ಬೆಂಗಳೂರು: ಇಂದಿನಿಂದ ನಗರದಲ್ಲಿ ಕೋವಿಡ್ ಕಠಿಣ ನಿಯಮಗಳು ಜಾರಿಯಾಗುತ್ತಿದ್ದು, ಈ ಬೆನ್ನಲ್ಲೇ ಪೊಲೀಸ್ ಇಲಾಖೆ ತನ್ನ ಸಿಬ್ಬಂದಿಗೆ ಟಾರ್ಗೆಟ್ ಫಿಕ್ಸ್ ಮಾಡಿದೆ.
ನಗರದಲ್ಲಿ ಸಾರ್ವಜನಿಕ ಪ್ರದೇಶದಲ್ಲಿ ಒಡಾಡುವ ಜನರು ನಿಯಮ ಉಲ್ಲಂಘಿಸಿದರೆ ಮುಲಾಜಿಲ್ಲದೆ ಪ್ರಕರಣ ದಾಖಲಿಸಿ ದಂಡ ಸಂಗ್ರಹಿಸಬೇಕೆಂದು ಹಿರಿಯ ಪೊಲೀಸ್ ಅಧಿಕಾರಿಗಳು ಕಿರಿಯ ಪೊಲೀಸ್ ಸಿಬ್ಬಂದಿಗೆ ತಾಕೀತು ಮಾಡಿದ್ದಾರೆ.
ಕೇವಲ ಕಾನೂನು ಸುವ್ಯವಸ್ಥೆ ಸಿಬ್ಬಂದಿಗೆ ಮಾತ್ರ ಈ ನಿಯಮ ಅನ್ವಯವಾಗಿದೆ. ಬೆಂಗಳೂರು ನಗರ ವ್ಯಾಪ್ತಿಗೆ ಒಳಪಡುವ 110 ಪೊಲೀಸ್ ಸ್ಟೇಷನ್(ಕಾನೂನು ಸುವ್ಯವಸ್ಥೆ) ಸಿಬ್ಬಂದಿಗೆ ಆಯಾ ಠಾಣೆಯಿಂದ ಕನಿಷ್ಠ 50 ಕೇಸ್ ಹಾಕಬೇಕೆಂದು ತಿಳಿಸಲಾಗಿದೆ.
ಇದನ್ನೂ ಓದಿ: ಇಂದಿನಿಂದ ಕಠಿಣ ನಿಯಮ ಜಾರಿ; ಯಾವುದಕ್ಕೆ ಅವಕಾಶ, ಯಾವುದಕ್ಕೆ ನಿರ್ಬಂಧ?
ಮಾಸ್ಕ್ ಧರಿಸದೆ, ಸಾಮಾಜಿಕ ಅಂತರ ಕಾಯ್ದುಕೊಳ್ಳದ ಹಾಗೂ ಸಾರ್ವಜನಿಕ ಸ್ಥಳದಲ್ಲಿ ಸುಮ್ಮನೆ ಗಲಾಟೆ ಮಾಡುವವರಿಗೆ ದಂಡ ಹಾಕಲು ಸೂಚಿಸಲಾಗಿದೆ. ಮಾಸ್ಕ್ ಹಾಗೂ ಸಾಮಾಜಿಕ ಅಂತರ ಇಲ್ಲದಿದ್ರೆ 250 ರೂ. ದಂಡ ಹಾಕುವಂತೆ ಹೇಳಲಾಗಿದೆ. ಪ್ರತಿನಿತ್ಯ 110 ಠಾಣೆಗಳಿಂದ ಸಿಬ್ಬಂದಿ 50 ಕೇಸ್ ಹಾಕಿದರೆ 5500 ಕೇಸ್ ಆಗಲಿವೆ. 5500 ಕೇಸ್‌ಗಳಿಂದ ಒಂದೇ ದಿನಕ್ಕೆ 13.75 ಲಕ್ಷ ರೂ ದಂಡದ ಹಣ ಸಂಗ್ರಹವಾಗಲಿದೆ.