಹಾಗೆ ಮಾಡುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಸಣ್ಣ ನೋವಾದರೂ ಆತ್ಮಹತ್ಯೆ ಘಟನೆಗಳಿಗೆ ಕಾರಣರಾಗುತ್ತಿದ್ದಾರೆ.
ಶಿಕ್ಷಕರ ಮನೋಭಾವ ಬದಲಾಗಬೇಕು.. ಕಾಲಕ್ಕೆ ತಕ್ಕಂತೆ ಶಿಕ್ಷಕರ ಬೋಧನಾ ಶೈಲಿ ಬದಲಾಗಬೇಕಿದೆ. ತಾನು ಬೋಧಿಸುವ ವಿಧಾನವೇ ಶೇಷ್ಠ ಎಂಬ ಭ್ರಮೆಯಿಂದ ಹೊರಬರಬೇಕು. ಈ ಹಿಂದೆಗಿಂತ ಇತ್ತೀಚಿನ ವರ್ಷಗಳಲ್ಲಿ ಮಕ್ಕಳ ಮನೋಭಾವನೆ, ಅಭಿರುಚಿ ಹಾಗೂ ಗ್ರಹಿಕೆ ಹೀಗೆ ಮಕ್ಕಳ ಮನಃಶಾಸ್ತ್ರದ ಅರಿತು ವಿದ್ಯಾರ್ಥಿಗಳೊಂದಿಗೆ ವರ್ತಿಸಬೇಕಿದೆ. ಶಾಲೆಯ ಪ್ರತಿಷ್ಠೆಗಾಗಿ ಮಕ್ಕಳ ಮೇಲೆ ಮ್ಯಾನೇಜ್ಮೆಂಟ್ ಹೇರುವ ಒತ್ತಡ ಕಡಿಮೆಯಾಗಬೇಕಿದೆ. ಅನಗತ್ಯವಾಗಿ ಹೊಡೆಯುವುದು, ಬೈಯುವುದನ್ನು ನಿಯಂತ್ರಿಸಿ ಮಕ್ಕಳಿಗೆ ಅರ್ಥವಾಗುವ ಭಾಷೆಯಲ್ಲಿ ಬೋಧಿಸಿದರೆ ಇದರಿಂದ ವಿದ್ಯಾರ್ಥಿಗಳು ಕಲಿಕಾ ಶಕ್ತಿ ಹೆಚ್ಚಿಸಬಹುದಾಗಿದೆ ಎನ್ನುತ್ತಾರೆ ಮಕ್ಕಳ ತಜ್ಞ ಎನ್ ವಿ ವಾಸುದೇವ ಶರ್ಮಾ.
ಮಕ್ಕಳ ಹಕ್ಕು ರಕ್ಷಣಾ ಆಯೋಗ ಮಾಡಬೇಕಾಗಿರೋದು ಏನು? ಬದಲಾದ ಕಾಲಘಟ್ಟದಲ್ಲಿ ಪೋಷಕರು ಹಾಗೂ ಶಿಕ್ಷಕರು ಕಲಿಕಾ ವಿಷಯದಲ್ಲಿ ಮಕ್ಕಳ ಮೇಲೆ ಹೇರುತ್ತಿರುವ ಬಗ್ಗೆ ವೈಜ್ಞಾನಿಕವಾಗಿ ಅಧ್ಯಯನ ನಡೆಸಬೇಕಿದೆ. ಮುಖ್ಯವಾಗಿ ಆತ್ಮಹತ್ಯೆ ಮಾಡಿಕೊಂಡ ಪ್ರಕರಣಗಳ ಬಗ್ಗೆ ತನ್ನದೇ ಶೈಲಿಯಲ್ಲಿ ಪರಾಮರ್ಶೆ ನಡೆಸಿ ಆಗಿರುವ ಲೋಪದೋಷ ಬಗ್ಗೆ ವರದಿ ತಯಾರಿಸಿ ಶಾಲಾ-ಕಾಲೇಜುಗಳಲ್ಲಿ ವ್ಯಾಪಕವಾಗಿ ಜಾಗೃತಿ ಮೂಡಿಸಬೇಕಿದೆ. ಪೋಷಕರು, ಶಿಕ್ಷಕರು ಮಕ್ಕಳ ವಿಷಯದಲ್ಲಿ ಹೇಗೆ ವರ್ತಿಸಬೇಕು? ಹೇಗೆ ವರ್ತಿಸಬಾರದು ಎಂಬುದರ ಬಗ್ಗೆ ಕೈಪಿಡಿ ರಚಿಸಿ ನಿರಂತರ ಜಾಗೃತಿ ಮೂಡಿಸಬೇಕಿದೆ ಎಂದು ಈಟಿವಿ ಭಾರತ ಗೆ ವಾಸುದೇವ ಶರ್ಮಾ ತಿಳಿಸಿದ್ದಾರೆ.
ಓದಿ: ಬಳ್ಳಾರಿ: ಸಾಲಬಾಧೆಯಿಂದ ರಸ್ತೆ ಪಕ್ಕದಲ್ಲೇ ವಿಷ ಸೇವಿಸಿ ನಿವೃತ್ತ ಶಿಕ್ಷಕ ಆತ್ಮಹತ್ಯೆ