ಬೆಂಗಳೂರು: ಅವಮಾನ ತಾಳಲಾರದೇ ವಿದ್ಯಾರ್ಥಿಯೊಬ್ಬ ಕಟ್ಟಡದಿಂದ ಹಾರಿ ಆತ್ಮಹತ್ಯೆಗೆ ಶರಣಾದ ಪ್ರಕರಣಕ್ಕೆ ಸಂಬಂಧಪಟ್ಟಂತೆ, ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಖಾಸಗಿ ಕಾಲೇಜು ಆಡಳಿತ ಮಂಡಳಿ ವಿರುದ್ಧ ಗಿರಿ ನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತ ವಿದ್ಯಾರ್ಥಿ ಆದಿತ್ಯ ಪ್ರಭು ತಂದೆ ಗಿರೀಶ್ ಪ್ರಭು ನೀಡಿದ ದೂರು ಆಧರಿಸಿ ತನಿಖೆ ಕೈಗೊಂಡ ಪೊಲೀಸರು ವಿಚಾರಣೆ ವೇಳೆ ವಿದ್ಯಾರ್ಥಿ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವುದು ಕಂಡು ಬಂದಿದೆ ಎಂದು ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ಕಂಡು ಬಂದಿದೆ. ಈ ಹಿನ್ನೆಲೆ ಆಡಳಿತ ಮಂಡಳಿ ವಿರುದ್ಧ ಐಪಿಸಿ 306ರಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪ್ರಕರಣದ ವಿವರ: ಕನಕಪುರ ಮುಖ್ಯ ರಸ್ತೆಯ ಆರ್ಟ್ ಆಫ್ ಲಿವಿಂಗ್ ಬಳಿ ಅಪಾರ್ಟ್ಮೆಂಟ್ನಲ್ಲಿ ವಾಸವಾಗಿದ್ದ ಮಂಗಳೂರು ಮೂಲದ ಗಿರೀಶ್ ಪ್ರಭು ವೃತ್ತಿಯಲ್ಲಿ ಇಂಜಿನಿಯರ್. ತಮ್ಮ ಮಗನನ್ನು ಇಂಜಿನಿಯರಿಂಗ್ ಮಾಡಿಸಲು ಈ ಪ್ರತಿಷ್ಠಿತ ಕಾಲೇಜಿಗೆ ಸೇರಿಸಿದ್ದರು. 2ನೇ ಸೆಮಿಸ್ಟರ್ ಓದುತ್ತಿದ್ದ ಆದಿತ್ಯ ಪ್ರಭು ನಿನ್ನೆ ನಡೆದ ಪರೀಕ್ಷೆ ವೇಳೆ ನಕಲು ಮಾಡಲು ಹೋಗಿ ಶಿಕ್ಷಕರ ಕೈಗೆ ಸಿಕ್ಕಿಬಿದ್ದಿದ್ದ.
ಇದರಿಂದ ನೊಂದ ಆದಿತ್ಯ ಪ್ರಭು ಪೋಷಕರಿಗೆ ಹಾಗೂ ಸ್ನೇಹಿತರಿಗೆ ಗೊತ್ತಾದರೆ ಮಾರ್ಯಾದೆ ಹೋಗಲಿದೆ ಎಂದು ಭಾವಿಸಿ ಕೊಠಡಿಯಿಂದ ಹೊರ ಬಂದು ಕಾಲೇಜು ಕಟ್ಟಡದ 8ನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿದ್ದ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ್ದರಿಂದ ನನ್ನ ಮಗ ಸಾವನ್ನಪ್ಪಿದ್ದಾನೆ ಎಂದು ತಂದೆ ದೂರು ನೀಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾಲೇಜು ಆಡಳಿತ ಮಂಡಳಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದರು.
ಪ್ರಕರಣದ ಬಗ್ಗೆ ಪೊಲೀಸರು ಹೇಳಿದ್ದೇನು?: ಆದಿತ್ಯ ಪ್ರಭು ಪರೀಕ್ಷೆ ವೇಳೆ ನಕಲು ಮಾಡಲು ಮೊಬೈಲ್ ಬಳಕೆ ಮಾಡಿ ಪರೀಕ್ಷಾ ಮೇಲ್ವಿಚಾರಕರ ಕೈಗೆ ಸಿಕ್ಕಿಬಿದ್ದಿದ್ದರಂತೆ, ಅಲ್ಲದೆ ಕೌನ್ಸೆಲಿಂಗ್ ಮಾಡಿಸಿ ಪೋಷಕರಿಗೆ ತಿಳಿಸಲು ಕಾಲೇಜು ಆಡಳಿತ ವಿಭಾಗ ಸಿದ್ದತೆ ನಡೆಸುತಿತ್ತು. ಅವಮಾನದಿಂದ ಜರ್ಜರಿತನಾಗಿದ್ದ ಆದಿತ್ಯಗೆ ಪೋಷಕರಿಗೆ ತಿಳಿಸಿದರೆ ಬೈಯಲಿದ್ದಾರೆ ಎಂದು ಭಾವಿಸಿ ಪರೀಕ್ಷಾ ಕೇಂದ್ರದಿಂದ ಹೊರ ಬಂದು ಆತ್ಮಹತ್ಯೆಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ ಎಂದು ಅಧಿಕಾರಿ ಮಾಧ್ಯಮಕ್ಕೆ ತಿಳಿಸಿದ್ದರು.
ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಪೊಲೀಸರು ಶವವನ್ನ ಮರಣೋತ್ತರ ಪರೀಕ್ಷೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದರು. "ಸಿಸಿಟಿವಿ ದೃಶ್ಯ ಪರಿಶೀಲಿಸಲಾಗುವುದು, ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪೋಷಕರು ಸಹ ಇಲ್ಲೇ ಇದ್ದಾರೆ. ಕಾಲೇಜು ಆಡಳಿತ ಮಂಡಳಿಯವರ ಹೇಳಿಕೆ ಕೂಡಾ ಪಡೆಯಲಾಗಿದೆ. ತನಿಖೆ ನಂತರವೇ ಕಾನೂನು ಕ್ರಮ ಜರುಗಿಸಲಾಗುವುದು" ಎಂದು ನಗರ ದಕ್ಷಿಣ ವಿಭಾಗದ ಡಿಸಿಪಿ ಕೃಷ್ಣಕಾಂತ್ ತಿಳಿಸಿದ್ದರು.
ಇದನ್ನೂ ಓದಿ: ಪರೀಕ್ಷೆಯಲ್ಲಿ ನಕಲು ಮಾಡಲು ಹೋಗಿ ಸಿಕ್ಕಿಬಿದ್ದ.. ಅವಮಾನ ತಾಳಲಾರದೇ ಆತ್ಮಹತ್ಯೆಗೆ ಶರಣಾದ ವಿದ್ಯಾರ್ಥಿ