ಬೆಂಗಳೂರು: ಕೋವಿಡ್ ಎರಡನೇ ಅಲೆಯ ಸಂದರ್ಭದಲ್ಲಿ ಆಸ್ಪತ್ರೆಗಳು ಕೋವಿಡ್ ರೋಗಿಗಳಿಂದ ಸಂಪೂರ್ಣವಾಗಿ ಭರ್ತಿ ಆಗಿ ಹೋಗಿದ್ದು, ಅದ್ರಲ್ಲೂ ಸರಕಾರಿ ವೈದ್ಯಕೀಯ ಕಾಲೇಜುಗಳು ಅತಿ ಹೆಚ್ಚಿನ ಕೋವಿಡ್ ರೋಗಿಗಳಿಂದ ತುಂಬಿ ಹೋಗಿತ್ತು. ಇಂತಹ ಪರಿಸ್ಥಿತಿಯಲ್ಲೂ ನಿವಾಸಿ ವೈದ್ಯರು ಆಸ್ಪತ್ರೆಗಳ ಆಧಾರ ಸ್ತಂಭದಂತೆ ನಿಂತು ರಾಜ್ಯದ ಜನರನ್ನು ಹಾಗೂ ರಾಜ್ಯ ಸರಕಾರವನ್ನು ಭೀಕರ ಬಿಕ್ಕಟ್ಟಿನಿಂದ ಪಾರುಮಾಡಲು ಹಗಲಿರುಳು ಶ್ರಮಿಸಿದ್ದವು.
ಅನೇಕ ಸವಾಲು ಹಾಗೂ ಸಮಸ್ಯೆಗಳ ಜೊತೆಗೆ ನಾವೂ ಇದನ್ನು ಸಮರ್ಥವಾಗಿ ಎದುರಿಸಿ ಜನರ ಒಳಿತಿಗಾಗಿ ಸಹಕರಿಸಿದ್ದೇವೆ. ಹೀಗಿರುವಾಗ, ರಾಜ್ಯ ಸರಕಾರದ ಅಧಿಕಾರಿಗಳನ್ನು ಹಾಗೂ ರಾಜ್ಯದ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಮಂತ್ರಿಗಳನ್ನು ಸಾಕಷ್ಟು ಸಾರಿ ಲಿಖಿತ ಹಾಗೂ ಮೌಖಿಕ ಮನವಿಗಳನ್ನೂ ನೀಡಿದ್ದರೂ ಇನ್ನೂ ನಮ್ಮ ಬೇಡಿಕೆಗಳು ಈಡೇರಿಲ್ಲ ಅಂತ ಕರ್ನಾಟಕ ಅಸೋಸಿಯೇಷನ್ ಆಫ್ ರೆಸಿಡೆನ್ಸಿ ಡಾಕ್ಟರ್ಸ್ ಆಕ್ರೋಶ ಹೊರಹಾಕಿದ್ದಾರೆ.
ಕಳೆದ ಜುಲೈ 19ರಿಂದ ವಿವಿಧ ರೀತಿಯಲ್ಲಿ ಮುಷ್ಕರ ನಡೆಸುತ್ತಿದ್ದು, ಶೈಕ್ಷಣಿಕ ಶುಲ್ಕವನ್ನ ಪರಿಷ್ಕರಣೆ ಮಾಡುವಂತೆ ಒತ್ತಾಯಿಸಿದ್ದಾರೆ.
ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಕುರಿತಂತೆ ಸರಕಾರಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಸೀಟು ಪಡೆದವರಿಗೆ ತುಂಬಾ ತಾರತಮ್ಯವಾಗುತ್ತಿದೆ. ರಾಜ್ಯವು ಅತಿ ಹೆಚ್ಚು ಶೈಕ್ಷಣಿಕ ಶುಲ್ಕವನ್ನು ಪಡೆಯುತ್ತಿದೆ. ಹಾಗಾಗಿ ಇಂತಹ ಕೋವಿಡ್ ಪರಿಸ್ಥಿತಿಯಲ್ಲಿ ಹಗಲಿರುಳು ಶ್ರಮಿಸಿದ ನಿವಾಸಿ ವೈದ್ಯರುಗಳ (PG /SS) ಸೇವೆಯನ್ನು ಪರಿಗಣಿಸಿ ಈ ಮೂಲಕ ಶೈಕ್ಷಣಿಕ ಶುಲ್ಕ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿದ್ದಾರೆ.
ಹಾಗೇ, ಸತತವಾಗಿ ಹೆಚ್ಚುತ್ತಿರುವ ವೈದ್ಯರ ಮೇಲಿನ ಹಲ್ಲೆಗಳಲ್ಲಿ, ಇತ್ತೀಚಿನ ಪ್ರಕರಣ ರಾಯಚೂರು ವೈದ್ಯಕೀಯ ಕಾಲೇಜಿನಲ್ಲಿ ಕರ್ತವ್ಯ ನಿರತ ವೈದ್ಯರ ಮೇಲೆ ಹಲ್ಲೆಯಾಗಿದ್ದರೂ ಅಪರಾಧಿಗಳಿಗೆ ಯಾವುದೇ ಕಾನೂನು ಕ್ರಮ ಕೈಗೊಂಡಿಲ್ಲ. ಈ ಕುರಿತು ಶಾಶ್ವತವಾಗಿ ಒಂದೇ ಸಲ ಪರಿಹಾರವಾಗಿ ಲೀಗಲ್ ಸೆಲ್ ಸ್ಥಾಪಿಸಬೇಕು ಅಂತಲೂ ನಿವಾಸಿ ವೈದ್ಯರು ಮನವಿ ಮಾಡಿದ್ದಾರೆ.
ಕೋವಿಡ್ ಅಪಾಯ ಭತ್ಯೆ ಕೈ ಸೇರಿಲ್ಲ:
ಕೋವಿಡ್ ಅಪಾಯ ಭತ್ಯೆಯನ್ನು (ಕೋವಿಡ್ ರಿಸ್ಕ್ ಅಲ್ಲೋವನ್ಸ್) ಸರಕಾರ ಘೋಷಿಸಿ 3 ತಿಂಗಳ ಮೇಲಾದರೂ ಇನ್ನೂ ಒಂದು ರೂಪಾಯಿಯೂ ನಮ್ಮ ಕೈ ಸೇರಿಲ್ಲ ಅಂತಲೂ ವೈದ್ಯರು ಆರೋಪಿಸಿದ್ದಾರೆ.
ಈ ಎಲ್ಲ ಬೇಡಿಕೆಗಳನ್ನು ಸರಕಾರ ಕೇಳಿಯೂ ಮೂಕವಾಗಿದೆ. ನಿವಾಸಿ ವೈದ್ಯರನ್ನು ಕೋವಿಡ್ ಎರಡನೇ ಅಲೆಯಲ್ಲಿ ಸಂಪೂರ್ಣವಾಗಿ ಬಳಸಿಕೊಂಡು ನಮ್ಮ ಬೇಡಿಕೆಗಳನ್ನು ಹಾಗೂ ಒಳಿತನ್ನು ಅಲಿಸದಿರುವುದು ಖಂಡನೀಯ ಅಂತ ಆಕ್ರೋಶಿಸಿದ್ದಾರೆ.
ಈಗಾಗಲೇ ಸರ್ಕಾರದ ಗಮನ ಸೆಳೆಯಲು ಕಪ್ಪು ಪಟ್ಟಿ ಧರಿಸುವುದು, ಟ್ವಿಟ್ಟರ್ ಕ್ಯಾಂಪೇನ್, ಪ್ರತಿಭಟನೆ ಮಾಡುಲಾಗುತ್ತಿದೆ.